
ಬಿಜೆಪಿ ಪಾದಯಾತ್ರೆ ಯೂಸ್‌ಲೆಸ್: ಕುಮಾರಸ್ವಾಮಿ ಅಮೆರಿಕಾಗೆ ಹಾರಿದ್ದಕ್ಕೆ ಶಿವರಾಜ್ ತಂಗಡಗಿ ವ್ಯಂಗ್ಯ
ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ನಾಯಕರ ಪಶ್ಚಾತ್ತಾಪ ಯಾತ್ರೆ ಆರಂಭಕ್ಕೂ ಮೊದಲೇ ಪರಸ್ಪರ ಅಪಸ್ಪರ ಎದ್ದಿದೆ. ಬಿಜೆಪಿಯನ್ನು ಗುತ್ತಿಗೆ ಪಡೆದಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಪಾದಯಾತ್ರೆಯೇ ಯೂಸ್ ಲೆಸ್ ಅಂತೆ. ಅವರು ಅಮೆರಿಕಾಗೆ ಹೊರಡುವ ಮೂಲಕ ಬಿಜೆಪಿಗೆ ಕಾಪಳಮೋಕ್ಷ ಮಾಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ, ಜೆಡಿಎಸ್ ದೋಸ್ತಿ ನಾಯಕರು ಬಿ.ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಮತ್ತು ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಸೆಪ್ಟಂಬರ್ 1ರಿಂದ ಪಾದಾಯಾತ್ರೆ ಘೋಷಿಸಿದರು. ಈಗಾಗಲೇ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇನ್ನು ಸರ್ಕಾರದ ವಿರುದ್ಧ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಎಚ್. ಡಿ ಕುಮಾರಸ್ವಾಮಿ ಅವರು ಅಮೆರಿಕಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ದೊಸ್ತಿ ಪಾದಯಾತ್ರೆಯಲ್ಲಿ ಒಮ್ಮತ ವಿಲ್ಲ, ಇದು ಕಚ್ಚಾಟಕ್ಕೆ ಜಾಗ ಮಾಡಿಕೊಡಲಿದೆ ಎಂದು ಶಿವರಾಜ್ ತಂಗಡಗಿ ಅವರು ಸೋಮವಾರ ಪ್ರತಿಕ್ರಿಯಿಸಿದ್ದಾರೆ.
ನಾಡಿನ ಜನರಿಗೆ ಮಾಡಿದ ಅನ್ಯಾಯಗಳಿಗೆ ಪ್ರಾಯಶ್ಚಿತ್ತವೆಂಬಂತೆ ಬಿಜೆಪಿ ಹೊರಟಿರುವ ಪಾದಯಾತ್ರೆ, ಆರಂಭಕ್ಕೂ ಮುನ್ನವೇ ನಾಯಕರ ಒಳಜಗಳ ಮತ್ತು ನೆಪಗಳ ಯಾತ್ರೆಯಾಗಿ ಬದಲಾಗಿದೆ!. ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಳ್ಳಾರಿ ಗಣಿ ಲೂಟಿಕೋರರ ಜೊತೆ ಒಲ್ಲದ ಮನಸ್ಸಿನಲ್ಲಿ ಹೆಜ್ಜೆ ಹಾಕುವ ಸ್ಥಿತಿ. ಇನ್ನೊಂದೆಡೆ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಕಾಲು ನೋವು, ಮಂಡಿ ಬಾಧೆಯ ನೆಪ ಎಂದು ಅವರು ದೋಸ್ತಿ ಪಕ್ಷಗಳ ಪಾದಯಾತ್ರೆ ಬಗ್ಗೆ ಲೇವಡಿ ಮಾಡಿದರು.
ಬಿಜೆಪಿಯನ್ನು ಗುತ್ತಿಗೆ ಪಡೆದಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಪಾದಯಾತ್ರೆಯೇ ಯೂಸ್ ಲೆಸ್ ಅಂತೆ. ಅವರು ಸೆಪ್ಟಂಬರ್ 2ಕ್ಕೆ ಹೋಗಿ 12ಕ್ಕೆ ವಾಪಸ್ ಬರುತ್ತೇನೆ ಅಂಥ ಅಮೆರಿಕಾ ಟೂರ್ ಹೊರಟು ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಸಚಿವರು ಟಾಂಗ್ ನೀಡಿದ್ದಾರೆ.
ಬಿಜೆಪಿಯಲ್ಲಿ ಒಳ ಬಿರುಕು ಹೆಚ್ಚಿದೆ
ಪಾದಯಾತ್ರೆ ಹೆಸರಿನಲ್ಲಿ ಬಡ, ಅಮಾಯಕ ಕಾರ್ಯಕರ್ತರನ್ನು ಮಾತ್ರ ಬೀದಿಗಿಳಿಸುತ್ತಾರೆ. ನಾಯಕರು ಎಸಿ ರೂಮ್‌ನಲ್ಲಿ ಉಳಿಯಲು ಕುಂಟು ನೆಪ ಹುಡುಕುತ್ತಿರುವುದು ಬಿಜೆಪಿಯ ನಿಜವಾದ ಮುಖ. ಇಷ್ಟೇ ಅಲ್ಲ, ವಿಜಯೇಂದ್ರ-ಅಶೋಕ್ ಜಗನ್ನಾಥ ಭವನದಲ್ಲಿ ಪಾದಯಾತ್ರೆ ಸಭೆ ನಡೆಸುತ್ತಿದ್ದರೆ, ಅದೇ ಪಕ್ಷದ ಕೆಲ ನಾಯಕರುಗಳು ಬೆಂಗಳೂರಿನಲ್ಲೇ ಇದ್ದರೂ ಸಭೆಗೆ ಗೈರಾಗಿ ಪಾದಯಾತ್ರೆಗೆ ತಮ್ಮ ವಿರೋಧ ವ್ಯಕ್ತಿಪಡಿಸಿದ್ದಾರೆ. ಇವೆಲ್ಲವನ್ನು ನೋಡಿದರೆ ಬಿಜೆಪಿಯ ಒಳಬಿರುಕು ಎಷ್ಟು ಆಳವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ವಿವರಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂರಿನಿಂದ ಬಳ್ಳಾರಿವರೆಗಿನ ಪಾದಯಾತ್ರೆ ನಡೆಯಲಿದೆ. ಮಾರ್ಗದುದ್ದಕ್ಕೂ ಜನಬೆಂಬಲ ಸಿಗುವುದಿಲ್ಲ ಎಂಬ ಆತಂಕದಲ್ಲೇ, 'ಮಾಡೋಣವೇ ಬೇಡವೇ? ಎಂಬ ಗೊಂದಲದ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಬೀದಿಗಿಳಿಯುತ್ತಿದೆ. ಇದು ಪಾದಯಾತ್ರೆಯಲ್ಲ, ಬಿಜೆಪಿ ನಾಯಕರ ಪಶ್ಚಾತ್ತಾಪ, ಪರಸ್ಪರ ಅಪಸ್ವರ ಯಾತ್ರೆ! ಎಂದು ಅವರು ದೋಸ್ತಿ ಪಕ್ಷಗಳ ವಿರುದ್ಧ ವಾಗ್ಬಾಣ ಬಿಟ್ಟಿದ್ದಾರೆ.
ನಾಳೆಯಿಂದ 10 ದಿನ ಬಿಜೆಪಿ ಪಾದಯಾತ್ರೆ
ಇತ್ತ ಬಿಜೆಪಿ ನಾಯಕರು ಪಾದಯಾತ್ರೆ ಕುರಿತು ಮಹತ್ವದ ಸಭೆ ನಡೆಸಿದ್ದು, ಎಲ್ಲ ವಿಧದಲ್ಲೂ ಪಾದಯಾತ್ರೆಗೆ ಸಜ್ಜಾಗಿದ್ದಾರೆ. ಹತ್ತು ದಿನಗಳ ಪಾದಯಾತ್ರೆ ಇದಾಗಿದೆ. ವಿಶೇಷವೆಂದರೆ ಸಿದ್ದರಾಮಯ್ಯ ಅವರು ಈ ಹಿಂದೆ ರೆಡ್ಡಿ ಸಹೋದರರ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಇದೀಗ ಒಂದು ದಶಕದ ಬಳಿಕ ಅವರದ್ದ ಕಾಂಗ್ರೆಸ್ ರಾಜ್ಯದ ಸರ್ಕಾರದ ವಿರುದ್ಧ ವಿಪಕ್ಷಗಳು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ. ರಾಜಕೀಯವಾಗಿ ಈ ಪಾದಯಾತ್ರೆ ಮಹತ್ವ ಪಡೆದುಕೊಂಡಿದೆ.