Explainer: ಚುನಾಯಿತ ಸದಸ್ಯರಿಲ್ಲದೆ ಬೆಂಗಳೂರು ಆಡಳಿತಕ್ಕೆ 6 ವರ್ಷ: ಎಲ್ಲ ಪಕ್ಷದಿಂದಲೂ ವಿಳಂಬ, ಶಾಸಕರಿಗೆ ಡಿಮ್ಯಾಂಡ್!

Explainer: ಚುನಾಯಿತ ಸದಸ್ಯರಿಲ್ಲದೆ ಬೆಂಗಳೂರು ಆಡಳಿತಕ್ಕೆ 6 ವರ್ಷ: ಎಲ್ಲ ಪಕ್ಷದಿಂದಲೂ ವಿಳಂಬ, ಶಾಸಕರಿಗೆ ಡಿಮ್ಯಾಂಡ್!

Explainer: ಚುನಾಯಿತ ಸದಸ್ಯರಿಲ್ಲದೆ ಬೆಂಗಳೂರು ಆಡಳಿತಕ್ಕೆ 6 ವರ್ಷ: ಎಲ್ಲ ಪಕ್ಷದಿಂದಲೂ ವಿಳಂಬ, ಶಾಸಕರಿಗೆ ಡಿಮ್ಯಾಂಡ್!

Explainer: ಪ್ರಜಾಪ್ರಭುತ್ವದ ಜೀವಾಳವೇ ಚುನಾವಣೆ ಹಾಗೂ ಮತದಾನ. ಆದರೆ, ಬೆಂಗಳೂರಿನಂತಹ ದೇಶದ ಪ್ರಮುಖ ನಗರದ ಸ್ಥಳೀಯ ಆಡಳಿತಕ್ಕೆ ಚುನಾಯಿತ ಸದಸ್ಯರು ಇಲ್ಲದೆ 6 ವರ್ಷಗಳಾಗಿವೆ. ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಬರೋಬ್ಬರಿ 11 ವರ್ಷಗಳೇ ಆಗಿವೆ. ಆದರೆ, ಈ ಹಂತದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಹೆಸರು ಬದಲಾವಣೆ, ವ್ಯಾಪ್ತಿ ಹಾಗೂ ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂದು ಹೆಸರು ಬದಲಾಗಿದೆ. ಒಂದು ಪಾಲಿಕೆಯ ಬದಲಾಗಿ ಐದು ಪಾಲಿಕೆಗಳಾಗಿವೆ. ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಅಧಿಕಾರ ಅವಧಿಯೂ ಬದಲಾಗಿದೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯೇ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಇಷ್ಟೆಲ್ಲ ಬದಲಾವಣೆಗಳ ಹೊರತಾಗಿಯೂ ಚುನಾವಣೆ ಮಾತ್ರ ನಡೆದಿಲ್ಲ! ಬೆಂಗಳೂರು ಸ್ಥಳೀಯ ಆಡಳಿತದ ಚುನಾವಣೆ ನಡೆಸದೆ ಇರುವುದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸಮಾನ ಪಾಲಿದೆ. ಇದರಲ್ಲಿ ಬೆಂಗಳೂರಿನ ಶಾಸಕರ ಹಿತಾಸಕ್ತಿ ಇದೆ ಎನ್ನುವ ವಾದವೂ ಇದೆ. ಬೆಂಗಳೂರಿನ ಚುನಾವಣೆ ನಡೆದರೆ ಪಾಲಿಕೆ ಸದಸ್ಯರು ಹಾಗೂ ಮೇಯರ್, ಉಪ ಮೇಯರ್ ಮೇಲುಗೈ ಆಗುತ್ತದೆ. ಆದರೆ ಈ ಬದಲಾವಣೆ ಹಲವು ಶಾಸಕರಿಗೆ ಬೇಕಾಗಿಲ್ಲ ಎನ್ನುವ ಮಾತಿದೆ!

ಬೆಂಗಳೂರಿನಂತಹ ಪ್ರಮುಖ ನಗರಕ್ಕೆ ತನ್ನದೇ ಆದ ಸವಾಲುಗಳು ಇವೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಸ್ಟ್ ಮೈಲ್ ಕನೆಕ್ಟಿವಿಟಿ ಕೊರತೆ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ ವಿಪರೀತವಾಗಿರುವ ರಸ್ತೆ ಗುಂಡಿ ಸಮಸ್ಯೆಯೂ ಪ್ರಮುಖವಾಗಿದೆ. ಬೆಂಗಳೂರು ನಗರದಲ್ಲಿ ದಶಕಗಳಿಂದಲೂ ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ರಾಜಕಾಲುವೆ, ಸ್ವಚ್ಛತೆ, ಮಳೆ ನೀರು ನಿರ್ವಹಣೆ ಸೇರಿದಂತೆ ಸಮಸ್ಯೆಗಳ ಬೆಟ್ಟವೇ ಇದೆ. ಬೆಂಗಳೂರು ಪಾಲಿಕೆಗಳ ಚುನಾವಣೆ ನಡೆಯದೆ ಇರುವುದರಿಂದ ಜನ ಈಗ ಎಲ್ಲದಕ್ಕೂ ಆಯಾ ವಿಧಾನಸಭೆಯ ಶಾಸಕರನ್ನೇ ಅವಲಂಬಿಸುವಂತೆ ಆಗಿದೆ. ಇದರಿಂದ ಬೆಂಗಳೂರಿನ ಶಾಸಕರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಹಿಂದೆಲ್ಲ ವಾರ್ಡ್ ಮಟ್ಟದಲ್ಲಿ ಪಾಲಿಕೆಯ ಸದಸ್ಯರ ಬಳಿಯೇ ಸಮಸ್ಯೆ ಹೇಳಿಕೊಳ್ಳುತ್ತಿದ್ದ ಜನರು ಆ ಹಂತದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದರು.

ಬೆಂಗಳೂರಲ್ಲಿ ಅಧಿಕಾರಿಗಳು - ಶಾಸಕರದ್ದೇ ದರ್ಬಾರ್ !

ಇನ್ನು ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಿಂದಲೂ ಚುನಾಯಿತ ಸದಸ್ಯರು ಇಲ್ಲ! ಹೀಗಾಗಿ, ಬೆಂಗಳೂರಿನಲ್ಲಿ ಅಧಿಕಾರಿಗಳು ಹಾಗೂ ಶಾಸಕರದ್ದೇ ದರ್ಬಾರ್ ಮುಂದುವರಿದಿದೆ. ಪಾಲಿಕೆಯ ಆಡಳಿತ ಪಕ್ಷವು ಬೆಂಗಳೂರಿನ ಬಜೆಟ್ ಮಂಡನೆ ಮಾಡುತ್ತಿತ್ತು. ಆದರೆ ಕಳೆದ ಆರು ವರ್ಷಗಳಿಂದಲೂ ಪಾಲಿಕೆಯ ಮುಖ್ಯ ಆಯುಕ್ತರ ನೇತೃತ್ವದಲ್ಲಿಯೇ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ಹಿಂದೆ ಬಜೆಟ್ ಮಂಡನೆ ಮಾಡುವ ಮುಂಚೆ ಹಲವು ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿತ್ತು. ಈಗ ನಿರ್ವಹಣೆ - ಆಡಳಿತ ಹಾಗೂ ವೆಚ್ಚದ ಮೇಲೆಯೇ ಹೆಚ್ಚು ಗಮನ ಹರಿಸಲಾಗುತ್ತಿದೆ. ಇದಕ್ಕೆ ಪಾಲಿಕೆ ಐದು ವಿಭಜನೆ ಆಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಿರುವುದು ಸಹ ಪ್ರಮುಖ ಕಾರಣವಾಗಿದೆ.

ಸರ್ಕಾರದ ಹಂತದಲ್ಲಿ ನಿರ್ಧಾರ!

ಬೆಂಗಳೂರು ನಗರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಸರ್ಕಾರದ ಹಂತದಲ್ಲಿಯೇ ತೆಗೆದುಕೊಳ್ಳಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಟನಲ್ ರೋಡ್ ಪ್ರಾಜೆಕ್ಟ್ - ಹೆಬ್ಬಾಳ ಜಂಕ್ಷನ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ (ಉತ್ತರ-ದಕ್ಷಿಣ ಕಾರಿಡಾರ್) ಯೋಜನೆ. ಈ ಯೋಜನೆಯನ್ನು ಸರ್ಕಾರದ ಹಂತದಲ್ಲಿ ತೆಗೆದುಕೊಳ್ಳಲಾಗಿದೆ. ಈ ಯೋಜನೆಗೆ 18,000 ರಿಂದ 22,000 ಕೋಟಿಗಳಿಗೂ ಅಧಿಕ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಪಾಲಿಕೆಯಲ್ಲಿ ಚುನಾಯಿತ ಸದಸ್ಯರು ಹಾಗೂ ಆಡಳಿತ ಇಲ್ಲದೆ ಇರುವುದರಿಂದ ಇಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಶಾಸಕರು ಹಾಗೂ ಸರ್ಕಾರಕ್ಕೆ ಸುಲಭವಾಗಿದೆ.

ಬೆಂಗಳೂರಲ್ಲಿ ಚುನಾವಣೆ ನಡೆಯದೆ 6 ವರ್ಷ

ನಗರದ ಸ್ಥಳೀಯ ಆಡಳಿತ ನಡೆದು ಆರು ವರ್ಷಗಳಾಗಿವೆ. ಪಾಲಿಕೆಯ ಮುಖ್ಯ ಆಯುಕ್ತರೇ ಆಡಳಿತಾಧಿಕಾರಿ ಆಗಿದ್ದಾರೆ. ಬೆಂಗಳೂರು ಪಾಲಿಕೆಯ ಚುನಾವಣೆ ಕೊನೆಯ ಬಾರಿ ನಡೆದಿದ್ದು 2015ರ ಆಗಸ್ಟ್‌ ತಿಂಗಳಲ್ಲಿ, ಇವರ ಅಧಿಕಾರ ಅವಧಿ ಮುಕ್ತಾಯವಾದ ನಂತರ ಚುನಾವಣೆಯೇ ನಡೆದಿಲ್ಲ. ಹೀಗಾಗಿ, ಆರು ವರ್ಷಗಳಿಂದ ಪಾಲಿಕೆಗೆ ಚುನಾಯಿತ ಸದಸ್ಯರೇ ಇಲ್ಲ. ಚುನಾವಣೆ ಮುಂದೂಡುವಲ್ಲಿ ಈ ಹಿಂದೆ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಹಾಗೂ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಸಮಾನಪಾಲು ಇದೆ.

ಪಾಲಿಕೆ ಚುನಾವಣೆ ವಿಳಂಬವಾಗುವುದಕ್ಕೆ ಕಾರಣವೇನು ?

ಪಾಲಿಕೆಯ ಚುನಾವಣೆ ವಿಳಂಬವಾಗುವುದಕ್ಕೆ ಹಲವು ಕಾರಣಗಳಿವೆ. ಈ ಹಿಂದೆ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಿತ್ತು. ಈ ವ್ಯವಸ್ಥೆಯನ್ನು ಕೈಬಿಟ್ಟು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚಿಸಲಾಯಿತು. ಇದರಲ್ಲಿ 5 ಹೊಸ ಪಾಲಿಕೆಗಳನ್ನು ರಚಿಸಲಾಯಿತು. ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 369ಕ್ಕೆ ಹೆಚ್ಚಿಸಲಾಯಿತು.

Explainer: ಪಾಲಿಕೆ ಚುನಾವಣೆ ವಿಳಂಬಕ್ಕೆ ಮೂರು ಪ್ರಮುಖ ಕಾರಣಗಳು

ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆಗಳು

ಹಿಂದುಳಿದ ವರ್ಗಗಳ (OBC) ಮೀಸಲಾತಿಗೆ ಸಂಬಂಧಿಸಿದ ಕಾನೂನು ಹೋರಾಟ

ಬಿಬಿಎಂಪಿ ವ್ಯವಸ್ಥೆಯನ್ನು ರದ್ದು ಮಾಡಿ, ಇದರ ಬದಲಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ ಕಾಯ್ದೆಯನ್ನು ಜಾರಿಗೆ ತಂದಿರುವುದು.

ಪಾಲಿಕೆಯ ಸದಸ್ಯರಿಲ್ಲದೆ ಶಾಸಕರಿಗೆ ಲಾಭ: ಕಾತ್ಯಾಯಿನಿ ಚಾಮರಾಜ್

ಬೆಂಗಳೂರಿನ ಸ್ಥಳೀಯ ಆಡಳಿತಕ್ಕೆ ಚುನಾವಣೆ ನಡೆಸುವುದು (Local Government) ಬಿಜೆಪಿ - ಕಾಂಗ್ರೆಸ್ ಪಕ್ಷ ಸೇರಿ ಯಾರಿಗೂ ಬೇಕಾಗಿಲ್ಲ. ರಾಜ್ಯದ ಸಚಿವರಿಗೇ ಜಿಬಿಎ ಉಸ್ತುವಾರಿ ಕೊಡಲಾಗಿದೆ. ಪ್ರಮುಖ ಯೋಜನೆಗಳನ್ನು ಸರ್ಕಾರದ ಹಂತದಲ್ಲಿ ಶಾಸಕರೇ ತೆಗೆದುಕೊಳ್ಳುತ್ತಿದ್ದಾರೆ. ಇದೆಲ್ಲವು ವಾರ್ಡ್ ಹಂತದಲ್ಲಿ ಜನರ ಅಭಿಪ್ರಾಯದ ಆಧಾರದ ಮೇಲೆ ಅನುಷ್ಠಾನವಾಗಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್.

ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶಕ್ಕೆ (ಇದು ಬಿಬಿಎಂಪಿ (GBA), ಬಿಡಿಎ (BDA) ಮತ್ತು ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ವ್ಯಾಪ್ತಿಗೆ ಬರುವ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ) ಮೆಟ್ರೋಪಾಲಿಟನ್ ಪ್ಲ್ಯಾನಿಂಗ್ ಕಮಿಟಿ ಇರಬೇಕಾಗಿತ್ತು. ಅಂದರೆ ಬೆಂಗಳೂರಿನಲ್ಲಿ ಜಾರಿಯಾಗುವ ಪ್ರಮುಖ ಯೋಜನೆಗಳ ಜಾರಿಗೆ ಕಮಿಟಿ ಪ್ರಮುಖವಾಗಿತ್ತು. ಆದರೆ, ಆ ಕಮಿಟಿಯೇ ಈಗ ಇಲ್ಲ. ಈ ಕಮಿಟಿಯಲ್ಲಿ 2/3ರಷ್ಟು ಪಾಲಿಕೆಯ ಸದಸ್ಯರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಯ ಸದಸ್ಯರು ಇರುತ್ತಿದ್ದರು. ಆದರೆ ಪಾಲಿಕೆಯ ಚುನಾವಣೆಯೇ ನಡೆಯದೆ ಇರುವುದರಿಂದ ಈ ಕಮಿಟಿಯೇ ಇಲ್ಲ. ಹೀಗಾಗಿ, ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಬೆಂಗಳೂರಿನ ಶಾಸಕರು ಹಾಗೂ ಸರ್ಕಾರದ ಹಂತದಲ್ಲಿಯೇ ತೆಗೆದುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಕಾತ್ಯಾಯಿನಿ ಚಾಮರಾಜ್.

namma bengaluru gba election

namma bengaluru gba election

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ