
EaseMyTrip: ಮಹಾದೇವ್ ಬೆಟ್ಟಿಂಗ್ ಪ್ರಕರಣ: ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ ವಿರುದ್ಧ EDಯಿಂದ ಭಾರೀ ಶಾಕ್, ಆರೋಪ ಪಟ್ಟಿ ಸಲ್ಲಿಕೆ
ಬಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿದ್ದ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣವು ಇದೀಗ ಮತ್ತೊಂದು ಪ್ರಮುಖ ತಿರುವು ಪಡೆದುಕೊಂಡಿದೆ. ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ EaseMyTrip ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ED) ಆರೋಪಪಟ್ಟಿ ಸಲ್ಲಿಸಿದೆ.
ಅಕ್ರಮ ಬೆಟ್ಟಿಂಗ್ ನಿಂದ ಬಂದ ಹಣವನ್ನು ಭಾರತೀಯ ಷೇರು ಮಾರುಕಟ್ಟೆಗೆ ವರ್ಗಾವಣೆ ಮಾಡುವಲ್ಲಿ ನಿಶಾಂತ್ ಪಿಟ್ಟಿ ಪಾತ್ರವಿದೆ ಎಂದು ED ಆರೋಪಿಸಿದೆ. ಇನ್ನು ಮಾಲ್ಡೀವ್ಸ್ ಹಾಗೂ ಭಾರತದ ನಡುವೆ ಈಚೆಗೆ ವೈಮನಸ್ಸು ಮೂಡಿತ್ತು. ಈ ಸಂದರ್ಭದಲ್ಲಿ ಹಲವು ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ಬಹಿಷ್ಕರಿಸಿದ್ದರು. ಈ ರೀತಿ ಮಾಲ್ಡೀವ್ಸ್ ಪ್ರವಾಸವನ್ನು ಬಹಿಷ್ಕರಿಸಿದ ಮೊದಲಗರಲ್ಲಿ ನಿಶಾಂತ್ ಪಿಟ್ಟಿ ( Nishant Pitti) ಅವರು ಸಹ ಒಬ್ಬರು. ಆದರೆ, ಭಾರತದ ಪರ ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವುದು ಭಾರೀ ಚರ್ಚೆಗೂ ಗ್ರಾಸವಾಗಿದೆ.
ಇನ್ನು ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ EaseMyTrip ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ED) ಆರೋಪಪಟ್ಟಿ ಸಲ್ಲಿಸಿದೆ. ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆಗಳ ಮೂಲಕ ಭಾರತೀಯ ಷೇರು ಮಾರುಕಟ್ಟೆಗೆ ಅಕ್ರಮ ಬೆಟ್ಟಿಂಗ್ ಆದಾಯವನ್ನು ಸುಗಮಗೊಳಿಸಿದ ಆರೋಪ ನಿಶಾಂತ್ ಅವರ ಮೇಲಿದೆ. ನಿಶಾಂತ್ ಅವರು 59.60 ಕೋಟಿ ರೂ. ಮೌಲ್ಯದ ಡಿಮ್ಯಾಟ್ ಷೇರುಗಳನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದು, ಅವುಗಳನ್ನು "ಅಪರಾಧದ ಆದಾಯ' ಎಂದು ಹೇಳಿದೆ.
ಸ್ಕೈಎಕ್ಸ್‌ಚೇಂಜ್ ಮಾಲೀಕ ಹರಿಶಂಕರ್ ತಿಬ್ರೆವಾಲ್ ಅವರ ಸಹಚರರೊಂದಿಗೆ ನಿಶಾಂತ್ ಅವರು ಷೇರು ಬೆಲೆ ತಂತ್ರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಹಾದೇವ್ ಅಪ್ಲಿಕೇಶನ್ ಮತ್ತು ಸ್ಕೈಎಕ್ಸ್‌ಚೇಂಜ್ ಕ್ರಮವಾಗಿ 80,000 ಕೋಟಿ ರೂ. ಮತ್ತು 12,000 ಕೋಟಿ ರೂ. ಮೌಲ್ಯದ ಅಪರಾಧ ಆದಾಯವನ್ನು ಗಳಿಸಿವೆ ಎಂದು ಅಂದಾಜಿಸಲಾಗಿದೆ. ಭಾರೀ ಮೊತ್ತದ ಆದಾಯ ಹಾಗೂ ಅಕ್ರಮ ಹಣ ವರ್ಗಾವಣೆ ವಿಷಯವನ್ನು ಜಾರಿ ನಿರ್ದೇಶನಾಲಯವು ಗಂಭೀರವಾಗಿ ಪರಿಗಣಿಸಿದೆ.
ಸೆಪ್ಟೆಂಬರ್ 10 ರಂದು ಛತ್ತೀಸ್‌ಗಢದ ರಾಯ್‌ಪುರದ ವಿಶೇಷ ನ್ಯಾಯಾಲಯದ ಮುಂದೆ ಚಾರ್ಜ್‌ಶೀಟ್ ಸಲ್ಲಿಸುವಾಗ, ಫೆಡರಲ್ ಏಜೆನ್ಸಿಯು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಹೊರಡಿಸಲಾದ ತಾತ್ಕಾಲಿಕ ಆದೇಶದ ಮೂಲಕ ನಿಶಾಂತ್ ಅವರ 59.60 ಕೋಟಿ ರೂ. ಮೌಲ್ಯದ DEMAT ಷೇರುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ (ED) ಈ ಷೇರುಗಳನ್ನು ಜಪ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿಯನ್ನು ಕೋರಿದೆ, ಈ ಷೇರುಗಳನ್ನು ಹಣ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ, ಅಪರಾಧದ ಆದಾಯ ಎಂದು ಪರಿಗಣಿಸಲಾಗಿದೆ.
EaseMyTrip ಸಹ-ಸಂಸ್ಥಾಪಕರ ವಿರುದ್ಧದ ಕೇಳಿ ಬಂದಿರುವ ಪ್ರಮುಖ ಆರೋಪಗಳು
EaseMyTripನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ನಿರ್ದೇಶಕ ನಿಶಾಂತ್ ಪಿಟ್ಟಿ (40) ವಿರುದ್ಧದ ಆರೋಪಗಳನ್ನು ರಾಯ್‌ಪುರದ ವಿಶೇಷ PMLA ನ್ಯಾಯಾಲಯದ ಮುಂದೆ ಸಲ್ಲಿಸಲಾದ ಐದನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಯಾವುದೇ ಚಾರ್ಜ್‌ಶೀಟ್‌ನ ಬಗ್ಗೆ ತನಗೆ ತಿಳಿದಿಲ್ಲ ಅಥವಾ ನ್ಯಾಯಾಲಯದಿಂದ ಈ ವರೆಗೆ ಸಮನ್ಸ್ ಜಾರಿ ಆಗಿಲ್ಲ ಎಂದು ನಿಶಾಂತ್ ಹೇಳಿದ್ದಾರೆ ಎಂದು ಹೇಳಲಾಗಿದೆ.
ನಾನು ಯಾವಾಗಲೂ ಎಲ್ಲಾ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಿದ್ದೇನೆ ಮತ್ತು ಸಹಕರಿಸುವುದನ್ನು ಮುಂದುವರಿಸಲಿದ್ದೇನೆ. ಕಾನೂನಿನ ಪ್ರಕಾರ, ವಿವರವಾದ ದಾಖಲೆಗಳನ್ನು ಸಲ್ಲಿಸಲಿದ್ದೇನೆ ಎಂದೂ ನಿಶಾಂತ್ ಅವರು ಹೇಳಿದ್ದಾರೆ.