BRICS Summit: ವಿದೇಶಿ ಗಣ್ಯರಿಗೆ ರಸ್ತೆ ಬದಿಯ ಕೊಳಗೇರಿ ಕಾಣದಂತೆ ಪರದೆ!

BRICS Summit: ವಿದೇಶಿ ಗಣ್ಯರಿಗೆ ರಸ್ತೆ ಬದಿಯ ಕೊಳಗೇರಿ ಕಾಣದಂತೆ ಪರದೆ!

BRICS Summit: ವಿದೇಶಿ ಗಣ್ಯರಿಗೆ ರಸ್ತೆ ಬದಿಯ ಕೊಳಗೇರಿ ಕಾಣದಂತೆ ಪರದೆ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು, ನಾಳೆ (ಸೆ.12, 13) ಬ್ರಿಕ್ಸ್‌ ಶೃಂಗಸಭೆ ಆಯೋಜನೆಗೊಂಡಿದೆ. ವಿಶ್ವದ ಹಲವು ರಾಷ್ಟ್ರಗಳ ನಾಯಕರು ಆಗಮಿಸಲಿದ್ದಾರೆ. ಅವರನ್ನೆಲ್ಲ ಅದ್ಧೂರಿಯಾಗಿ ಸ್ವಾಗತಿಸಲು, ಸಮಾವೇಶವನ್ನು ಯಶಸ್ವಿಯಾಗಿಸಲು ಸಕಲ ಸಿದ್ಧತೆಗಳು ನಡೆದಿವೆ. ಇಂತಹ ಹೊತ್ತಿನಲ್ಲಿ, ಹೆದ್ದಾರಿಯ ಮಗ್ಗುಲಿನಲ್ಲೇ ಇರುವ ವಸಂತ್‌ ವಿಹಾರ್‌ದಲ್ಲಿರುವ ಕೂಲಿ ಕ್ಯಾಂಪ್‌ ಕಾಣಬಾರದೆಂದು ರಸ್ತೆಯುದ್ದಕ್ಕೂ ಪರದೆ ಹಾಕಲಾಗಿದೆ.

ಶೃಂಗಸಭೆಗಾಗಿ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವಾಗ, ಜಗತ್ತಿನ ಎದುರು ತೆರೆದುಕೊಳ್ಳಲು ಸಜ್ಜಾಗಿರುವಾಗ ಕ್ಯಾಂಪ್‌ ಅನ್ನು ಪರದೆ ಹಾಕಿ ಮುಚ್ಚಿರುವುದು ಅಲ್ಲಿನ ನಿವಾಸಿಗಳಲ್ಲಿ ನೋವುಂಟುಮಾಡಿದೆ. ಈ ಬಗ್ಗೆ ‘brut.media/in’ ವರದಿ ಮಾಡಿದೆ.

ಅಲ್ಲಿನ ನಿವಾಸಿಗಳಿಗೆ ಇದೇನೂ ಹೊಸದಲ್ಲ. 2023ರಲ್ಲಿ ಜಿ20 ಶೃಂಗಸಭೆ ನಡೆದಾಗಲೂ ಹೀಗೆಯೇ ಮಾಡಲಾಗಿತ್ತು. ಈ ಬಡಾವಣೆ ಬಳಿಯೇ ಹಾದುಹೋಗಿರುವ ಮಾರ್ಗದಲ್ಲಿ ಸಾಗುವ ವಿದೇಶಿ ಪ್ರತಿನಿಧಿಗಳಿಗೆ, ಅಲ್ಲಿನ ಅವ್ಯವಸ್ಥೆಗಳು ಕಾಣದಂತೆ ಪರದೆ ಹಾಕಲಾಗಿತ್ತು. ಅದರಿಂದ ತಮ್ಮ ದೈನಂದಿನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗಿದ್ದವು ಎಂಬುದಾಗಿ ಆರೋಪಿಸಿದ್ದರು. ಇದೀಗ 18ನೇ ಬ್ರಿಕ್ಸ್‌ ಸಮಾವೇಶದ ಸಂದರ್ಭದಲ್ಲಿಯೂ ಅದೇ ಸ್ಥಿತಿ ನಿರ್ಮಾಣವಾಗಿದೆ.

ಇಡೀ ಬಡಾವಣೆಯು ವಿದೇಶಿ ಅತಿಥಿಗಳ ಕಣ್ಣಿಗೆ ಕಾಣದಂತೆ ಮಾಡಲು ಪರದೆ ಹಾಕಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಇನ್ನೂ ಕೆಲವರು, ವಿದೇಶಗಳ ಗಣ್ಯರು ಬಂದ ಸಂದರ್ಭದಲ್ಲಿ ನಗರವನ್ನು ಸುಂದರವಾಗಿ ಕಾಣುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಆದರೆ, ದಿನಗೂಲಿ ಮಾಡಿಕೊಂಡು ಬದುಕು ನಡೆಸುತ್ತಿರುವ ಅಲ್ಲಿನ ಜನರ ಸಮಸ್ಯೆಗಳೇ ಬೇರೆ. ಬಡಾವಣೆಯಿಂದ ಹೊರಗೆ ಬರುವುದು, ಕೆಲಸಕ್ಕೆ ಹೋಗುವುದು, ಅಗತ್ಯ ಸಾಮಗ್ರಿಗಳನ್ನು ಹೊರಗಿನಿಂದ ತರುವುದು, ಅಂಗಡಿಗಳನ್ನು ನಡೆಸುವುದು ಬಲುಕಷ್ಟವಾಗಿದೆ.

‘ಶೃಂಗಸಭೆಯ ಎರಡೂ ದಿನ ಗಣ್ಯರ ಓಡಾಟವಿರುವ ಕಾರಣದಿಂದಾಗಿ ಮುಖ್ಯರಸ್ತೆಯಲ್ಲಿ ಸಂಚಾರ ಬಂದ್‌ ಮಾಡಲಾಗಿದೆ. ಇಲ್ಲಿನ ನಿವಾಸಿಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

‘ಕೊಳಗೇರಿ ಕಾಣದಂತೆ ಮಾಡಲು ಪರದೆ’
ಸಮಾವೇಶದ ಹಿನ್ನೆಲೆಯಲ್ಲಿ ನೀಲಿ ಮತ್ತು ಬಿಳಿ ಪರದೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿವೆ ಎಂಬುದು ಸ್ಥಳೀಯರ ಆರೋಪ. ಸಣ್ಣವರಿದ್ದಾಗಿನಿಂದಲೂ ಅಲ್ಲಿಯೇ ನೆಲೆಸಿರುವುದಾಗಿ ಹೇಳಿಕೊಳ್ಳುವ ಮಹಿಳೆಯೊಬ್ಬರು, ಯಾವ ಕಾರಣಕ್ಕಾಗಿ ಪರದೆ ಹಾಕಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಮಾವೇಶದ ಮುನ್ನಾದಿನ (ಸೆ.11) ಬೆಳಗ್ಗೆ ಪರದೆ ಹಾಕಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಯಾಕೆ ಹಾಕಿದ್ದಾರೆ ಎಂಬುದೂ ಗೊತ್ತಿಲ್ಲ. ಯಾರೋ ನಾಯಕರು ಬರುತ್ತಿದ್ದಾರೆ, ಹಾಗಾಗಿ ಸಂಚಾರ ಬಂದ್‌ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಈ ಕಡೆ ಇರುವ ಕಸ ಹೊರಗಿನವರಿಗೆ ಕಾಣಬಾರದಂತೆ’ ಎಂದು ಮಹಿಳೆ ಬೇಸರದಿಂದಲೇ ಹೇಳಿದ್ದಾರೆ.

‘ಕೊಳಗೇರಿ ಜನರು ಕಸ ಹರಡುತ್ತಾರೆ ಎನ್ನುತ್ತಾರೆ. ನಮಗಿಂತ ಸ್ವಚ್ಛವಾಗಿ ಯಾರೂ ಇರಲ್ಲ. ನಮ್ಮ ಓಣಿಗಳನ್ನು ನೋಡಿ. ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡಿದ್ದೇವೆ. ಪ್ರತಿಯೊಬ್ಬರೂ ತಮ್ಮ ಮನೆ ಬಾಗಿಲ ಮುಂದಿನ ಜಾಗವನ್ನು ಸ್ವಚ್ಛ ಮಾಡಿಕೊಳ್ಳುತ್ತೇವೆ’ ಎಂದಿದ್ದಾರೆ.

‘ಇದು ಕೊಳಗೇರಿಯಲ್ಲವೇ? ಅದಕ್ಕೇ ಪರದೆ ಹಾಕಿದ್ದಾರೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ರೀತಿ ಪರದೆ ಹಾಕುವುದು ಇದೇ ಮೊದಲಲ್ಲ. ರಾಜಧಾನಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ಆಯೋಜನೆಗೊಂಡಾಗಲೆಲ್ಲ ಇದೇ ರೀತಿಯಾಗುತ್ತದೆ ಎಂಬುದು ಅಲ್ಲಿನ ನಿವಾಸಿಗಳ ಬೇಸರದ ಮಾತು.

ದಿನಗೂಲಿಯಿಂದ ಅಂಗಡಿ ಮಾಲಿಕರವರೆಗೆ ‘ಪರದೆ ಪರಿಣಾಮ’
ಪರದೆ ಹಾಗೂ ಮಾರ್ಗ ಬಂದ್‌ ಕಾರಣದಿಂದಾಗಿ, ದಿನಗೂಲಿಯನ್ನೇ ನೆಚ್ಚಿಕೊಂಡು ಜೀವನ ಮಾಡುತ್ತಿರುವ ಹೆಚ್ಚಿನವರು ಮನೆಯಲ್ಲಿಯೇ ಕೂರುವಂತಾಗಿದೆ.

‘ಇಂದು ಕೂಲಿಗೆ ಹೋಗಲು ಆಗಿಲ್ಲ. ಹೊರಗೆ ಹೋಗಲು ಪೊಲೀಸರು ಬಿಡುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಕುಳಿತಿದ್ದೇನೆ. ಬೇರೆ ದಾರಿಯೇ ಇಲ್ಲದಂತಾಗಿದೆ. ನಿರ್ಬಂಧ ಇನ್ನಷ್ಟು ದಿನ ಮುಂದುವರಿದರೂ, ಏನೂ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಇದ್ದದ್ದರಲ್ಲೇ ಕಾಲ ಕಳೆಯಬೇಕಿದೆ’ ಎಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಅಲ್ಲಿನ ತರಕಾರಿ ಮಾರಾಟಗಾರರ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ರಸ್ತೆ ಆಸುಪಾಸಿನಲ್ಲಿರುವ ಅಂಗಡಿಗಳ ಮಾಲೀಕರೂ ‘ಪರದೆ ಪರಿಣಾಮ’ ಅನುಭವಿಸುತ್ತಿದ್ದಾರೆ. ‘ಪ್ರತಿದಿನ ₹ 1,000 – ₹ 1,200 ಸಂಪಾದನೆಯಾಗುತ್ತಿತ್ತು. ಇದೀಗ, ಗ್ರಾಹಕರೇ ಇಲ್ಲದೆ ಖಾಲಿ ಕೂರುವಂತಾಗಿದೆ. ನಷ್ಟ ಭರಿಸುವವರು ಯಾರು?’ ಎಂದು ಅಂಗಡಿ ಮಾಲೀಕರೊಬ್ಬರು ಕೇಳಿದ್ದಾರೆ.

ಪರದೆ ಪರಿಹಾರವೇ?
ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬದಲು ಈ ರೀತಿ ಪರದೆ ಹಾಕುತ್ತಿರುವುದು ಏಕೆ? ಪರದೆ ಶಾಶ್ವತ ಪರಿಹಾರವಾಗುವುದೇ? ಎಂದು ಸಾಕಷ್ಟು ಮಂದಿ ಪ್ರಶ್ನಿಸಿದ್ದಾರೆ.

‘ನಾವು ಕೊಳಗೇರಿಯಲ್ಲಿ ವಾಸಿಸುತ್ತಿದ್ದೇವೆ. ನಾವು ಕೊಳಗೇರಿಯಲ್ಲಿ ಇರಬಾರದು ಎನ್ನುವುದಾದರೆ ಅದನ್ನು ಒಪ್ಪುತ್ತೇವೆ. ನಮಗೆ ಬೇರೆಡೆ ಜಾಗ ಕೊಡಿ. ಅಲ್ಲಿಗೇ ಹೋಗುತ್ತೇವೆ. ಆದರೆ, ಈ ರೀತಿ ಪರದೆ ಹಾಕಿ ಮುಚ್ಚಿರುವುದು ಏಕೆ? ಸಿರಿವಂತರಷ್ಟೇ ನಿಮಗೆ ಕಾಣಬೇಕೇ?’ ಎಂದು ವ್ಯಕ್ತಿಯೊಬ್ಬರು ಕೇಳಿದ್ದಾರೆ.

‘ನಮಗೆ ಓಡಾಡಲು ಕಷ್ಟವಾಗುತ್ತಿದೆ. ಯಾವುದಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗಲು, ಹೊರಗೆ ಕೆಲಸಕ್ಕೆ ಹೋಗಬೇಕೆಂದರೆ ಪರದೆ ಮೇಲೆತ್ತಿ ಹೋಗಬೇಕಾಗಿದೆ. ಇದರಿಂದ ತೊಂದರೆಯಾಗುತ್ತಿದೆ’ ಎಂದಿದ್ದಾರೆ.

‘ಕೊಳಗೇರಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಎಲ್ಲ ಚರಂಡಿಗಳು, ರಸ್ತೆಗಳನ್ನು ಸ್ವಚ್ಛಮಾಡಿ. ರಸ್ತೆಯಲ್ಲಿ ಯಾರೋ ಕಸ ಬೀಸಾಡಿ ಹೋದರೂ, ಅದಕ್ಕೆ ನಮ್ಮನ್ನೇ ದೂರಲಾಗುತ್ತದೆ. ಮೂರ್ನಾಲ್ಕು ದಿನವಲ್ಲ; ಹತ್ತು ದಿನ ಬೇಕಾದರೂ ಪರದೆ ಹಾಕಿ. ನಾವು ಹಸಿದುಕೊಂಡಿದ್ದರೂ ಪರವಾಗಿಲ್ಲ. ಆದರೆ, ಕನಿಷ್ಠ ಸೌಕರ್ಯಗಳನ್ನು ಕಲ್ಪಿಸಿ’ ಎಂದು ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ.

‘ಹೊರಗಿನ ಗಣ್ಯರ ಎದುರು ನಮ್ಮ ಬಡತನದ ಗುರುತನ್ನೇ ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ. ನಮ್ಮದೇನು ಬಡ ದೇಶವಲ್ಲ ಎಂದು ಹೇಳಿಕೊಳ್ಳಲು ಬಯಸುತ್ತೇವೆ. ಇಲ್ಲಿನವರು ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ತಮ್ಮ ವ್ಯವಹಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ‘ಪರದೆ’ ವಿರೋಧಿಸುತ್ತಿಲ್ಲ
ವಿದೇಶಿ ಅತಿಥಿಗಳ ಎದುರು ದೆಹಲಿಯನ್ನು ಸ್ವಚ್ಛವಾಗಿ ಕಾಣುವಂತೆ ಮಾಡಲು ಮತ್ತು ವಿದೇಶಿಗರಿಗೆ ಇಲ್ಲಿನ ಬಡತನ ಕಾಣಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವವರೂ ಇದ್ದಾರೆ.

‘ಯಾರಾದರೂ ಬರುತ್ತಾರೆ ಎಂದರೆ ನಾವು ಮನೆಯನ್ನು ಸ್ವಚ್ಛ ಮಾಡಿಕೊಳ್ಳುವುದಿಲ್ಲವೇ? ಇದೂ ಹಾಗೆಯೇ’ ಎಂದು 35 ವರ್ಷದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

‘ಇದರಿಂದ ದೊಡ್ಡ ತೊಂದರೆಯೇನೂ ಆಗಿಲ್ಲ. ಓಡಾಡುವುದಕ್ಕೆ ದಾರಿ ಬಿಟ್ಟಿದ್ದಾರೆ. ಹೊರಗೆ ಹೋಗುವುದಾದರೆ ಅಲ್ಲಿಂದ ಹೋಗಬಹುದು. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಯಾವುದೇ ತೊಂದರೆಯಾಗಿಲ್ಲ’ ಎನ್ನುತ್ತಾರೆ ಅವರು.

‘ವಿದೇಶಿಗರ ಎದುರು ದೇಶದ ಗೌರವ ಕಾಪಾಡಲು ಈ ರೀತಿಯ ಕ್ರಮ ಅಗತ್ಯ. ಅವರು ಇಲ್ಲಿಂದ ಹೋದಮೇಲೆ, ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವಂತಾಗಬಾರದು’ ಎಂದಿದ್ದಾರೆ.

‘ಹವಾಮಾನ ವೈಪರೀತ್ಯದ ಸಂತ್ರಸ್ತರು ನಾವು’
ಅಲ್ಲಿನ ನಿವಾಸಿಯೊಬ್ಬರು ಪರದೆ, ಪೊಲೀಸ್‌ ಕ್ರಮಗಳನ್ನು ಮೀರಿ ಹವಾಮಾನ ವೈಪರೀತ್ಯದ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.

‘ಎಲ್ಲೆಡೆ ಹವಾಮಾನ ವೈಪರೀತ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಹವಾಮಾನಕ್ಕೆ ಹಾನಿ ಮಾಡುವ ವಿಚಾರದಲ್ಲಿ ಹೆಚ್ಚೇನೂ ಪಾತ್ರವಿಲ್ಲದಿದ್ದರೂ, ಅದರ ಪರಿಣಾಮಗಳನ್ನು ಅತಿಹೆಚ್ಚಾಗಿ ಅನುಭವಿಸುತ್ತಿರುವವರು ಕೊಳಗೇರಿಗಳಲ್ಲಿ ವಾಸಿಸುವವರೇ’ ಎಂದು ಅವರು ಹೇಳಿದ್ದಾರೆ.

‘ಕೊಳಗೇರಿ ನಿವಾಸಿಗಳ ಅನುಭವಗಳು ಹವಾಮಾನ ಕುರಿತಾಗಿ ನಡೆಯುವ ಚರ್ಚೆಯ ಭಾಗವಾಗಬೇಕು. ಅದರ ಆಧಾರದಲ್ಲಿ ನೀತಿಗಳನ್ನು ರೂಪಿಸಬೇಕು’ ಎಂದು ಪ್ರತಿಪಾದಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ