‘ಡಿಸಿಸಿ’ಗೆ ಕೊತ್ತೂರು, ‘ಅಪೆಕ್ಸ್‌’ಗೆ ಸುಬ್ಬಾರೆಡ್ಡಿ ಪ್ರತಿನಿಧಿ?

‘ಡಿಸಿಸಿ’ಗೆ ಕೊತ್ತೂರು, ‘ಅಪೆಕ್ಸ್‌’ಗೆ ಸುಬ್ಬಾರೆಡ್ಡಿ ಪ್ರತಿನಿಧಿ?

‘ಡಿಸಿಸಿ’ಗೆ ಕೊತ್ತೂರು, ‘ಅಪೆಕ್ಸ್‌’ಗೆ ಸುಬ್ಬಾರೆಡ್ಡಿ ಪ್ರತಿನಿಧಿ?

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ಅವಿರೋಧವಾಗಿ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ.

ಮುಳಬಾಗಿಲು ಟಿಎಪಿಸಿಎಂಎಸ್‌ನಿಂದ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಅವರನ್ನು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯನ್ನಾಗಿ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಲು ಸಮ್ಮತ ವ್ಯಕ್ತವಾಗಿರುವುದು ಗೊತ್ತಾಗಿದೆ.

ಕೋಲಾರ ಜಿಲ್ಲೆಗೆ ಅಧ್ಯಕ್ಷ ಸ್ಥಾನದ ಸಿಗುವುದು ಅಂತಿಮವಾದರೆ, ಅಪೆಕ್ಸ್‌ ಬ್ಯಾಂಕ್‌ ಪ್ರತಿನಿಧಿಯಾ‌ಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅವರನ್ನು ಕಳಿಸಲೂ ಪಕ್ಷದ ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆದಿರುವುದು ತಿಳಿದುಬಂದಿದೆ.

ಚುನಾವಣೆ ಸಂಬಂಧ ಕಳೆದೊಂದು ವಾರದಿಂದ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದ್ದು, ತೆರೆಮರೆಯಲ್ಲಿ ಕಸರತ್ತುಗಳು ನಡೆಯುತ್ತಲೇ ಇವೆ.

ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ 2025ರ ಮೇ 28ರಂದು ಚುನಾವಣೆ ನಡೆದಿತ್ತು. ಅದಾಗಿ 15 ತಿಂಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಲ ಕೂಡಿಬಂದಿದೆ. ಈ ಮೂಲಕ ಆಡಳಿತ ಮಂಡಳಿ ರಚನೆಗೆ ಕಾಲ ಸನ್ನಿಹಿತವಾಗಿದೆ.

ಒಟ್ಟು 18 ಚುನಾಯಿತ ನಿರ್ದೇಶಕರ ಪೈಕಿ ಇಬ್ಬರ ಫಲಿತಾಂಶ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. ಹೀಗಾಗಿ, 16 ನಿರ್ದೇಶಕರು, ಒಬ್ಬ ನಾಮನಿರ್ದೇಶಿತ ನಿರ್ದೇಶಕ (ಅಧಿಕಾರೇತರ ಸದಸ್ಯ) ಹಾಗೂ ಇಬ್ಬರು ಅಧಿಕಾರಿ ವರ್ಗದ ಸದಸ್ಯರು ಸೇರಿದಂತೆ ಒಟ್ಟು 19 ಮಂದಿ ಬಲಾಬಲವನ್ನು ಸದ್ಯಕ್ಕೆ ಹೊಂದಿದೆ.

ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು, ಮುಖಂಡರು ಈಗಾಗಲೇ ಸರಣಿ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜೊತೆ, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಜೊತೆ ಹಾಗೂ ಸಹಕಾರ ಸಚಿವ ಲಕ್ಷ್ಮಣ ಸವದಿ ಜೊತೆ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ಎಲ್ಲಾ ನಿರ್ದೇಶಕರು, ಶಾಸಕರು ಸೇರಿ ಸಭೆ ಕೂಡ ನಡೆಸಿ ತಂತ್ರಗಾರಿಕೆ ರೂಪಿಸಿದ್ದಾರೆ. ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಅವರನ್ನು ಅಧಿಕಾರೇತರ ನಿರ್ದೇಶಕರನ್ನಾಗಿ ನಾಮನಿರ್ದೇಶಕ ಮಾಡಿಸಿಕೊಂಡೂ ಬಂದಿದ್ದಾರೆ. ಸೋಮವಾರ ಚುನಾವಣೆ ಪ್ರಕ್ರಿಯೆಗೂ ಮುನ್ನ ಮತ್ತೊಮ್ಮೆ ಸಭೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ. ಪ್ರಮುಖವಾಗಿ ಎಲ್ಲರನ್ನೂ ಒಗ್ಗೂಡಿಸುವ ಜವಾಬ್ದಾರಿಯನ್ನು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಕೋಮುಲ್‌ ಅಧ್ಯಕ್ಷ ಕೆ.ವೈ.ನಂಜೇಗೌಡ ನಿಭಾಯಿಸುತ್ತಿದ್ದಾರೆ.

‘ಡಿಸಿಸಿ ಬ್ಯಾಂಕ್ ಅನ್ನು ಹಳೆ ವೈಭವಕ್ಕೆ ಮರಳಿ ತರಬೇಕು ಎಂಬುದು ನಮ್ಮೆಲ್ಲರ ಗುರಿ. ಈ ನಿಟ್ಟಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಕೊತ್ತೂರು ಮಂಜುನಾಥ್‌ ಅವರನ್ನು ಕಣಕ್ಕಿಳಿಸಲು ಚರ್ಚಿಸಲಾಗಿದೆ’ ಎಂಬುದಾಗಿ ಶಾಸಕ ಕೆ.ವೈ.ನಂಜೇಗೌಡ ಈಚೆಗೆ ಸುಳಿವು ನೀಡಿದ್ದರು.

‘ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಆಗಿಲ್ಲ. ಆದರೆ, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಇರಬೇಕು ಎಂಬುದು ಅವರ ಆಸೆಯಾಗಿತ್ತು. ಕೊತ್ತೂರು ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮೊದಲು ಹೇಳಿದವರೇ ನಾರಾಯಣಸ್ವಾಮಿ. ಕೊತ್ತೂರು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ, ನಾನು, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್ ಕುಮಾರ್ ಒಪ್ಪಿಕೊಂಡಿದ್ದೇವೆ’ ಎಂದಿದ್ದರು.

ನಾಮನಿರ್ದೇಶಿತ ಎಸ್‌.ಎನ್‌.ನಾರಾಯಣಸ್ವಾಮಿ ಸೇರಿದಂತೆ ನಾಲ್ವರು ಶಾಸಕರೇ ಡಿಸಿಸಿ ಬ್ಯಾಂಕ್‌ ನಿರ್ದೇಶಕರಿದ್ದಾರೆ. ಈ ಪೈಕಿ ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಚುನಾವಣಾ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ.

‘ನಾಮನಿರ್ದೇಶಿತ ಅಧಿಕಾರೇತರ ಸದಸ್ಯ ಎಸ್‌.ಎನ್‌.ನಾರಾಯಣಸ್ವಾಮಿ ಅಪೆಕ್ಸ್‌ ಬ್ಯಾಂಕ್‌ ಮತ್ತು ಸಹಕಾರ ಇಲಾಖೆಯ ತಲಾ ಒಬ್ಬ ಅಧಿಕಾರಿ ವರ್ಗದ ಸದಸ್ಯರು ಹಾಗೂ ಕಾಂಗ್ರೆಸ್‌ ಬೆಂಬಲದಿಂದಲೇ ನಿರ್ದೇಶರಾಗಿರುವ ಶಾಸಕಿ ರೂಪಕಲಾ ಶಶಿಧರ್‌ ಸೇರಿ ಒಟ್ಟು 15 ಸದಸ್ಯರಿದ್ದೇವೆ. ಹೀಗಾಗಿ, ಸುಲಭವಾಗಿ ಗೆಲ್ಲಬಹುದು’ ಎಂಬುದು ಕಾಂಗ್ರೆಸ್‌ ಪಾಳಯದ ಲೆಕ್ಕಾಚಾರವಾಗಿದೆ.

ಬಿಜೆಪಿ –ಜೆಡಿಎಸ್‌ ಮೈತ್ರಿಕೂಟ ಬೆಂಬಲಿತ ಕೇವಲ ಮೂವರು ನಿರ್ದೇಶಕರಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ನಿರ್ದೇಶಕರಾಗಿ ಪುನರಾಯ್ಕೆಯಾಗಿದ್ದು, ಅವರು ಯಾರ ಪರವಾಗಿಯೂ ಗುರುತಿಸಿಕೊಂಡಿಲ್ಲ.

ಬೆಳಿಗ್ಗೆ 11 ಗಂಟೆಗೆ ನಗರದ ಡಿಸಿಸಿ ಬ್ಯಾಂಕ್‌ ಮುಖ್ಯ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ಶುರುವಾಗಲಿದೆ. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್‌ ದಿಲೀಪ್‌ ಕಾರ್ಯನಿರ್ವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ವೇಳೆಗೆ ಫಲಿತಾಂಶ ಗೊತ್ತಾಗಲಿದೆ.

ಮೌನಕ್ಕೆ ಶರಣಾಗಿರುವ ಬ್ಯಾಲಹಳ್ಳಿ

ಡಿಸಿಸಿ ಬ್ಯಾಂಕ್‌ನ ಹಿಂದಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ.

‘ಇನ್ನಿತರ ಕ್ಷೇತ್ರ’ದಿಂದ ನಿರ್ದೇಶಕರಾಗಿ (ಪಕ್ಷೇತರ) ಮರು ಆಯ್ಕೆಯಾಗಿರುವ ಅವರು ಅಧ್ಯಕ್ಷ ಸ್ಥಾನದ ಚುನಾವಣೆ ಸಂಬಂಧ ಯಾವುದೇ ನಿಲುವು ತಳೆದಿಲ್ಲ. ಮತ್ತೊಮ್ಮೆ ಕಣಕ್ಕಿಳಿಯಲು ಅಂಕಿಸಂಖ್ಯೆ ಲೆಕ್ಕಾಚಾರ ತಮ್ಮ ಬಳಿ ಇಲ್ಲ ಎಂಬುದು ಅವರಿಗೂ ಗೊತ್ತಿದೆ. ಹೀಗಾಗಿ, ‘ಯಾರಾದರೂ ಅಧ್ಯಕ್ಷರಾಗಲಿ, ಚುನಾವಣೆ ಬಗ್ಗೆ ಯೋಚನೆಯನ್ನೂ ಮಾಡಿಲ್ಲ, ಆರೋಪಗಳಿಗೆ ಕಾಲವೇ ಉತ್ತರಿಸಲಿದೆ’ ಅಂದುಕೊಂಡು ಸುಮ್ಮನಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬ್ಯಾಂಕ್‌ನತ್ತ ಬರುವ ಸಾಧ್ಯತೆಯೂ ಕಡಿಮೆ ಎನ್ನಲಾಗಿದೆ.

ಮೈತ್ರಿಕೂಟ ‘ಸ್ವಿಚ್ಡ್‌ ಆಫ್‌ ಮೋಡ್‌’

ಡಿಸಿಸಿ ಬ್ಯಾಂಕ್‌ನ ಚುನಾವಣೆ ನಡೆಯುತ್ತಿದ್ದರೂ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ‘ಸ್ವಿಚ್ಡ್‌ ಆಫ್‌ ಮೋಡ್‌’ನಲ್ಲಿದೆ. ಮೈತ್ರಿಕೂಟದಿಂದ ಈವರೆಗೆ ಯಾವುದೇ ಚರ್ಚೆ, ಮಾತುಕತೆ ನಡೆದಿಲ್ಲ. ರಾಜಕೀಯ ತಂತ್ರಗಾರಿಕೆ ರೂಪಿಸಲು ‘ಅಂಕಿಸಂಖ್ಯೆ’ಗಳು ತಮ್ಮ ಪರವಾಗಿಲ್ಲ ಎಂಬುದು ಅವರಿಗೂ ಗೊತ್ತಿದೆ. ಈ ಎರಡೂ ಪಕ್ಷಗಳ ಬೆಂಬಲಿತ ನಿರ್ದೇಶಕರು ಕೇವಲು ಮೂವರು ಇದ್ದಾರೆ. ಅವರು ತಮ್ಮ ನಡೆ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಚುನಾವಣೆಗೆ ಸಕಲ ಸಿದ್ಧತೆ

ಡಿಸಿಸಿ ಬ್ಯಾಕ್‌ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈಗಾಗಲೇ ಬ್ಯಾಂಕ್‌ನ ನಿರ್ದೇಶಕರಿಗೆ ನೋಟಿಸ್‌ ಹಾಗೂ ನಾಮಪತ್ರದ ಪ್ರತಿ ನೀಡಿದ್ದೇವೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಪ್ರತ್ಯೇಕವಾಗಿ ಮತಪತ್ರ ಹಾಗೂ ಮತ ಪೆಟ್ಟಿಗೆ ಇರಲಿದೆ. ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ. ಒಂದಕ್ಕಿಂತ ಹೆಚ್ಚು ಉಮೇದುವಾರಿಕೆ ಸಲ್ಲಿಕೆಯಾದರೆ ಮತದಾನ ನಡೆಯಲಿದೆ.

ಜಂಬಗಿ ರೇಣುಕಾಪ್ರಸಾದ್‌ ದಿಲೀಪ್‌, ಚುನಾವಣಾಧಿಕಾರಿ, ಡಿಸಿಸಿ ಬ್ಯಾಂಕ್‌

ಡಿಸಿಸಿ ಬ್ಯಾಂಕ್‌ನ ಚುನಾಯಿತ ನಿರ್ದೇಶಕರು

ನಿರ್ದೇಶಕರು; ಕ್ಷೇತ್ರ; ಬೆಂಬಲ

ಕೊತ್ತೂರು ಮಂಜುನಾಥ್; ಮುಳಬಾಗಿಲು/ಕೋಲಾರ; ಕಾಂಗ್ರೆಸ್‌

ಎಂ.ರೂಪಕಲಾ ಶಶಿಧರ್; ಕೆಜಿಎಫ್; ಕಾಂಗ್ರೆಸ್‌

ಎಸ್.ಎನ್.ಸುಬ್ಬಾರೆಡ್ಡಿ; ಬಾಗೇಪಲ್ಲಿ; ಕಾಂಗ್ರೆಸ್‌

ರಮೇಶ್‌ ಡಿ.ಎಸ್‌.; ಮಾಲೂರು; ಕಾಂಗ್ರೆಸ್‌

ಎ.ನಾಗರಾಜ; ಶಿಡ್ಲಘಟ್ಟ; ಕಾಂಗ್ರೆಸ್‌

ಕೆ.ಎನ್‌.ರಂಗನಾಥಾಚಾರಿ; ಬಂಗಾರಪೇಟೆ; ಕಾಂಗ್ರೆಸ್‌

ಎ.ಸಿ.ನಾಗರತ್ನ; ಶ್ರೀನಿವಾಸಪುರ; ಕಾಂಗ್ರೆಸ್‌

ಭಾಸ್ಕರರೆಡ್ಡಿ ಕೆ.ವಿ; ಚೇಳೂರು; ಕಾಂಗ್ರೆಸ್‌

ಖಾಜಿಕಲ್ಲಹಳ್ಳಿ ಮುನಿರಾಜು; ನರಸಾಪುರ; ಕಾಂಗ್ರೆಸ್‌

ಎಚ್‌.ವಿ.ವಿನೋದ್‌ ಕುಮಾರ್; ಮಾಲೂರು; ಕಾಂಗ್ರೆಸ್‌

ಮೋಹನ್‌ ರೆಡ್ಡಿ; ಚಿಕ್ಕಬಳ್ಳಾಪುರ; ಕಾಂಗ್ರೆಸ್‌

ವೆಂಕಟರಮಣರೆಡ್ಡಿ ಕೆ.ಎನ್‌.; ಗೌರಿಬಿದನೂರು; ಸ್ವತಂತ್ರ (ಕಾಂಗ್ರೆಸ್)

ಜೆ.ವಿ.ಹನುಮೇಗೌಡ; ಮಂಚೇನಹಳ್ಳಿ; ಬಿಜೆಪಿ (ಎನ್‌ಡಿಎ)

ವಿ.ರಘುಪತಿರೆಡ್ಡಿ; ಮುಳಬಾಗಿಲು; ಜೆಡಿಎಸ್‌ (ಎನ್‌ಡಿಎ)

ಎಚ್‌.ಎನ್‌.ಮಂಜುನಾಥ್‌ ರೆಡ್ಡಿ; ಗುಡಿಬಂಡೆ; ಬಿಜೆಪಿ (ಎನ್‌ಡಿಎ)

ಬ್ಯಾಲಹಳ್ಳಿ ಎಂ.ಗೋವಿಂದಗೌಡ; ಕೋಲಾರ; ಪಕ್ಷೇತರ

ಚಿಂತಾಮಣಿ: ಫಲಿತಾಂಶ ಪ್ರಕಟವಾಗಿಲ್ಲ

ಚಿಕ್ಕಬಳ್ಳಾಪುರ; ಫಲಿತಾಂಶ ಪ್ರಕಟವಾಗಿಲ್ಲ

ಎಸ್‌.ಎನ್‌.ನಾರಾಯಣಸ್ವಾಮಿ; ಬಂಗಾರಪೇಟೆ; ಕಾಂಗ್ರೆಸ್‌

ಅಪೆಕ್ಸ್‌ ಬ್ಯಾಂಕ್‌; ಬೆಂಗಳೂರು; ಅಧಿಕಾರಿ ವರ್ಗ

ಸಹಕಾರ ಇಲಾಖೆ; ಬೆಂಗಳೂರು; ಅಧಿಕಾರಿ ವರ್ಗ

ಯಾರ ಪರ ಎಷ್ಟು ಮಂದಿ ನಿರ್ದೇಶಕರು?

* ಕಾಂಗ್ರೆಸ್‌ ಪರ ನಿರ್ದೇಶಕರು; 12 (ನಾಮನಿರ್ದೇಶಿತ ನಾರಾಯಣಸ್ವಾಮಿ ಸೇರಿ)

* ಬಿಜೆಪಿ (ಇಬ್ಬರು), ಜೆಡಿಎಸ್‌ (ಒಬ್ಬರು) ಪರ ನಿರ್ದೇಶಕರು; 03

* ಪಕ್ಷೇತರ (ಬ್ಯಾಲಹಳ್ಳಿ ಗೋವಿಂದಗೌಡ)–01

* ತಟಸ್ಥ (ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್‌ ಶಾಸಕರೊಬ್ಬರು): 01

* ಅಧಿಕಾರಿ ವರ್ಗದ ನಿರ್ದೇಶಕರು; 02 (ಸಹಜವಾಗಿ ಕಾಂಗ್ರೆಸ್‌ ಪರ)

* ಇನ್ನೂ ಫಲಿತಾಂಶ ಘೋಷಣೆ ಆಗದ ನಿರ್ದೇಶಕ ಸ್ಥಾನ; 02

l ಕಾಂಗ್ರೆಸ್‌ ಪರ ನಿರ್ದೇಶಕರು; 12 (ನಾಮನಿರ್ದೇಶಿತ ನಾರಾಯಣಸ್ವಾಮಿ ಸೇರಿ)

l ಬಿಜೆಪಿ (ಇಬ್ಬರು), ಜೆಡಿಎಸ್‌ (ಒಬ್ಬರು) ಪರ ನಿರ್ದೇಶಕರು; 03

l ಪಕ್ಷೇತರ (ಬ್ಯಾಲಹಳ್ಳಿ ಗೋವಿಂದಗೌಡ)–01

l ತಟಸ್ಥ (ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್‌ ಶಾಸಕರೊಬ್ಬರು): 01

l ಅಧಿಕಾರಿ ವರ್ಗದ ನಿರ್ದೇಶಕರು; 02 (ಸಹಜವಾಗಿ ಕಾಂಗ್ರೆಸ್‌ ಪರ)

l ಇನ್ನೂ ಫಲಿತಾಂಶ ಘೋಷಣೆ ಆಗದ ನಿರ್ದೇಶಕ ಸ್ಥಾನ; 02

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ