
ಹಾರಂಗಿ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಬಿಡುಗಡೆ
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ಹಾರಂಗಿ ಜಲಾಶಯದಿಂದ ಪ್ರಸಕ್ತ ವರ್ಷ ಕಟ್ಟು ಪದ್ದತಿಯಲ್ಲಿ ನಾಲೆಗಳಿಗೆ ನೀರು ಬಿಡಲು ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸೆ. 1ರಿಂದ ನೀರು ಬಿಡಲು ಆರಂಭಿಸಲಾಗಿದ್ದು, 20ರವರೆಗೂ ನಾಲೆಗಳಲ್ಲಿ ನೀರು ಹರಿಯಲಿದೆ. ನಂತರ, ಅ. 1ರಿಂದ 20ರವರೆಗೆ, ಅ.31ರಿಂದ ನವೆಂಬರ್ 19ರವರೆಗೆ ನೀರು ಹರಿಸಲಾಗುತ್ತದೆ.
ರೈತರು ಯಾವುದೇ ದೀರ್ಘಾವಧಿ ಬೆಳೆಗಳನ್ನು ಅಂದರೆ, ಭತ್ತ ಮತ್ತು ಕಬ್ಬು ಬೆಳೆಯಬಾರದು. ಇವುಗಳಿಗೆ ಬದಲಾಗಿ ಅರೆ-ಖುಷ್ಕಿ ಬೆಳೆಗಳು ಅಂದರೆ, ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಬಹುದು. ಮುಂಗಾರಿ ಕೊರತೆಯಿಂದ ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದ್ದಲ್ಲಿ ನೀರು ಬಿಡುವ ದಿನಾಂಕಗಳೂ ಪರಿಷ್ಕರಣೆಯಾಗುತ್ತದೆ ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.