ಮೇವಿನ ಕೊರತೆ: ಬಂಗಾರಪೇಟೆಯಲ್ಲಿ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಳ

ಮೇವಿನ ಕೊರತೆ: ಬಂಗಾರಪೇಟೆಯಲ್ಲಿ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಳ

ಮೇವಿನ ಕೊರತೆ: ಬಂಗಾರಪೇಟೆಯಲ್ಲಿ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಳ

ಬಂಗಾರಪೇಟೆ: ತಾಲ್ಲೂಕಿನಾದ್ಯಂತ ಮಳೆ ಕೊರತೆಯಿಂದಾಗಿ ಜಾನುವಾರುಗಳ ಮೇವಿಗೆ ಕೊರತೆ ಉಂಟಾಗಿದ್ದು, ತಮಿಳುನಾಡಿನ ಒಣಹುಲ್ಲಿಗೆ ಬೇಡಿಕೆ ಸೃಷ್ಟಿಯಾಗಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ಶೇ 70ಕ್ಕೂ ಹೆಚ್ಚು ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿದ್ದು, ಹಾಲಿನ ಆದಾಯವನ್ನೇ ನೆಚ್ಚಿಕೊಂಡಿವೆ. ಆದರೆ, ಕೆರೆ-ಕಟ್ಟೆ ಒಣಗಿ, ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ಹಸಿರು ಮೇವು ಇಲ್ಲದಂತಾಗಿದೆ. ಹಾಗಾಗಿ ನೆರೆಯ ತಮಿಳುನಾಡಿನ ಕೃಷ್ಣಗಿರಿ, ಹೊಸೂರು, ಧಾರಾಪುರಿ ಹಾಗೂ ವೆಲ್ಲೂರು ಭಾಗಗಳಿಂದ ಲಾರಿಗಳಲ್ಲಿ ಬರುವ ಒಣ ಹುಲ್ಲೇ ‌ಇಲ್ಲಿನ ಜಾನುವಾರುಗಳಿಗೆ ಆಹಾರವಾಗಿದೆ.

ಪ್ರತಿದಿನ ಹತ್ತಾರು ಲಾರಿಗಳಲ್ಲಿ ಒಣ ಹುಲ್ಲು ತಾಲ್ಲೂಕಿನ ಪ್ರಮುಖ ರಸ್ತೆಬದಿ ಹಾಗೂ ಗ್ರಾಮಗಳ ಮಾರುಕಟ್ಟೆಗೆ ಆಗಮಿಸುತ್ತಿದೆ. ಆದರೆ, ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿದ್ದು, ಮಧ್ಯವರ್ತಿಗಳು ಮತ್ತು ಸಾಗಣೆದಾರರು ದರವನ್ನು ಹೆಚ್ಚಿಸಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಹೊರೆ (ಬೀಡು) ಒಣ ಹುಲ್ಲಿನ ಬೆಲೆ ₹150 ರಿಂದ ₹180 ಇತ್ತು. ಆದರೆ, ಈಗ ದರ ದುಪ್ಪಟ್ಟಾಗಿದೆ. ಗುಣಮಟ್ಟಕ್ಕೆ ಅನುಗುಣವಾಗಿ ₹280 ರಿಂದ ₹320 ರವರೆಗೆ ಮಾರಾಟವಾಗುತ್ತಿದೆ. ಸಣ್ಣ ಹಾಗೂ ಅಂಚಿನ ರೈತರು ಕನಿಷ್ಠ 3 ರಿಂದ 5 ಹಸುಗಳನ್ನು ಇಟ್ಟುಕೊಂಡಿದ್ದು, ದಿನಕ್ಕೆ ಕನಿಷ್ಠ 2ರಿಂದ 3 ಹೊರೆ ಹುಲ್ಲು ಕಡ್ಡಾಯವಾಗಿ ಬೇಕಾಗುತ್ತದೆ. ಇದರ ಜೊತೆಗೆ ಹಿಂಡಿ, ಬೂಸಾ ಹಾಗೂ ತೌಡಿನ ಬೆಲೆಯೂ ಏರಿಕೆಯಾಗಿದ್ದು, ಹಾಲಿನಿಂದ ಬರುವ ಆದಾಯಕ್ಕಿಂತ ಮೇವಿನ ವೆಚ್ಚವೇ ಹೆಚ್ಚಾಗಿದೆ. ಮೇವಿನ ಅಭಾವ ಹೀಗೆಯೇ ಮುಂದುವರೆದರೆ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತದೆ.

ತಾಲ್ಲೂಕಿನಲ್ಲಿ ತೀವ್ರಗೊಳ್ಳುತ್ತಿರುವ ಮೇವಿನ ಬಿಕ್ಕಟ್ಟನ್ನು ನೀಗಿಸಲು ಪಶುಸಂಗೋಪನೆ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣವೇ ಜಾಗೃತಗೊಳ್ಳಬೇಕಿದೆ. ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ತಕ್ಷಣವೇ ಮೇವಿನ ಬ್ಯಾಂಕ್‌ ಆರಂಭಿಸಬೇಕು ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ಒಣ ಮತ್ತು ಹಸಿರು ಮೇವನ್ನು ವಿತರಿಸಬೇಕೆಂಬುದು ರೈತರ ಒತ್ತಾಯವಾಗಿದೆ.

ರಿಯಾಯಿತಿ ದರದಲ್ಲಿ ಹುಲ್ಲು ಪೂರೈಸಿ

ಬೂಸಾ, ಹಿಂಡಿ ಬೆಲೆ ಈಗಾಗಲೇ ಶೇ 20ರಷ್ಟು ಹೆಚ್ಚಾಗಿದೆ. ಈಗ ಒಣ ಹುಲ್ಲಿಗೂ ಅಭಾವ ಶುರುವಾದರೆ ಸಣ್ಣ ರೈತರು ಬದುಕುವುದು ಹೇಗೆ? ಸರ್ಕಾರ ತಕ್ಷಣವೇ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ಹಾಕಿ ಮೇವಿನ ಅಕ್ರಮ ಸಾಗಣೆ ತಡೆಯಬೇಕು. ಜೊತೆಗೆ ತಾಲ್ಲೂಕಿಗೆ ಶೇ 50ರಷ್ಟು ರಿಯಾಯಿತಿಯಲ್ಲಿ ಹುಲ್ಲು ಪೂರೈಸಬೇಕು

ಆರ್.ಕೆ.ಶಿವಕುಮಾರ್, ರೈತ, ಕುಂದರಸನಹಳ್ಳಿ

ತಾಲ್ಲೂಕಿನಾದ್ಯಂತ ನೀರಿಲ್ಲದೆ ಹಸಿರು ಮೇವು ಸಂಪೂರ್ಣ ಒಣಗಿದೆ. ತಮಿಳುನಾಡಿನಿಂದ ಬರುವ ಹುಲ್ಲಿಗೆ ವ್ಯಾಪಾರಿಗಳು ಬೇಕಾಬಿಟ್ಟಿ ಬೆಲೆ ಕಟ್ಟುತ್ತಿದ್ದಾರೆ. ತಾಲ್ಲೂಕು ಆಡಳಿತ ತಕ್ಷಣವೇ ಪ್ರತಿ ಹೋಬಳಿಯಲ್ಲೂ ಮೇವಿನ ಬ್ಯಾಂಕ್ ಆರಂಭಿಸದಿದ್ದರೆ, ರೈತರು ಹಸುಗಳನ್ನು ಸಂತೆಗಳಲ್ಲಿ ಕನಿಷ್ಠ ಬೆಲೆಗೆ ಮಾರಾಟ ಮಾಡುವ ದುಸ್ಥಿತಿ ನಿರ್ಮಾಣವಾಗಲಿದೆ.

ಮೂರ್ತಿ, ‌ಗೊಡಗಮಂದೆ ಹೈನುಗಾರ

ಶೀಘ್ರವೇ ಮೇವಿನ ಬ್ಯಾಂಕ್ ಆರಂಭ

ತಾಲ್ಲೂಕಿನಲ್ಲಿ ಎದುರಾಗಿರುವ ಮೇವಿನ ಅಭಾವವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು. ಅಧಿಕಾರಿಗಳ ಜಂಟಿ ಪರಿಶೀಲನೆ ನಡೆಸಿ, ಅಗತ್ಯವಿರುವ ಹೋಬಳಿಗಳಲ್ಲಿ ಶೀಘ್ರವೇ ಮೇವಿನ ಬ್ಯಾಂಕ್ ಹಾಗೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.

ಎಚ್.‌ರವಿಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬಂಗಾರಪೇಟೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ