
ಕಲಬುರಗಿ: ಸಿದ್ದರಾಮಯ್ಯ ಮೂರ್ತಿ ತೆರವು; ಕುರುಬ ಸಮಾಜದಿಂದ ಬೃಹತ್ ಪ್ರತಿಭಟನೆ
ಕಲಬುರಗಿ: ನಗರದ ಅಫಜಲಪುರ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿ ತೆರವು ಖಂಡಿಸಿ ಹಾಲುಮತ ಸಮುದಾಯದ ಸಾವಿರಾರು ಜನರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸೂಪರ್ ಮಾರ್ಕೆಟ್ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಬಳಿ ಜಮಾಯಿಸಿದ್ದ ಸಾವಿರಾರು ಮಂದಿ, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
'ನಮ್ಮ ಸಿದ್ದರಾಮಯ್ಯ ನಮ್ಮ ಹೆಮ್ಮೆ', 'ಸಿದ್ದರಾಮಯ್ಯ ಮೂರ್ತಿ ತೆರಗೊಳಿಸಿದ ಪಾಲಿಕೆಗೆ ಧಿಕ್ಕಾರ' ಎಂಬ ಭಿತ್ತಿ ಫಲಕ ಹಿಡಿದು, ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ, ಭಕ್ತಕನಕದಾಸ ಚಿತ್ರವುಳ್ಳ ಭಂಡಾರ ಬಣ್ಣದ ಬಾವುಟ ಬೀಸಿ ಶಕ್ತಿ ಪ್ರದರ್ಶಿಸಿದರು. ತಮಟೆ ವಾದನ, ಡೊಳ್ಳು ವಾದನದ ಸದ್ದು ಜೋರಾಗಿದೆ.
ಈ ಹೋರಾಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಕುರುಬ ಸಮುದಾಯ ಸಾವಿರಾರು ಜನ ಪಾಲ್ಗೊಂಡಿದ್ದಾರೆ.