ಹುಬ್ಬಳ್ಳಿ | ಕೈಕೊಟ್ಟ ಮಳೆ, ಬೆನ್ನಟ್ಟಿದ ರೋಗ: ಸಂಕಷ್ಟದಲ್ಲಿ ರೈತರು

ಹುಬ್ಬಳ್ಳಿ | ಕೈಕೊಟ್ಟ ಮಳೆ, ಬೆನ್ನಟ್ಟಿದ ರೋಗ: ಸಂಕಷ್ಟದಲ್ಲಿ ರೈತರು

ಹುಬ್ಬಳ್ಳಿ | ಕೈಕೊಟ್ಟ ಮಳೆ, ಬೆನ್ನಟ್ಟಿದ ರೋಗ: ಸಂಕಷ್ಟದಲ್ಲಿ ರೈತರು

ಹುಬ್ಬಳ್ಳಿ: ಒಂದೆಡೆ ಮಳೆ ಕೊರತೆಯಿಂದ ಮಳೆಯಾಶ್ರಿತ (ಖುಷ್ಕಿ) ಬೆಳೆಗಳೆಲ್ಲ ಒಣಗಿ ಹಾಳಾಗಿದ್ದರೆ, ಇನ್ನೊಂದೆಡೆ ನೀರಾವರಿ ಪ್ರದೇಶದಲ್ಲಿ ಬೆಳೆದ ತರಕಾರಿ ಬೆಳೆಗಳು ಸಹ ರೋಗಕ್ಕೆ ತುತ್ತಾಗುತ್ತಿವೆ. ‘ಮಳೆ ಇದ್ದರೂ, ಇಲ್ಲದಿದ್ದರೂ ರೈತರ ಬದುಕು ಎಂದಿಗೂ ಸಂಕಷ್ಟ’ ಎಂಬುದಕ್ಕೆ ಕಿತ್ತೂರು ಕರ್ನಾಟಕ ಭಾಗದ ಗ್ರಾಮಗಳು ನಿದರ್ಶನವಾಗಿವೆ.

ಧಾರವಾಡ ಅಲ್ಲದೇ, ಬೆಳಗಾವಿ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡದ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಕೆಲ ಕಡೆ ರೈತರು ಟ್ಯಾಂಕರ್‌ ನೀರು ಮೂಲಕ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸಿದರೆ,ಕೆಲ ಕಡೆ ಸ್ವತಃ ರೈತರೇ ಬೆಳೆಗಳನ್ನು ನಾಶಪಡಿಸಿದ್ದಾರೆ. ಮಳೆಯಿಲ್ಲದೇ, ಬೆಳೆಯೂ ಇಲ್ಲದೇ ರೈತರು ದಿಕ್ಕು ತೋಚದ ಸ್ಥಿತಿಯಲ್ಲಿ ದಿನಗಳನ್ನು ದೂಡುವಂತಾಗಿದೆ.

ಹುಬ್ಬಳ್ಳಿ ತಾಲ್ಲೂಕಿನ ಹೊರವಲಯದ ಗಾಮನಗಟ್ಟಿ ಗ್ರಾಮವು ಗಾಮನಗಟ್ಟಿಯು ಕೃಷಿ ಪ್ರಧಾನ ಗ್ರಾಮ. ಇಲ್ಲಿನ ರೈತರು ಮುಂಗಾರಿನಲ್ಲಿ ಹೆಸರು, ಉದ್ದು, ಸೋಯಾಬೀನ್‌, ಶೇಂಗಾ (ನೆಲಗಡಲೆ), ಹತ್ತಿ ಬೆಳೆದರೆ, ಹಿಂಗಾರಿನಲ್ಲಿ ಮೆಕ್ಕೆ ಜೋಳ, ತೊಗರಿ, ಕಡಲೆ ಬೆಳೆಯುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ಎದುರಾದರೆ ಬೆಳೆಗಳು ಕೈಕೊಡಬಹುದು ಎಂದು, ಮುಂಜಾಗ್ರತೆಯಾಗಿ ಆ ಬೆಳೆಗಳ ಜೊತೆಗೆ, ಕೊಳವೆಬಾವಿ ಅವಲಂಬಿಸಿ ತರಹೇವಾರಿ ತರಕಾರಿ ಬೆಳೆಯುತ್ತಾರೆ. ಆದರೆ, ಪ್ರಸ್ತುತ ವರ್ಷ ತರಕಾರಿ ಬೆಳೆಗಳು ಸಹ ರೋಗಗಳಿಗೆ ತುತ್ತಾಗಿವೆ. ನೀರಾವರಿ ಬೆಳೆಗಳು ಕೂಡಾ ರೈತರ ಕೈ ಹಿಡಿದಿಲ್ಲ.

ರೈತ ಶಿವಾನಂದ ಮಾಳನ್ನವರ ಅವರು ಮುಂಗಾರಿನಲ್ಲಿ ಸೋಯಾಬೀನ್‌ ಬಿತ್ತನೆ ಮಾಡಿದ್ದರು. ಮಳೆ ಕೊರತೆ ಕಾರಣ ಎರಡು ಎಕರೆ ಹೊಲದಲ್ಲಿ ₹20 ಸಾವಿರ ವೆಚ್ಚ ಮಾಡಿ ಮೂಲಂಗಿ ಬೆಳೆದಿದ್ದರು. ಇದರ ಬೇರುಗಳಿಗೆ ಗೊಣ್ಣೆ ಹುಳು (ಬೇರು ಹುಳು) ಬಾಧಿಸಿದ್ದು, ಗಡ್ಡೆಗಳು ನಿರೀಕ್ಷಿತ ಗಾತ್ರದಲ್ಲಿ ಬೆಳೆದಿಲ್ಲ. ಬೆಳೆದ ಅಲ್ಪಸ್ವಲ್ಪ ಗಡ್ಡೆಗಳು ಮಣ್ಣಿನಲ್ಲಿಯೇ ಹಾಳಾಗಿವೆ. ಅವರು ಹೊಲದಲ್ಲಿ ಟ್ರ್ಯಾಕ್ಟರ್‌ ಓಡಿಸಿ, ಮೂಲಂಗಿ ಬೆಳೆ ನಾಶಪಡಿಸಿದ್ದಾರೆ.

‘ಮೂಲಂಗಿಯು ಭೂಮಿಯಡಿ ಬೆಳೆಯುವ ಗೆಡ್ಡೆ. ಮಣ್ಣಿನಲ್ಲಿರುವ ಕೀಟಗಳು ನೇರವಾಗಿ ಬೇರುಗಳನ್ನು ತಿಂದು, ರಂಧ್ರ ಮಾಡಿ ಹಾಳು ಮಾಡುತ್ತವೆ. ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವುಗಳ ನಿಯಂತ್ರಣಕ್ಕೆ ರಾಸಾಯನಿಕ ನೀಡಿದ್ದಾರೆ. ಈಗ ಮತ್ತೆ ಮೂಲಂಗಿ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ರೈತ ಶಿವಾನಂದ ಹೇಳಿದರು.

‘ಗೊಣ್ಣೆ ಹುಳು ಕಣ್ಣಿಗೆ ಕಾಣಿಸದ ಅತ್ಯಂತ ಸೂಕ್ಷ್ಮ ಹುಳುಗಳಾಗಿದ್ದು, ಮೂಲಂಗಿಯ ಬೇರುಗಳ ಮೇಲೆ ಗಂಟುಗಳನ್ನು ಉಂಟು ಮಾಡುತ್ತವೆ. ಇದರಿಂದ ಗಡ್ಡೆ ಡೊಂಕರಾಗುವುದು, ಸಣ್ಣದಾಗುವುದು ಅಥವಾ ಬೇರುಗಳು ಸೀಳಿಕೊಳ್ಳುವಿಕೆ ಉಂಟಾಗುತ್ತದೆ. ಮಣ್ಣಿನ ಆಳದಲ್ಲಿ ಇದ್ದುಕೊಂಡು ಗಡ್ಡೆಯ ಮುಖ್ಯ ಭಾಗ ಕಚ್ಚಿ ತಿನ್ನುವುದರಿಂದ, ಸೊಪ್ಪು ಹಳದಿಯಾಗಿ ಒಣಗಲು ಆರಂಭಿಸುತ್ತದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಹೇಳುತ್ತಾರೆ.

ಬಿಸಿಲಿನ ತೀವ್ರತೆ, ಕಮರಿದ ಬೆಳೆ

ಗಾಮನಗಟ್ಟಿ ಭಾಗದ ರೈತರು ಮೂಲಂಗಿ ಜೊತೆಗೆ ಕೊತ್ತಂಬರಿ, ಹರಗಿ, ಮೆಂತೆ, ಪಾಲಕ್‌, ಪುದೀನಾ ಸೊಪ್ಪು ಬೆಳೆದಿದ್ದಾರೆ. ಅವುಗಳ ಕಥೆಯೂ ಮೂಲಂಗಿ ಬೆಳೆಗಿಂತ ಭಿನ್ನವಾಗಿಲ್ಲ. ನಿತ್ಯ ಎರಡು–ಮೂರು ಬಾರಿ ನೀರುಣಿಸುತ್ತಿದ್ದರೂ, ಬಿಸಿಲಿನ ತೀವ್ರತೆಗೆ ಅವು ಬಾಡಿಹೋಗಿವೆ. ಕೆಲವೆಡೆ, ಬಿತ್ತನೆ ಮಾಡಿದ ಬೀಜ ಮೊಳಕೆಯಷ್ಟೇ ಒಡೆದಿದ್ದು, ಮೇಲೇಳದೆ ಅಲ್ಲಿಯೇ ಕಮರಿವೆ. ಹಾಕಿದ ಬಂಡವಾಳ ಸಿಗದೆ ಆತಂಕಗೊಂಡಿದ್ದಾರೆ.

ಜೋಳ ಮತ್ತು ಮೆಕ್ಕೆಜೋಳಗಳನ್ನೂ ಬೆಳೆದಿದ್ದು, ಬರದ ತೀವ್ರತೆಗೆ ಅವು ಒಣಗಿವೆ. ಆಳೆತ್ತರಕ್ಕೆ ಬೆಳೆದು ನಿಂತ ಗಿಡಗಳಲ್ಲಿನ ಅರೆಬರೆ ಫಸಲು ಒಣಗಿ ಅಲ್ಲಲ್ಲಿಯೇ ಬಿದ್ದಿವೆ. ನೀರಿನ ಕೊರತೆಯಿಂದ ಸೋಯಾಬೀನ್‌ ಗಿಡದ ಬೆಳವಣಿಗೆ ಕುಂಠಿತವಾಗಿ, ಫಸಲು ಸಹ ಅರ್ಧಂಬರ್ಧ ಬಂದಿವೆ. ಅವುಗಳನ್ನೇ ಕಿತ್ತು ರೈತರು ಮನೆಗೆ ಸಾಗಿಸುತ್ತಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ