
ಹುಬ್ಬಳ್ಳಿ | ಕಾರ್ಮಿಕರ, ಮಕ್ಕಳ ಕಲ್ಯಾಣಕ್ಕೆ ಸಹಾಯಧನ: 15,863 ಅರ್ಜಿ ತಿರಸ್ಕೃತ
ಹುಬ್ಬಳ್ಳಿ: ಕಾರ್ಮಿಕ ಇಲಾಖೆಯ ಕಟ್ಟಡಕಾರ್ಮಿಕರ ಹಾಗೂ ಅವರ ಮಕ್ಕಳಮದುವೆಗೆ ಸಹಾಯಧನ ಯೋಜನೆಯಡಿ ನೆರವು ಕೋರಿ ಧಾರವಾಡ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸಲ್ಲಿಕೆಯಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ 15,863 ಅರ್ಜಿಗಳು ತಿರಸ್ಕೃತವಾಗಿವೆ.
ಮದುವೆಗೆ ಸಹಾಯಧನ ಪಡೆಯಲು ಒಟ್ಟು 26,239 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 10,376 ಅರ್ಜಿಗಳು ಮಾತ್ರ ಮಂಜೂರಾಗಿವೆ.
‘ದಿನಗೂಲಿ ಮಾಡುವ ನಾವು, ಮಗಳ ಮದುವೆಗೆ ಸಹಾಯಧನಕ್ಕೆ ಕೋರಿ, ಎರಡು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದೆವು. ಈವರೆಗೆ ಹಣ ಸಂದಾಯವಾಗಿಲ್ಲ. ಮದುವೆಗಾಗಿ ಸಾಲ ಮಾಡಿದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹುಬ್ಬಳ್ಳಿಯ ಕಟ್ಟಡ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.
‘ಮಗಳಿಗೆ ಈಗಾಗಲೇ ಮದುವೆಯಾಗಿತ್ತು, ಕೌಟುಂಬಿಕ ಕಾರಣಗಳಿಂದ ಆ ಮದುವೆ ಮುರಿದು ಬಿತ್ತು. ಮರು ಮದುವೆಗೆ ಸಹಾಯಧನದ ಅಗತ್ಯವಿದೆ. ಕಾರ್ಮಿಕ ಮಂಡಳಿಯು ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿ, ಸಹಾಯಧನದ ನೆರವುನೀಡಿದರೆ ಬಹಳಷ್ಟು ಕಾರ್ಮಿಕರಿಗೆ ಅನುಕೂಲವಾಗುವುದು’ ಎಂದು ಕಾರ್ಮಿಕ ಈರಪ್ಪ ಹಟ್ಟಿ ತಿಳಿಸಿದರು.
‘ನೋಂದಾಯಿತ ಕಾರ್ಮಿಕ ಫಲಾನುಭವಿ ಅಥವಾ ಇಬ್ಬರು ಮಕ್ಕಳ ಮದುವೆಗೆ ತಲಾ ₹60 ಸಾವಿರ ಮದುವೆ ಸಹಾಯಧನ (ಗೃಹಲಕ್ಷ್ಮಿ ಬಾಂಡ್) ನೀಡಲಾಗುತ್ತದೆ. ಕಾರ್ಮಿಕರ ಪ್ರಥಮ ಹಾಗೂ ಎರಡನೇ ಮಗವಿಗೂ ಈ ಯೋಜನೆ ಅನ್ವಯಿಸುತ್ತದೆ. ಆದರೆ ಮೂರನೇ ಮಗವಿಗೆ ಈ ಯೋಜನೆ ಅನ್ವಯಿಸುವುದಿಲ್ಲ’ ಎಂದು ಕಾರ್ಮಿಕ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮದುವೆಯಾಗಿ ಆರು ತಿಂಗಳ ಒಳಗೆ ಧನಸಹಾಯ ಕೋರಿ ಮಂಡಳಿಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬೇಕು. ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರು ನೋಂದಣಿಯಾದ ದಿನಾಂಕದಿಂದ ಮದುವೆ ದಿನಾಂಕದ ವರೆಗೆ ಮಂಡಳಿಯಲ್ಲಿ ಕನಿಷ್ಟ ಒಂದುವರ್ಷ ಸದಸ್ಯತ್ವವನ್ನು ಪೂರೈಸಿರಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು. ಈ ವೇಳೆ ದಾಖಲೆಗಳನ್ನು ತಪ್ಪಾಗಿ ನೀಡಿದ್ದರೆ, ಬ್ಯಾಂಕ್ ಪಾಸ್‌ಬುಕ್‌ಗೆ ಆಧಾರ್ ಲಿಂಕ್ ಆಗದಿದ್ದರೆ, ಅರ್ಜಿಗಳು ತಿರಸ್ಕೃತವಾಗಿರುತ್ತವೆ’ ಎಂದು ಮಾಹಿತಿ ನೀಡಿದರು. ಮಾಹಿತಿಗೆ ಸಂಪರ್ಕ ವೆಬ್‌ಸೈಟ್: https://kbocwwb.karnataka.gov.in
‘17,190 ಕಾರ್ಡ್ ರದ್ದು’
‘ಕಾರ್ಮಿಕರೆಂದು ಸುಳ್ಳು ಮಾಹಿತಿ ನೀಡಿ ಕೆಲವರು ನೋಂದಾಯಿಸಿಕೊಂಡು ಕಾರ್ಡ್‌ಗಳನ್ನು ಪಡೆದಿದ್ದಾರೆ. ಯೋಜನೆಗಳಿಗಾಗಿ ಅರ್ಜಿ ಹಾಕಿದಾಗ ಪರಿಶೀಲನೆ ವೇಳೆ ಅನರ್ಹರು ಎಂಬುದು ಗೊತ್ತಾಗಿದೆ’ ಎಂದು ಹುಬ್ಬಳ್ಳಿ– ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಸಚಿನ್ ವೈ. ಹಳೇಮನಿ ತಿಳಿಸಿದರು.
‘ಮಂಡಳಿಯಲ್ಲಿ ನೋಂದಣಿಗಾಗಿ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 98,367 ಜನ ಕಟ್ಟಡ ಕಾರ್ಮಿಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 47,163 ಜನರ ಅರ್ಜಿ ಮಂಜೂರಾಗಿದ್ದು, 51,204 ಜನರ ಅರ್ಜಿ ತಿರಸ್ಕೃತಗೊಂಡಿವೆ. 17,190 ಜನರ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ’ ಎಂದರು.
ತಾಲ್ಲೂಕು;ಒಟ್ಟು;ತಿರಸ್ಕೃತ;ಮಂಜೂರು
ಹುಬ್ಬಳ್ಳಿ;9,661;6,426;3,235
ಕಲಘಟಗಿ;5,588;2,953;2,635
ಕುಂದಗೋಳ;3,114;1,862;1,252
ಧಾರವಾಡ;2,807;1,732;1,075
ಅಣ್ಣಿಗೇರಿ;2,087;1,152;935
ನವಲಗುಂದ;1,494;862;632
ಅಳ್ನಾವರ;1,488;876;612