
ವಿಜಯ ದಶಮಿಗೆ ಯುದ್ಧ ಆರಂಭ: ಎಚ್‌ಡಿಕೆ ಘೋಷಣೆ
ಹಾಸನ: ‘ಸದ್ಯದಲ್ಲೇ ವಿಜಯ ದಶಮಿ ಶುರುವಾಗಲಿದೆ. ಅದರೊಂದಿಗೆ ನನ್ನ ಯುದ್ಧವೂ ಆರಂಭವಾಗಲಿದೆ. ಅಲ್ಲೋಲ ಕಲ್ಲೋಲ ಆಗುವಂತಹ ಸ್ಫೋಟಕ ಸುದ್ದಿ ಹೊರ ಬರುತ್ತೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯ ದಶಮಿ ಯುದ್ಧದ ಕಾಲ. ರಾಜ, ಮಹಾರಾಜರ ಕಾಲದಲ್ಲಿ ಆ ದಿನದಂದು ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿ ಯುದ್ಧಕ್ಕೆ ಹೋಗುತ್ತಿದ್ದರು. ಈ ಬಾರಿ ವಿಜಯ ದಶಮಿಗೆ ನಾನು ನಿರಾಸೆ ಮಾಡಲ್ಲ. ಮಾಧ್ಯಮ ಸ್ನೇಹಿತರಿಗೆ ಒಳ್ಳೆಯ ಆಹಾರ ಕೊಡುತ್ತೇನೆ’ ಎಂದರು.
‘ಈ ಹಿಂದೆ ಒಂದು ಸಾರಿ ನಾನು ಪೆನ್‌ಡ್ರೈವ್ ತೋರಿಸಿದ್ದೆ. ಅದು ಖಾಲಿ ಪೆನ್‌ಡ್ರೈವ್ ಆಗಿರಲಿಲ್ಲ. ಒಂದೇ ಸಾರಿ ಹೊಡೆಯಲು ಹೋಗಬೇಡಿ ಎಂದು ಆಗ ಕೆಲವು ಅನುಭವಸ್ಥರು ಸಲಹೆ ನೀಡಿದ್ದರು. ಅದಕ್ಕಾಗಿ ಸುಮ್ಮನಾಗಿದ್ದೆ. ಆದರೆ, ಈ ಬಾರಿ ಹಾಗಾಗಲ್ಲ’ ಎಂದರು.
‘ಇಡೀ ರಾಜ್ಯದ ತುಂಬಾ ಒಂದು ಲಕ್ಷ ಪೆನ್‌ಡ್ರೈವ್ ಹಂಚಿದ್ದ ಇದೇ ಡಿ.ಕೆ.ಶಿವಕುಮಾರ್, ವರ್ಗಾವಣೆಗಾಗಿ ಹಣ ವಸೂಲಿ ಮಾಡುವ ಬಗ್ಗೆ ಇಬ್ಬರು ಎಂಜಿನಿಯರ್ ಜೊತೆ ಮಾತನಾಡಿರುವುದು ಆ ಪೆನ್‌ಡ್ರೈವ್‌ನಲ್ಲಿ ಇತ್ತು. ಆಗ ಅದು ಔಟ್ ಡೇಟೆಡ್ ಆಗಿದೆ ಎಂದು ಸುಮ್ಮನಿದ್ದೆ. ಈಗ ಅಲ್ಲೋಲ ಕಲ್ಲೋಲ ಆಗುವಂತಹ ವಿಷಯ ನಿಮ್ಮ ಮುಂದೆ ಬರುತ್ತೆ’ ಎಂದು ಹೇಳಿದರು.
`ರಾಜಣ್ಣ, ಜಾರಕಿಹೊಳಿ, ನಾಗೇಂದ್ರನ್ನ ಮುಗಿಸಿದರು'
ಈಗಾಗಲೇ ಕೆ.ಎನ್. ರಾಜಣ್ಣನ ಧ್ವನಿ ನಿಲ್ಲಿಸಿದರು. ರಮೇಶ್ ಜಾರಕಿಹೊಳಿ ಅವರನ್ನು ಮುಗಿಸಿದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದ ಸತೀಶ್ ಜಾರಕಿಹೊಳಿ ಅವರನ್ನು ಹೇಗೆ ಮುಗಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು. ಪಾಪ ನಾಗೇಂದ್ರ ಅವರ ವಿಚಾರ ಯಾವ ರೀತಿ ನಡೆಯಿತೆಂದು ಗೊತ್ತಿದೆ ಎಂದು ಕುಮಾರಸ್ವಾಮಿ ಹರಿಹಾಯ್ದರು.