
ಹಿರಿಯೂರು: ವಿವಿ ಸಾಗರ ಉಳಿವಿಗೆ ಜಾಥಾ
ಹಿರಿಯೂರು: ‘ತಾಲ್ಲೂಕಿನ ವಿವಿ ಸಾಗರ ಅಣೆಕಟ್ಟೆ ಡೆಡ್ ಸ್ಟೋರೇಜ್ ಹಂತ ತಲುಪುವ ಮುನ್ನ ಎಚ್ಚರಗೊಳ್ಳದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಿಸಬೇಕಾಗುತ್ತದೆ’ ಎಂದು ವಿವಿ ಸಾಗರ ಉಳಿಸಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಎಚ್ಚರಿಸಿದರು.
ವಿವಿ ಪುರ ಗ್ರಾಮದಲ್ಲಿ ವಿವಿ ಸಾಗರ ಉಳಿವಿಗೆ ಮಂಗಳವಾರ ಹಮ್ಮಿಕೊಂಡಿದ್ದ ಜಾಥಾದ ವೇಳೆ ಗ್ರಾಮ ಸಭೆಯಲ್ಲಿ ಮಾತನಾಡಿದರು.
‘ವಿವಿ ಸಾಗರ ಜಲಾಶಯದಿಂದ ನೀರನ್ನು ಒಯ್ಯಲು ದಶ ದಿಕ್ಕುಗಳಲ್ಲೂ ಹಾದಿ ತೋಡಲಾಗುತ್ತಿದೆ. ಹಿರಿಯೂರು ತಾಲ್ಲೂಕಿನ ರೈತರ ಅಚ್ಚುಕಟ್ಟು ಪ್ರದೇಶಕ್ಕೆಂದು ಮೈಸೂರಿನ ಒಡೆಯರು ನಿರ್ಮಿಸಿದ್ದ ಅಣೆಕಟ್ಟೆಯನ್ನು ಬೇಕಾಬಿಟ್ಟಿ ಬಳಸಲು ಬಿಟ್ಟರೆ, ಇದು ಬರೀ ಕುಡಿಯುವ ನೀರಿನ ಜಲಾಶಯವಾಗುವ ಅಪಾಯವಿದೆ. ಇದನ್ನೇ ನಂಬಿರುವ ತಾಲ್ಲೂಕಿನ 25 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶದ ರೈತರು ಹಲವು ದಶಕಗಳಿಂದ ಕಾಪಾಡಿಕೊಂಡು ಬಂದಿರುವ ತೋಟಗಳನ್ನು ಕಳೆದು ಕೊಳ್ಳಬೇಕಾಗುತ್ತದೆ. ಈಗಲೇ ಎಚ್ಚರಗೊಂಡು ವಿವಿ ಅಣೆಕಟ್ಟೆಯನ್ನು ಉಳಿಸಿಕೊಳ್ಳೋಣ’ ಎಂದು ಮನವಿ ಮಾಡಿದರು.
‘ವಿವಿ ಸಾಗರ ಹಿರಿಯೂರು ತಾಲ್ಲೂಕಿನ ರೈತರಿಗೆ ಸೇರಿದ್ದು ಎಂದು ಮೈಸೂರು ಒಡೆಯರು ಸ್ಪಷ್ಟವಾಗಿ ಹೇಳಿದ್ದರೂ ನಮ್ಮಲ್ಲಿ ಸರಿಯಾದ ನಾಯಕತ್ವವಿಲ್ಲದ ಕಾರಣಕ್ಕೆ, ಬೇರೆ ಬೇರೆ ತಾಲ್ಲೂಕಿನವರು, ಬೇರೆ ಜಿಲ್ಲೆಯವರು ಜಲಾಶಯದ ಮೇಲೆ ಕಣ್ಣು ಹಾಕಿದ್ದಾರೆ’ ಎಂದು ಸಮಿತಿಯ ನಿರ್ದೇಶಕ ಪಿಟ್ಲಾಲಿ ಶ್ರೀನಿವಾಸ್ ಆರೋಪಿಸಿದರು.
ಜಂಟಿ ಕ್ರಿಯಾ ಸಮಿತಿ ಆರಂಭಿಸಿರುವ ವಿವಿ ಸಾಗರ ಉಳಿಸಿ ಕಾರ್ಯಕ್ರಮವನ್ನು ದೊಡ್ಡ ಆಂದೋಲನವನ್ನಾಗಿ ರೂಪಿಸದೇ ಹೋದಲ್ಲಿ ಭವಿಷ್ಯದಲ್ಲಿ ರೈತರ ಬದುಕು ಬೀದಿಗೆ ಬೀಳುವ ಅಪಾಯವಿದೆ ಎಂದು ರೈತ ಸಂಘದ ಮುಖಂಡ ದಸ್ತಗಿರಿ ಸಾಬ್ ಎಚ್ಚರಿಸಿದರು.
ಕಂಬದಹಳ್ಳಿ, ಕುರುಬರಹಳ್ಳಿ, ಅಮ್ಮನಹಟ್ಟಿ, ಕಾತ್ರಿಕೇನಳ್ಳಿ, ದೊಡ್ಡಘಟ್ಟ, ಕೂನಿಕೆರೆ, ಲಕ್ಕವ್ವನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಸಭೆಗಳನ್ನು ನಡೆಸಲಾಯಿತು.
ಪೆರಿಸ್ವಾಮಿ, ಸುಬ್ರಹ್ಮಣ್ಯಂ, ಗೋವಿಂದರಾಜು, ಆದಿವಾಲ ತ್ರಿಯಂಭಕಮೂರ್ತಿ, ಮುತ್ತುಕುಮಾರ್, ರಾಮಚಂದ್ರ ಕಸವನಹಳ್ಳಿ, ಎಂಟಿಬಿ ನಾಯ್ಕ, ಶಶಿಕಲಾ, ಗಡಾರಿ ಕೃಷ್ಣಪ್ಪ, ಸರವಣ, ರವಿಶಂಕರ್, ಕೆ.ಜಿ. ಹನುಮಂತರಾಯ, ಚಂದ್ರು ಕುಮಾರ್, ದೊಡ್ಡಘಟ್ಟ ಕುಮಾರ್, ಗುರುಮೂರ್ತಿ, ನಿಜಲಿಂಗಪ್ಪ, ಕುಬೇರಪ್ಪ, ಪವನ್, ಸುಂದರ್ ಪಾಲ್ಗೊಂಡಿದ್ದರು.