ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಪಾಲಿಕೆಗಳಿಗೆ ವರುಷ, ಜನರಿಗಿಲ್ಲ ಹರುಷ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಪಾಲಿಕೆಗಳಿಗೆ ವರುಷ, ಜನರಿಗಿಲ್ಲ ಹರುಷ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಪಾಲಿಕೆಗಳಿಗೆ ವರುಷ, ಜನರಿಗಿಲ್ಲ ಹರುಷ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಗ್ರೇಟರ್‌ ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ), ಜನರ ಮನೆಬಾಗಿಲಿಗೇ ಸೌಲಭ್ಯ ತಲುಪಿಸಲು ಐದು ನಗರ ಪಾಲಿಕೆಗಳಾಗಿ ವರ್ಷವಾದರೂ, ನಾಗರಿಕರ ಪಾಲಿಗೆ ಹರ್ಷವನ್ನೇನೂ ತಂದುಕೊಟ್ಟಿಲ್ಲ. ಏಕೆಂದರೆ, ನಗರ ಪಾಲಿಕೆಗಳು ಬಜೆಟ್‌ನಲ್ಲಿ ಹೇಳಿದ ಬಹುತೇಕ ಯೋಜನೆಗಳೆಲ್ಲ ಅನುಷ್ಠಾನವಾಗುವ ಹಂತದಲ್ಲೇ ಉಳಿದಿವೆ.

ಬಿಬಿಎಂಪಿಯಾಗಿದ್ದಾಗ ಅನುಮೋದನೆಯಾದ ಕಾಮಗಾರಿಗಳನ್ನೇ ಮುಂದುವರಿಸುವ, ಅವುಗಳಿಗೆ ವೇಗ ನೀಡುವ ಕೆಲಸವಷ್ಟೇ ಆಗಿದ್ದು, ನಗರ ಪಾಲಿಕೆಗಳಿಂದ ಹೊಸ ಯೋಜನೆಗಳು ಆರಂಭವಾಗಿಲ್ಲ. ರಸ್ತೆ, ಚರಂಡಿ, ಕಸ ನಿರ್ವಹಣೆ, ಬೀದಿ ದೀಪಗಳ ಕಾರ್ಯ ಮುಖ್ಯ ರಸ್ತೆಗಳಿಗೆ ಸೀಮಿತವಾಗಿದ್ದು, ವಸತಿ ಪ್ರದೇಶಗಳು ಹಾಗೂ ವಾರ್ಡ್‌ಮಟ್ಟಕ್ಕೆ ಈ ಕಾಮಗಾರಿಗಳು ಇನ್ನೂ ತಲುಪಿಲ್ಲ. ಐದು ನಗರ ಪಾಲಿಕೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂಬ ಸರ್ಕಾರದ ಭರವಸೆ ಇನ್ನೂ ವಾಸ್ತವಕ್ಕೆ ಬಂದಿಲ್ಲ. ಇದರಿಂದಾಗಿ ಆರ್ಥಿಕ ಸಂಕಷ್ಟ ಪಾಲಿಕೆಗಳನ್ನು ನಲುಗಿಸುತ್ತಿದೆ.

2025ರ ಸೆಪ್ಟೆಂಬರ್‌ 2ರಂದು ಜಿಜಿಎ ಹಾಗೂ ಉತ್ತರ, ದಕ್ಷಿಣ, ಕೇಂದ್ರ, ಪೂರ್ವ, ಪಶ್ಚಿಮ ಎಂದು ಐದು ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದವು. ಮೊದಲು ಮೂರು ತಿಂಗಳು ಸಿಬ್ಬಂದಿ, ಕಚೇರಿ, ಕಡತಗಳ ಹಂಚಿಕೆಯಲ್ಲೇ ಕಳೆದುಹೋಯಿತು. ನಗರ ಪಾಲಿಕೆಗಳ ಆಯುಕ್ತರು ಮೊದಲ ದಿನದಿಂದಲೇ ರಸ್ತೆಗಿಳಿದು ಕಾರ್ಯ ಆರಂಭಿಸಿದರೂ, ರಸ್ತೆ ಗುಂಡಿ ಮುಚ್ಚಿ, ಚರಂಡಿ ಹೂಳು ಎತ್ತಿ, ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವು ಮಾಡಿ ಎಂದು ಹೇಳುವುದಕ್ಕಷ್ಟೇ ಸೀಮಿತವಾಗಿತ್ತು. ಬಿಬಿಎಂಪಿಯಾಗಿದ್ದಾಗ ಆರಂಭವಾಗಿದ್ದ ಯೋಜನೆಗಳಿಗೆ ನಗರ ಪಾಲಿಕೆಗಳ ಗಡಿ ಸಮಸ್ಯೆಯಾಗಿತ್ತು. ಅಲ್ಲದೆ, ನಗರ ಪಾಲಿಕೆಗಳ ಬ್ಯಾಂಕ್‌ ಖಾತೆ ತೆರೆಯಲು ಮೂರು ತಿಂಗಳಾಯಿತು.‌

ಇದೆಲ್ಲ ಮುಗಿಯುವ ವೇಳೆಗೆ, 2026–27ನೇ ಸಾಲಿನ ಬಜೆಟ್‌ ತಯಾರಿ, ಅದರ ಮಂಡನೆ, ಅನುಷ್ಠಾನಕ್ಕೆ ಕ್ರಿಯಾಯೋಜನೆ ಮಾಡುವ ವೇಳೆಗೆ ಐದು ತಿಂಗಳು ಕಳೆದಿದ್ದು, ವಾರ್ಡ್‌ ಮಟ್ಟದ ಕಾಮಗಾರಿಗಳ ಟೆಂಡರ್‌ಗಳ ಪ್ರಕ್ರಿಯೆ ಇದೀಗ ಆರಂಭವಾಗಿದೆ. ಹೀಗಾಗಿ, ಕಳೆದ ಒಂದು ವರ್ಷದಲ್ಲಿ ರಸ್ತೆಗಳಿಗೆ ಡಾಂಬರು ಸೇರಿದಂತೆ ಕಣ್ಣಿಗೆ ಕಾಣುವ ಅಥವಾ ಗಮನಾರ್ಹ ಕಾರ್ಯಗಳು ನಗರ ಪಾಲಿಕೆಗಳಿಂದ ಆಗಿಲ್ಲ. 

ಬಿ–ಸ್ಮೈಲ್‌ಗೇ ಕಾಮಗಾರಿ: ಬೃಹತ್ ಯೋಜನೆಗಳನ್ನು ನಗರ ಪಾಲಿಕೆಗಳು ಕೈಗೊಳ್ಳುವಂತಿಲ್ಲ. ಅದಕ್ಕಾಗಿ ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿ–ಸ್ಮೈಲ್‌) ಸ್ಥಾಪಿಸಲಾಗಿದೆ. ಮೇಲುರಸ್ತೆ, ಎಲಿವೇಟೆಡ್‌ ಕಾರಿಡಾರ್‌, ಹೈಡೆನ್ಸಿಟಿ ಕಾರಿಡಾರ್‌, ಸುರಂಗ ರಸ್ತೆ, ವೈಟ್‌ ಟಾಪಿಂಗ್‌, ಬ್ಲ್ಯಾಕ್‌ ಟಾಪಿಂಗ್‌, ರಾಜಕಾಲುವೆ ಅಭಿವೃದ್ಧಿ ಎಲ್ಲವನ್ನೂ ಬಿ–ಸ್ಮೈಲ್‌ ವತಿಯಿಂದಲೇ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿರ್ವಹಿಸಲಾಗುತ್ತದೆ. ಆದರೆ, ಕಳೆದ ಒಂದು ವರ್ಷದಲ್ಲಿ ಒಂದೆರಡು ವೈಟ್‌ ಟಾಪಿಂಗ್‌ ಯೋಜನೆ ಹೊರತುಪಡಿಸಿದರೆ, ಒಂದೇ ಒಂದು ಬೃಹತ್‌ ಯೋಜನೆಗೂ ಚಾಲನೆ ಸಿಕ್ಕಿಲ್ಲ, ಶಂಕುಸ್ಥಾಪನೆ ಮಾಡಿಲ್ಲ. ಆದರೆ, ನಗರ ಪಾಲಿಕೆಗಳು ತಮ್ಮ ಯೋಜನೆಗಳನ್ನು ಅನುಷ್ಠಾನ ಮಾಡುತ್ತವೋ ಇಲ್ಲವೋ ಬಿ–ಸ್ಮೈಲ್‌ಗೆ ಹಣ ನೀಡಲೇಬೇಕಾಗಿದೆ. ಇದೇ ಪರಿಸ್ಥಿತಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಗೂ (ಬಿಎಸ್‌ಡಬ್ಲ್ಯುಎಂಎಲ್) ಅನ್ವಯಿಸುತ್ತದೆ. ತ್ಯಾಜ್ಯ ಸಂಗ್ರಹ, ವಿಲೇವಾರಿ, ಘಟಕಗಳ ನಿರ್ವಹಣೆ ಎಲ್ಲವೂ ಬಿಎಸ್‌ಡಬ್ಲ್ಯುಎಂಎಲ್‌ನದ್ದೇ ಆಗಿದ್ದು, ನಗರ ಪಾಲಿಕೆಗಳು ತಪ್ಪದೆ ಹಣ ನೀಡಬೇಕು. ಆದರೆ, ಕಸ ವಿಲೇವಾರಿ ಆಗದಿದ್ದರೆ ನಗರ ಪಾಲಿಕೆಗಳೇ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ. 

ನಗರ ಪಾಲಿಕೆಗಳು ತಮ್ಮ ಆಡಳಿತವನ್ನು ನಾಗರಿಕರ ಕೇಂದ್ರವಾಗಿ ಕೈಗೊಳ್ಳಲು ಹಲವು ರೀತಿಯಲ್ಲಿ ಅಡೆತಡೆಗಳಿದ್ದು, ಅವುಗಳನ್ನು ನಿರ್ವಹಿಸಲು ಸಾಕಷ್ಟು ಪ್ರಯಾಸ ಪಡುತ್ತಿವೆ. ಐದು ನಗರ ಪಾಲಿಕೆಗಳಾದ ಮೇಲೆ ನಮ್ಮ ಸಮಸ್ಯೆಗಳೆಲ್ಲ ತೀರುತ್ತವೆ ಎಂದುಕೊಂಡಿದ್ದ ನಾಗರಿಕರಿಗೆ ಮಾತ್ರ ಯಾವುದೇ ವ್ಯತ್ಯಾಸ ಕಂಡಿಲ್ಲ. ಹಿಂದಿನ ಸಮಸ್ಯೆಗಳು ಹಾಗೇ ಉಳಿದಿದ್ದು, ಕೇಳಿಸಿಕೊಳ್ಳುವ ಕಿವಿ ಮಾತ್ರ ಬದಲಾಗಿದೆ. ರಸ್ತೆ, ಚರಂಡಿ, ನೀರು, ಸ್ವಚ್ಛತೆ, ದೀಪ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳ ಕೊರತೆಯಾಗದಂತೆ ಬಯಸುತ್ತಿರುವ ಸಾರ್ವಜನಿಕರ ನಿರೀಕ್ಷೆಯ ಗಡಿಯನ್ನು ನಗರ ಪಾಲಿಕೆಗಳು ಇನ್ನೂ ಮುಟ್ಟಿಲ್ಲ.

ಜನರ ನಿರೀಕ್ಷೆ ಪೂರೈಸುವ ಸಂಕಲ್ಪ: ಮಹೇಶ್ವರ್‌ ರಾವ್

‘ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗಬೇಕೆಂದು ರಚನೆಯಾಗಿರುವ ಐದು ನಗರ ಪಾಲಿಕೆಗಳಲ್ಲಿ ಸಾಕಷ್ಟು ರೀತಿಯ ಸಾರ್ವಜನಿಕ ಕೇಂದ್ರಿತ ಕಾಮಗಾರಿಗಳಿಗೆ ಕಳೆದ ಒಂದು ವರ್ಷದಲ್ಲಿ ವೇಗ ದೊರೆತಿದೆ.

ಪಾಲಿಕೆಗಳ ಬಜೆಟ್‌ನಲ್ಲಿನ ಯೋಜನೆಗಳನ್ನು ಅನುಷ್ಠಾನ ಮಾಡಲು ಪ್ರಕ್ರಿಯೆ ನಡೆಯುತ್ತಿದ್ದು ಅವೆಲ್ಲ ಅಂತಿಮ ಹಂತದಲ್ಲಿವೆ. ಜನರ ನಿರೀಕ್ಷೆ ಅಪಾರವಾಗಿದ್ದು ಅವುಗಳನ್ನು ಪೂರೈಸುವ ಸಂಕಲ್ಪ ನಮ್ಮದಾಗಿದೆ’ ಎಂದು ಐದು ನಗರ ಪಾಲಿಕೆಗಳ ಆಡಳಿತಾಧಿಕಾರಿಯೂ ಆಗಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಒಂದು ವರ್ಷದಲ್ಲಿ ಜನಗಣತಿ ಪಾಲಿಕೆ ಚುನಾವಣೆಗಳಿಗೆ ತಯಾರಿ ಜಾತಿವಾರು ಸಮೀಕ್ಷೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ನಮ್ಮ ನಗರ ಪಾಲಿಕೆಗಳ ಆಯುಕ್ತರು ಸೇರಿದಂತೆ ಬಹುತೇಕ ಸಿಬ್ಬಂದಿ ಈ ಕಾರ್ಯಗಳಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದರು.

365 ದಿನದಲ್ಲಿ ಬಹುತೇಕ 180 ದಿನಗಳು ಈ ಪ್ರಕ್ರಿಯೆಗಳಿಗೆ ಮೀಸಲಾದವು. ಇದರಿಂದ ಹಲವು ರೀತಿಯ ಸವಾಲುಗಳು ಎದುರಾದರೂ ಜನರ ಸಮಸ್ಯೆಗಳನ್ನು ನೀಗಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ’ ಎಂದರು. ‘ವಾರ್ಡ್‌ ರಸ್ತೆಗಳ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳಿವೆ. ಅವುಗಳನ್ನು ಪರಿಹರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ನಗರ ಪಾಲಿಕೆಗಳ ಯೋಜನೆಗಳು ಟೆಂಡರ್‌ ಪ್ರಕ್ರಿಯೆಯ ಅಂತಿಮ ಹಂತದಲ್ಲಿದ್ದು ಶೀಘ್ರವೇ ಅನುಷ್ಠಾನವಾಗಲಿವೆ. ಐದು ನಗರ ಪಾಲಿಕೆಗಳಾದ್ದರಿಂದ ಸಿಬ್ಬಂದಿ ಹೆಚ್ಚಾಗಿದ್ದು ವೇತನದ ಬಾಬ್ತಿನ ವೆಚ್ಚ ಹೆಚ್ಚಾಯಿತು. ಬಿ–ಟು–ಎ ಖಾತಾ ಹಾಗೂ ಪ್ರೀಮಿಯಂ ಎಫ್‌ಎಆರ್‌ನಿಂದ ಕೋಟ್ಯಂತರ ರೂಪಾಯಿ ಬಂದಿದ್ದರಿಂದ ಪಾಲಿಕೆಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ಪಾದಚಾರಿ ಮಾರ್ಗ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಡೆಬ್ರಿಸ್‌ ತೆರವು ಕಾರ್ಯ ಜನರಿಂದ ಅತ್ಯಂತ ಪ್ರಶಂಸೆ ಪಡೆದಿದ್ದು ಮುಖ್ಯಮಂತ್ರಿ ಹಾಗೂ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವರ ನೆರವಿನಿಂದ ಇಂತಹ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ