
ಬೆಮಲ್ ನಗರದಲ್ಲಿ ಬೀದಿಬದಿ ಅಂಗಡಿಗಳ ತೆರಿಗೆ ವಸೂಲಿ, ನಗರಸಭೆಗೆ ನಷ್ಟ
ಕೆಜಿಎಫ್: ಬೆಮಲ್ ನಗರದಲ್ಲಿ ನಡೆಯುವ ಮಂತ್ಲಿ ಮಾರ್ಕೆಟ್‌ನಲ್ಲಿ ಅಂಗಡಿ ಮಾಲೀಕರಿಂದ ಗ್ರಾಮ ಪಂಚಾಯಿತಿ ತೆರಿಗೆ ವಸೂಲಿ ಮಾಡುತ್ತಿದ್ದು, ನಗರಸಭೆ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ.
ಪ್ರತಿ ತಿಂಗಳ ಕೊನೆಯ ದಿನದಂದು ಬೆಮಲ್ ಕಾರ್ಮಿಕರಿಗೆ ಸಂಬಳ ದಿನವಾಗಿದೆ. ಸಂಬಳ ದಿನದಂದು ಕಾರ್ಮಿಕ ಕುಟುಂಬಗಳಿಗೆ ಖರೀದಿಗೆ ಅನುಕೂಲವಾಗಲು ಬೆಮಲ್ ನಗರದ ಬೇತಮಂಗಲ ರಸ್ತೆಯಲ್ಲಿ ನೂರಾರು ರಸ್ತೆ ಬದಿಯ ಅಂಗಡಿಗಳು ತಲೆ ಎತ್ತುತ್ತವೆ. ರಸ್ತೆಯ ಎರಡೂ ಬದಿಯಲ್ಲಿ ಸುಮಾರು ಒಂದು ಕಿ.ಮೀ ನಷ್ಟು ಜಾಗದಲ್ಲಿ ಅಂಗಡಿಗಳು ಇರುತ್ತವೆ. ದಿನನಿತ್ಯದ ವಸ್ತುಗಳು, ಅಲಂಕಾರಿಕ ವಸ್ತುಗಳು, ಬಟ್ಟೆ, ಸೌಂದರ್ಯವರ್ಧಕ, ಪ್ಲಾಸ್ಟಿಕ್, ಸ್ಟೀಲ್ ವಸ್ತುಗಳು ಹೀಗೆ ಬಗೆ ಬಗೆಯ ವಸ್ತುಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯವಾಗಿ ಮಾಯಾ ಬಜಾರ್ ಎಂದು ಕರೆಯಲ್ಪಡುವ ಈ ಮಾರುಕಟ್ಟೆ ಮೊದಲು ಬೆಮಲ್ ನಗರದ ಸಂತೆ ಮೈದಾನದಲ್ಲಿ ನಡೆಯುತ್ತಿತ್ತು. ಆದರೆ, ಅಂಗಡಿ ಮಾಲೀಕರು ಸೃಷ್ಟಿಸುವ ಗಲೀಜು ತೆಗೆಯುವುದೇ ಬೆಮಲ್ ಆಡಳಿತಕ್ಕೆ ದೊಡ್ಡ ತಲೆನೋವಾಗಿತ್ತು. ಈ ಹಿನ್ನೆಲೆ ಮಂತ್ಲಿ ಮಾರುಕಟ್ಟೆಯನ್ನು ಬೆಮಲ್ ಪ್ರದೇಶದ ವ್ಯಾಪ್ತಿಯಲ್ಲಿ ನಿಷೇಧಿಸಲಾಯಿತು.
ನಂತರ, ಬಂಗಾರಪೇಟೆ- ಕೆಜಿಎಫ್ ಮುಖ್ಯರಸ್ತೆಯ ಆಜುಬಾಜಿನಲ್ಲಿ ಅಂಗಡಿಗಳು ತಲೆ ಎತ್ತಿದವು. ಸಂಚಾರ ವ್ಯವಸ್ಥೆಗೆ ಅಡ್ಡಿಯಾಗುವ ಹಿನ್ನೆಲೆ ಪೊಲೀಸರು ಈ ಮಾರ್ಗದಲ್ಲಿ ಕೂಡ ಅಂಗಡಿ ಇಡಲು ನಿಷೇಧಿಸಿದರು. ನಂತರ, ಆಲದ ಮರದಿಂದ ಕೃಷ್ಣಾಪುರದವರೆವಿಗೆ ರಸ್ತೆ ಪಕ್ಕದಲ್ಲಿ ಅಂಗಡಿಗಳನ್ನು ಹಾಕಲಾಯಿತು.
ತಿಂಗಳಿಗೊಮ್ಮೆ ನಡೆಯುವ ಮಾರುಕಟ್ಟೆಯಲ್ಲಿ ಡಿ.ಕೆ.ಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ದೊಡ್ಡ ಅಂಗಡಿಗೆ ನೂರು ರೂಪಾಯಿ ಮತ್ತು ಸಣ್ಣ ಅಂಗಡಿಗೆ ಐವತ್ತು ರೂಪಾಯಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಅವುಗಳನ್ನು ಪಂಚಾಯಿತಿಯ ಬಿಲ್ ಕಲೆಕ್ಟರ್ ವಸೂಲಿ ಮಾಡುತ್ತಿದ್ದಾರೆ. ರಸ್ತೆಯ ಒಂದು ಬದಿ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಇನ್ನೊಂದು ಬದಿ ರಾಬರ್ಟಸನ್‌ಪೇಟೆ ನಗರಸಭೆಗೆ ಸೇರುತ್ತದೆ. ನಗರಸಭೆ ವ್ಯಾಪ್ತಿಯಲ್ಲಿರುವ ಅಂಗಡಿಗಳಿಂದ ಕೂಡ ಗ್ರಾಮ ಪಂಚಾಯಿತಿ ತೆರಿಗೆ ವಸೂಲಿ ಮಾಡುತ್ತಿರುವುದು ಆಕ್ಷೇಪಕ್ಕೆ ಗುರಿಯಾಗಿದೆ.
ಜಾಗ ನಗರಸಭೆಗೆ ಸೇರಿದ್ದರೂ, ಅಂಗಡಿ ಮಾಲೀಕರು ಸೃಷ್ಟಿಸುವ ತ್ಯಾಜ್ಯವನ್ನು ಸ್ವಚ್ಛ ಮಾಡುವುದು ಗ್ರಾಮ ಪಂಚಾಯಿತಿ. ಆದ್ದರಿಂದಲೇ ಸ್ವಚ್ಛತೆ ದೃಷ್ಟಿಯಿಂದ ಹಣ ವಸೂಲಿ ಮಾಡಲಾಗುತ್ತಿದೆ. ನಗರಸಭೆಯಾಗಲಿ, ಬೆಮಲ್ ಸಂಸ್ಥೆಯಾಗಲಿ ಸ್ವಚ್ಛತೆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಹೇಳುತ್ತಾರೆ.
ಟೆಂಡರ್ ಕರೆದು ಕರ ವಸೂಲಿಗೆ ಕ್ರಮ
ಬೆಮಲ್ ನಗರದ ಮಾರುಕಟ್ಟೆ ಅಂಗಡಿಗಳ ಹಣವನ್ನು ನಗರಸಭೆ ಇದುವರೆವಿಗೂ ವಸೂಲಿ ಮಾಡುವ ಸಂಪ್ರದಾಯ ಬೆಳೆಸಿಕೊಂಡಿಲ್ಲ. ನಗರಸಭೆಗೆ ಇದು ಆದಾಯ ತರುವ ಮೂಲವಾಗಿದ್ದು, ಮುಂದಿನ ಮಾರ್ಚ್ ತಿಂಗಳೊಳಗೆ ಟೆಂಡರ್ ಕರೆದು ಕರ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.
ಶ್ರೀಧರ್, ನಗರಸಭೆ ಆಯುಕ್ತ