
ತರೀಕೆರೆ| ಹದಗೆಟ್ಟ ರಸ್ತೆಗಳು: ಪ್ರವಾಸಿ ತಾಣ ಸಂಪರ್ಕಿಸುವ ರಸ್ತೆಗಳೂ ಹೊಂಡಮಯ
ತರೀಕೆರೆ: ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಮಳೆಗಾಲದ ಮೊದಲೇ ಹದಗೆಟ್ಟಿದ್ದು, ಮಳೆ ಬಂದ ನಂತರ ನೀರು ತುಂಬಿಕೊಂಡು ಸಂಚಾರ ಮಾಡಲಾಗದ ಸ್ಥಿತಿಯಲ್ಲಿವೆ.
ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಪ್ರವಾಸಿ ತಾಣಗಳ ಪೈಕಿ ಕೆಮ್ಮಣ್ಣುಗುಂಡಿ, ಹೆಬ್ಬೆ ಫಾಲ್ಸ್, ಕಲ್ಲತ್ತಿಗಿರಿಗೆ ಸಂಪರ್ಕಿಸುವ ರಸ್ತೆ ಗುಂಡಿಮಯವಾಗಿದೆ.
ತರೀಕೆರೆಯಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಕೆಮ್ಮಣ್ಣುಗುಂಡಿಯ ಪ್ರಾಕೃತಿಕ ಸೌಂದರ್ಯ ಸವಿಯಲು ರಾಜ್ಯ, ಹೊರ ರಾಜ್ಯಗಳ ಪ್ರವಾಸಿಗರೂ ಬರುತ್ತಿದ್ದಾರೆ. ಪ್ರವಾಸಿಗರು ಗುಂಡಿ ಬಿದ್ದ ರಸ್ತೆಯಲ್ಲಿ ಸಾಗುವಾಗ ಹೈರಾಣಾಗಿ ಸಂಬಂಧಪಟ್ಟವರಿಗೆ ಶಾಪ ಹಾಕುತ್ತಿದ್ದು. ವಾರದ ರಜಾ ದಿನಗಳಲ್ಲಿ ದಿನಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ.
ಬಳ್ಳಾವರ, ತಣಿಗೆಬೈಲು, ತಿಮ್ಮನ ಬೈಲು, ಜೈಪುರ ರೂಪ್‍ಲೈನ್ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಅಮೃತಾಪುರ ಹೋಬಳಿಯಲ್ಲಿರುವ ಯರೇಹಳ್ಳಿ, ಲಕ್ಷ್ಮೀಸಾಗರ, ಇಟ್ಟಿಗೆ, ಹಾದೀಕೆರೆ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು, ಕುಡ್ಲೂರು ಗೇಟ್‌ನಿಂದ ಮುಂಡ್ರೆ, ಮುಂಡ್ರೆ ತಾಂಡ್ಯದಿಂದ ಬಳ್ಳಿಗನೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳೂ ಗುಂಡಿ ಬಿದ್ದಿವೆ. ಡಾಂಬರ್ ಸಂಪೂರ್ಣವಾಗಿ ಕಿತ್ತು ಹೋಗಿದೆ.
ಕುಡ್ಲೂರುನಿಂದ ನಾಗವಂಗಲ ಮತ್ತು ಕೊರಟೀಕೆರೆ ಮಾರ್ಗದಿಂದ ನಾಗವಂಗಲ ಗೇಟ್‌ವರೆಗೂ ಭಾಗಶಃ ರಸ್ತೆಗಳು ಹಾಳಾಗಿವೆ. ತರೀಕೆರೆ ಲಕ್ಕವಳ್ಳಿ ಕ್ರಾಸ್‍ನಿಂದ ದುಗ್ಲಾಪುರ, ಸ್ಟೇಷನ್ ದುಗ್ಲಾಪುರ, ಬಾವಿಕೆರೆ, ರಂಗೇನಹಳ್ಳಿಯಿಂದ ಲಕ್ಕವಳ್ಳಿಗೆ ಸಾಗುವ ಮುಖ್ಯ ರಸ್ತೆ ಸೇರಿದಂತೆ ತಾಲ್ಲೂಕಿನ ಹಲವು ಭಾಗದ ರಸ್ತೆಗಳು ಹಾಳಾಗಿವೆ.
ವಾಹನ ಸವಾರರು, ಸಾರ್ವಜನಿಕರು, ಶಾಲೆ– ಕಾಲೇಜಿಗೆ ಹೋಗುವ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಜಲ್ಲಿ ರಸ್ತೆಗಳಲ್ಲದೆ, ಮಣ್ಣಿ ರಸ್ತೆಗಳೂ ಮಳೆಗಾಲದಲ್ಲಿ ಹೊಂಡಮಯವಾಗಿವೆ. ಕೆಲವು ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿ ಬೆಳೆದಿದೆ. ಸಮರ್ಪಕ ಚರಂಡಿ ಇಲ್ಲದೆ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಹಾಳಾಗಿರುವ ರಸ್ತೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಿಸಿ ಶೀಘ್ರವಾಗಿ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-126-1549126384