
ಸಂಡೂರು: ಪರಿಸರ ಸ್ನೇಹಿ ಗಣಪನ ತಯಾರಿಸಿ ಕಲಾ ಸೇವೆ ಸಲ್ಲಿಸುತ್ತಿರುವ ಗ್ರಂಥಪಾಲಕ
ಕುಡತಿನಿ (ಸಂಡೂರು): ಪಟ್ಟಣದ ಗ್ರಾಮ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕರಾದ ಪುಂಡಿಹನುಮಪ್ಪ ಅವರು ತಮ್ಮ ವೃತ್ತಿಜೀವನದ ಜತೆಗೆ ಹವ್ಯಾಸವಾಗಿ ಬೆಳೆಸಿಕೊಂಡ ಕಲೆಯಿಂದ ಗಮನ ಸೆಳೆಯುತ್ತಿದ್ದಾರೆ.
ಅಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ, ಬಿಡುವಿನ ವೇಳೆಯಲ್ಲಿ ಶುದ್ಧ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.
ಬಾಲ್ಯದಿಂದಲೇ ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು, ಮನೆಯ ಬಕೆಟ್ ಅಥವಾ ಸಣ್ಣ ಹೊಂಡದಲ್ಲೇ ಸುಲಭವಾಗಿ ಕರಗುವಂತಹ ಮೂರ್ತಿಗಳನ್ನು ತಯಾರಿಸಿ ಪ್ರಕೃತಿ ಪ್ರೇಮದ ಜಾಗೃತಿ ಮೂಡಿಸುತ್ತಿದ್ದಾರೆ.
ಪಿಒಪಿ ಮೂರ್ತಿಗಳ ಬದಲಾಗಿ ಜೇಡಿಮಣ್ಣನ್ನು ಬಳಸಿ ಜಾನಪದ ಸೊಗಡು, ಬುದ್ಧ, ಬಸವೇಶ್ವರ, ಕನಕದಾಸ, ವಾಲ್ಮೀಕಿ ಹಾಗೂ ರಾವಣ, ಕೃಷ್ಣನಂತಹ ವಿವಿಧ ಪೌರಾಣಿಕ ಪಾತ್ರಗಳನ್ನು ಬಿಂಬಿಸುವ ಗಣೇಶ ಮೂರ್ತಿಗಳನ್ನು ರಿಯಾಯಿತಿ ದರದಲ್ಲಿ ಭಕ್ತರಿಗೆ ತಲುಪಿಸುತ್ತಿದ್ದಾರೆ.
ಬಡಗಿ ತರಬೇತಿಯನ್ನೂ ಹೊಂದಿರುವ ಹನುಮಪ್ಪ, ಗಣಪನ ಪೀಠ, ಸಿಂಹಾಸನ, ನವಿಲು ಹಾಗೂ ಮರದ ಪ್ರತಿಕೃತಿಗಳನ್ನು ಬಿದಿರು ಮತ್ತು ಮರ ಬಳಸಿ ಸ್ವತಃ ಸಿದ್ಧಪಡಿಸುತ್ತಾರೆ. ವ್ಯರ್ಥ ವಸ್ತುಗಳ ಮರುಬಳಕೆಯ ಮೂಲಕ ವೆಚ್ಚವನ್ನೂ ಕಡಿಮೆ ಮಾಡಿಕೊಂಡಿದ್ದಾರೆ.
ಗಂಡು ಕಲೆಗೆ ಪ್ರೋತ್ಸಾಹ: ಗ್ರಾಮೀಣ ಗಂಡುಕಲೆಯಾದ ಬಯಲಾಟವನ್ನು ಪ್ರೋತ್ಸಾಹಿಸಲು, ಇವರು ಮರದಿಂದ ಭೀಮನ ಗದೆ, ಶ್ರೀರಾಮನ ಬಿಲ್ಲು-ಬಾಣಗಳನ್ನು ಕೆತ್ತಿ ಕಲಾವಿದರಿಗೆ ಉಚಿತವಾಗಿ ನೀಡುತ್ತಾರೆ.
ಅಲ್ಲದೆ, ಮಣ್ಣೆತ್ತಿನ ಅಮಾವಾಸ್ಯೆಗೆ ಬಸವಣ್ಣನ ಮೂರ್ತಿ ರಚಿಸುವುದು, ದೇವಾಲಯಗಳ ಗೋಡೆ ಹಾಗೂ ಗೋಪುರಗಳಿಗೆ ಬಣ್ಣ ಬಳಿದು ದೇವತೆಗಳ ಚಿತ್ರ ಬಿಡಿಸುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-25-1992235296