‌ಕೋಲಾರ |ನಿಯಂತ್ರಣಕ್ಕೆ ಬಾರದ ಅಪಘಾತ: ಸತ್ತವರಲ್ಲಿ ಬೈಕ್‌ ಸವಾರರು,ಯುವಕರೇ ಹೆಚ್ಚು

‌ಕೋಲಾರ |ನಿಯಂತ್ರಣಕ್ಕೆ ಬಾರದ ಅಪಘಾತ: ಸತ್ತವರಲ್ಲಿ ಬೈಕ್‌ ಸವಾರರು,ಯುವಕರೇ ಹೆಚ್ಚು

‌ಕೋಲಾರ |ನಿಯಂತ್ರಣಕ್ಕೆ ಬಾರದ ಅಪಘಾತ: ಸತ್ತವರಲ್ಲಿ ಬೈಕ್‌ ಸವಾರರು,ಯುವಕರೇ ಹೆಚ್ಚು

ಕೋಲಾರ: ಕೆಜಿಎಫ್‌ ಪೊಲೀಸ್‌ ವಿಭಾಗ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ ಸಂಭವಿಸಿದ 259 ರಸ್ತೆ ಅಪಘಾತಗಳಲ್ಲಿ 274ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ ಶೇ 60ರಷ್ಟು ಬೈಕ್‌ ಸವಾರರೇ ಸಾವಿನ ಕುಣಿಕೆಗೆ ಸಿಲುಕಿಕೊಳ್ಳುತ್ತಿದ್ದು, ಯುವಕರ ಸಂಖ್ಯೆಯೇ ಹೆಚ್ಚಿರುವುದು ಗೊತ್ತಾಗಿದೆ.

ಜನವರಿಯಿಂದ ಆಗಸ್ಟ್‌ ತಿಂಗಳ ಅಂತ್ಯದವರೆಗೆ ಕೋಲಾರ ಜಿಲ್ಲಾ ಪೊಲೀಸ್‌ ವಿಭಾಗದಲ್ಲಿ 203 ಘೋರ ಅಪಘಾತಗಳು ಸಂಭವಿಸಿ 2012 ಮಂದಿ ಮೃತಪಟ್ಟರೆ, ಕೆಜಿಎಫ್‌ ಜಿಲ್ಲಾ ಪೊಲೀಸ್‌ ವಿಭಾಗದಲ್ಲಿ 56 ಘೋರ ಅಪಘಾತ ಸಂಭವಿಸಿ 62 ಮಂದಿ ಅಸುನೀಗಿದ್ದಾರೆ. 32 ಮಂದಿ ಗಾಯಗೊಂಡಿದ್ದಾರೆ.

ಕೋಲಾರ ಹಾಗೂ ಕೆಜಿಎಫ್‌ ಪೊಲೀಸರು ಅಪಘಾತ ಪ್ರಮಾಣ ತಪ್ಪಿಸಲು ಹಲವಾರು ಕ್ರಮ ವಹಿಸಿದ್ದರೂ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರೂ ತಹಬದಿಗೆ ಬರುತ್ತಿಲ್ಲ.

ರಸ್ತೆ ಅಪಘಾತದಲ್ಲಿನ ಸಾವಿನ ಪ್ರಮಾಣ ತಗ್ಗಿಸುವುದು ಸವಾಲಾಗಿ ಪರಿಣಮಿಸಿದ್ದು, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್‌ ಹಾಗೂ ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಅವರು ಹೆದ್ದಾರಿಯಲ್ಲಿ ಕೆಲ ‌ತಾಂತ್ರಿಕ ಮಾರ್ಪಡು ಕೋರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ (ಎನ್‌ಎಚ್‌ಎಐ) ಪತ್ರ ಬರೆದಿದ್ದಾರೆ.

ಎರಡು ವಾರದ ಹಿಂದೆ ಕೆಜಿಎಫ್‌ ತಾಲ್ಲೂಕಿನಲ್ಲಿ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಮೀತಿ ಮೀರಿದ ವೇಗದಲ್ಲಿ ಬಂದಿದ್ದರಿಂದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಟೊಯೊಟಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.

ಒಂದಲ್ಲಾ ಒಂದು ಕಡೆ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.‌ ಅಪಘಾತದಲ್ಲಿ ಗಾಯಕ್ಕೆ ಒಳಗಾಗಿ ಸಂಕಟ ಅನುಭವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಕೋಲಾರ ಜಿಲ್ಲಾ ಪೊಲೀಸರು ಕಲೆಹಾಕಿರುವ ಮಾಹಿತಿ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲೇ ಶೇ 38ರಷ್ಟು ಅಪಘಾತಗಳು ಸಂಭವಿಸಿವೆ. ಹಳ್ಳಿಯ ರಸ್ತೆಗಳಲ್ಲಿ ಶೇ ‌31ರಷ್ಟು ಹಾಗೂ ರಾಜ್ಯ ಹೆದ್ದಾರಿಯಲ್ಲಿ ಶೇ 30ರಷ್ಟು ಅಪಘಾತಗಳು ನಡೆದಿವೆ. ಚಾಲಕರ ಸ್ವಯಂ ತಪ್ಪಿನಿಂದಲೇ ಶೇ 26ರಷ್ಟು ಅಪಘಾತಗಳು ಸಂಭವಿಸಿವೆ. 18ರಿಂದ 40 ವಯಸ್ಸಿನವರೇ ಅಪಘಾತದಲ್ಲಿ ಮೃತರಾಗಿರುವುದು ಅಂಕಿಅಂಶಗಳಿಂದ ದೃಢಪಟ್ಟಿದೆ.

ರಾಷ್ಟ್ರೀಯ ಹೆದ್ದಾರಿ–75, ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌, ಮುಳಬಾಗಿಲು–ಶ್ರೀನಿವಾಸಪುರ ಹಾಗೂ ಶ್ರೀನಿವಾಸಪುರ–ಮದನಪಲ್ಲಿ ಹೆದ್ದಾರಿಯಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿವೆ. ಈ ಹಾದಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿರುವುದು ಅಪಘಾತ ಸಂಭವಿಸಲು ಪ್ರಮುಖ ಕಾರಣವಾಗಿದೆ.

ವಾಹನ ಚಾಲನೆಯಲ್ಲಿ ನೈಪುಣ್ಯತೆ ಇಲ್ಲದಿದ್ದರೂ 120, 150 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡುವುದು ಕಂಡುಬರುತ್ತಿದೆ. ದ್ವಿಚಕ್ರ ವಾಹನದವರು 80ರಿಂದ 90 ಕಿ.ಮೀ ವೇಗದಲ್ಲಿ ಹೋಗಿ ಡಿಕ್ಕಿ ಹೊಡೆಯುತ್ತಾರೆ.

‘ಅಪಘಾತ ಪ್ರಮಾಣ ತಗ್ಗಿಸಲು ಈಗಾಗಲೇ ತಂತ್ರಜ್ಞಾನ ನೆರವಿನಿಂದ ಹಲವಾರು ಕ್ರಮ ವಹಿಸಿದ್ದೇವೆ. ಜನರು ಕೂಡ ಎಚ್ಚೆತ್ತುಕೊಂಡು ರಸ್ತೆ ನಿಯಮ ಪಾಲಿಸಿ ಜಾಗರೂಕರಾಗಿ ವಾಹನ ಚಲಾಯಿಸಿದರೆ ಅಪಘಾತ ಪ್ರಮಾಣ ತಗ್ಗಬಹುದು. ಕಾರು ಚಾಲಕರು ಸೀಟ್‌ ಬೆಲ್ಟ್‌, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು’ ಎಂದು ಪೊಲೀಸ್‌ ವರಿಷಾಧಿಕಾರಿಗಳು ಹೇಳುತ್ತಾರೆ. ಅರಾಭಿಕೊತ್ತನೂರು, ಚುಂಚದೇನಹಳ್ಳಿ, ಮದೇರಹಳ್ಳಿ ಮತ್ತು ಅಜ್ಜಪ್ಪನಹಳ್ಳಿ ಸೇರಿದಂತೆ ಹಲವೆಡೆ ಪ್ರಮುಖ ಬ್ಲಾಕ್‌ ಸ್ಪಾಟ್‌ ಗುರುತಿಸಲಾಗಿದೆ. ಈ ಭಾಗದಲ್ಲಿ ರಸ್ತೆ ಮಾರ್ಪಡು ಮಾಡುವಂತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ.

ವಡಗೂರು ಮತ್ತು ತಂಬಿಹಳ್ಳಿಗಳಲ್ಲಿ ಅಂಡರ್‌ಪಾಸ್‌‌ ಹಾಗೂ ನರಸಿಂಹತೀರ್ಥ ಮತ್ತು ವಡ್ಡಹಳ್ಳಿಯಲ್ಲಿ ಮೇಲ್ಸೇತುವೆ ಕಾಮಗಾರಿಗಳು ನಡೆಯುತ್ತಿದ್ದು, ಬಹಳಷ್ಟು ವಿಳಂಬವಾಗಿದೆ. ರಾಷ್ಟ್ರೀಯ ಹೆದ್ದಾರಿ ಕೆಲವೆಡೆ ಬೀದಿ ದೀಪಗಳು ಇಲ್ಲ.

ಅಪಘಾತ ‌ತಗ್ಗಿಸಲು ಹಲವಾರು ಕ್ರಮ

ಅಪಘಾತ ಹಾಗೂ ಸಾವಿನ ಪ್ರಮಾಣ ತಗ್ಗಿಸಲು ಹಲವಾರು ಕ್ರಮ ಕೈಗೊಂಡಿದ್ದೇವೆ. ಅತಿ ವೇಗದ ವಾಹನ ಚಾಲನೆ ತಡೆಗೆ ಕ್ರಮ ವಹಿಸಿದ್ದೇವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಡಿವೈಡರ್‌ಗಳನ್ನು ಎತ್ತರಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ತಪಾಸಣೆ ತೀವ್ರಗೊಳಿಸಿದ್ದೇವೆ. ಹೆಲ್ಮೆಟ್‌ ಕಡ್ಡಾಯ ಮಾಡಿದ್ದೇವೆ. ಬ್ಲಾಕ್‌ ಸ್ಟಾಟ್‌ಗಳನ್ನು ಗುರುತಿಸಿ ಎನ್‌ಎಚ್‌ಎಐ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸುರಕ್ಷಾ ಚಾಲನೆ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ

ಕನ್ನಿಕಾ ಸಿಕ್ರಿವಾಲ್‌, ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು

‌ಅಪಘಾತ ನಿಯಂತ್ರಣ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಹೆದ್ದಾರಿಯ ಹಲವೆಡೆ ಕೆಲವೊಂದು ಮಾರ್ಪಡು ಮಾಡಲು ಮನವಿ ಮಾಡಿದ್ದೇವೆ. ಬ್ಯಾರಿಕೇಡ್‌ ಎತ್ತರಿಸಲಾಗುತ್ತಿದೆ. ಎಕ್ಸ್‌ಪ್ರೆಸ್‌ ವೇನಲ್ಲಿ ಓಪನಿಂಗ್‌ ಮುಚ್ಚುವಂತೆ ಹೇಳಿದ್ದೇವೆ. ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದು, ಸಂಚಾರ ಪೊಲೀಸರು ‘ಬಾಡಿ ಕ್ಯಾಮೆರಾ’ ಧರಿಸಿ ತಪಾಸಭೆ ಮಾಡುತ್ತಿದ್ದಾರೆ. ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು ಮೃತಪಡುತ್ತಿದ್ದಾರೆ‌. ಎಚ್ಚರಿಂದ ವಾಹನ, ದ್ವಿಚಕ್ರ ವಾಹನ ಚಲಾಯಿಸಬೇಕು

–ಶಿವಾಂಶು ರಜಪೂತ್‌, ಕೆಜಿಎಫ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಈ ಸಂಬಂಧ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ಎನ್ಎಚ್ಎಐಗೆ ಪತ್ರ ಬರೆದಿದ್ದಾರೆ. ಈಗಾಗಲೇ ಬ್ಲ್ಯಾಕ್ ಸ್ಪಾಟ್‌ ಗುರುತಿಸಿದ್ದು, ಇಲ್ಲಿ ಫ್ಲೈಓವರ್ ಬರಲಿವೆ. ಒಟ್ಟು 14 ಫ್ಲೈಓವರ್‌ಗಳನ್ನು ನಿರ್ಮಿಸಲಾಗುತ್ತಿದ್ದು, ₹ 989 ಕೋಟಿ ಮಂಜೂರಾಗಿದೆ. ಪಕ್ಕದಲ್ಲಿ 1 ಕಿ.ಮೀ ಸರ್ವಿಸ್ ರಸ್ತೆ ಕೂಡ ಬರಲಿದೆ. ತಿಂಗಳಲ್ಲಿ ಟೆಂಡರ್ ಕರೆಯಲಾಗುತ್ತಿದೆ‌

–ಎಂ.ಮಲ್ಲೇಶ್‌ ಬಾಬು, ಸಂಸದ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ