
ಮುಂದುವರಿದ ಮಳೆ: ಬರಿದಾಗಿದ್ದ ಮಲಪ್ರಭಾ ನದಿಗೆ ಜೀವ ಕಳೆ
ರೋಣ: ಮುಂಗಾರು ಮಳೆಯ ಕೊರತೆಯಿಂದಾಗಿ ಬರಿದಾಗಿದ್ದ ಮಲಪ್ರಭಾ ನದಿಗೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀರು ಹರಿದು ಬರುತ್ತಿದ್ದು ಜೀವಕಳೆ ಬಂದಂತಾಗಿದೆ.
ಮಲಪ್ರಭೆಗೆ ಸೇರುವ ಬೆಣ್ಣೆ ಹಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿಗೆ ನೀರು ಹರಿದು ಬರುತ್ತಿದೆ. ನದಿಯಲ್ಲಿ ನೀರಿನ ಕೊರತೆಯಿಂದ ಇತ್ತೀಚಿನ ದಿನಗಳವರೆಗೆ ಮಲಪ್ರಭೆಯ ತಟದ ಹಳ್ಳಿಗಳಲ್ಲಿ ಜನ ಜಾನುವಾರುಗಳಿಗೆ ನೀರಿನ ಕೊರತೆ ಕಾಡಿತ್ತು. ಮಲಪ್ರಭೆಗೆ ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಬಳಿ ಬ್ಯಾರೇಜ್ ನಿರ್ಮಿಸಲಾಗಿದ್ದು ಮುಂದಿನ ಕೆಲಕಾಲ ನೀರು ಸಂಗ್ರಹಗೊಳ್ಳಲಿದೆ.
ಮಲಪ್ರಭೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆಗಳು ನೀರಿನ ಕೊರತೆ ಎದುರಿಸಿದ್ದವು. ಸದ್ಯ ನದಿಯಲ್ಲಿ ನೀರಿನ ಹರಿವಿನಿಂದಾಗಿ ಸ್ವಲ್ಪಮಟ್ಟಿಗೆ ಸಮಸ್ಯೆಗಳು ಕಡಿಮೆಯಾದಂತಾಗಿದೆ.