ಮಲೇಬೆನ್ನೂರು: ಕುಡಿಯುವ ನೀರು ಸಮಸ್ಯೆ; ಜಿಲ್ಲಾಧಿಕಾರಿ-ಶಾಸಕರ ನಡುವೆ ವಾಗ್ವಾದ

ಮಲೇಬೆನ್ನೂರು: ಕುಡಿಯುವ ನೀರು ಸಮಸ್ಯೆ; ಜಿಲ್ಲಾಧಿಕಾರಿ-ಶಾಸಕರ ನಡುವೆ ವಾಗ್ವಾದ

ಮಲೇಬೆನ್ನೂರು: ಕುಡಿಯುವ ನೀರು ಸಮಸ್ಯೆ; ಜಿಲ್ಲಾಧಿಕಾರಿ-ಶಾಸಕರ ನಡುವೆ ವಾಗ್ವಾದ

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿಯಲ್ಲಿ ನಡೆಯಬೇಕಿದ್ದ ಪ್ರಜಾಸೇವಾ ಅಭಿಯಾನಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅವರಿಗೆ ಪಟ್ಟಣದ ಮುಖ್ಯ ವೃತ್ತದಲ್ಲಿ ಮುತ್ತಿಗೆಹಾಕಿ ಭದ್ರಾ ನಾಲೆ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಶಾಸಕ ಬಿ.ಪಿ. ಹರೀಶ್ ಹಾಗೂ ರೈತರು ಪಟ್ಟು ಹಿಡಿದರು. ಹೀಗಾಗಿ ಶನಿವಾರ ನಡೆಯಬೇಕಿದ್ದ ಸಭೆ ದಿಢೀರ್‌ ರದ್ದಾಯಿತು.

‘ಡಿ.ಬಿ. ಪಿಕಪ್‌ ಜಲಾಶಯದಿಂದ ನೀರು ಹರಿಸಲು, ಭದ್ರಾ ಮೇಲ್ದಂಡೆಗೆ, ನಾಲೆಗಳಿಗೆ ನೀರು ಹರಿಸಲು ಕಾಡಾ ಸಭೆ ತೀರ್ಮಾನ ಮಾಡಿತ್ತೇ’ ಎಂದು ವಾಗ್ದಾಳಿ ನಡೆಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರ ಚುನಾವಣಾ ರಾಜಕೀಯದ ಒತ್ತಡಕ್ಕೆ ಮಣಿದು ನೀರು ಹರಿಸಿದ್ದೀರಿ. ಇದನ್ನು ಪ್ರಶ್ನಿಸಿದರೆ ಹರಿಹರದ ಶಾಸಕ ನೀರು ಹರಿಸುವುದಕ್ಕೆ ಅಡ್ಡಿ ಮಾಡಿದ್ದಾರೆ ಎಂದು ರೈತರನ್ನು ಎತ್ತಿ ಕಟ್ಟುತ್ತೀರಿ’ ಎಂದು ಬಿ.ಪಿ.ಹರೀಶ್‌ ಆರೋಪಿಸಿದರು.

‘ಹರಿಹರ ತಾಲ್ಲೂಕಿನಲ್ಲಿ ಕೊಳವೆ ಬಾವಿ ಬತ್ತಿವೆ, ಕೆರೆಕಟ್ಟೆ ಖಾಲಿಯಾಗಿವೆ. ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ವಿದ್ಯುತ್‌ ಪೂರೈಕೆ ಅಸ್ತವ್ಯಸ್ತವಾಗಿದೆ’ ಎಂದು ಹರಿಹಾಯ್ದರು.

‘ನೀರಿನ ಸಮಸ್ಯೆ ಶೀಘ್ರ ಬಗೆಹರಿಸುತ್ತೇವೆ’ ಎಂಬ ಜಿಲ್ಲಾಧಿಕಾರಿ ಪ್ರತಿಕ್ರಿಯೆಗೆ ತೃಪ್ತರಾಗದೆ, ‘ನೀವು ದಾವಣಗೆರೆ ಜಿಲ್ಲೆ‌ ಡಿ.ಸಿ.ಯೋ ಅಥವಾ ಶಾಮನೂರು ಕುಟುಂಬಕ್ಕೆ ಮಾತ್ರವೋ’ ಎಂದು ಕುಟುಕಿದರು. ರೈತ ಮುಖಂಡ ಕೆ.ಜಿ. ಮಂಜುನಾಥ್‌, ‘ಸಂಸದರು ಒಮ್ಮೆಯೂ ಭದ್ರಾನಾಲೆ ಸಮಸ್ಯೆ ಆಲಿಸಲು ಬಂದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ರೈತರ ಹಿತ ಕಾಪಾಡಲು ಭದ್ರಾ ನಾಲೆಗೆ ನೀರು ಹರಿಸಿ. ಬಳಿಕ ‘ಪ್ರಜಾಸೇವಾ’ ಸಭೆ ಮಾಡಿ’ ಎಂದು ಶಾಸಕರು ಪಟ್ಟುಹಿಡಿದರು. ಕೊನೆಗೆ ಜಿಲ್ಲಾಧಿಕಾರಿ ವಾಪಸಾದರು.

‘ಕೊಮಾರನಹಳ್ಳಿಯಲ್ಲಿ ಸಭೆ ರದ್ದುಗೊಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಘೋಷಿಸುತ್ತಿದ್ದಂತೆ ತಕ್ಷಣ ಒಂದು ಗುಂಪು ಜಮಾಯಿಸಿ ಜಿಲ್ಲಾಧಿಕಾರಿ ವರ್ತನೆಯನ್ನು ಖಂಡಿಸಿದರು.

‘ಶಾಸಕರಿಗೆ ಹೆದರಿ ಡಿಸಿ ತೆರಳಿದ್ದಾರೆ’ ಎಂದು ಪಟ್ಟಣದ ಪುರಸಭೆ ಸದಸ್ಯರುಆಕ್ರೋಶ ವ್ಯಕ್ತಪಡಿಸಿದರು.

ಅರ್ಜಿಗಳೊಟ್ಟಿಗೆ ಬಂದಿದ್ದ ರೈತರು, ಕೃಷಿ ಕಾರ್ಮಿಕರು ಸೇರಿ ಅಲ್ಲಿ ಜಮಾಯಿಸಿದ್ದ ಜನರು ಊಟ ಮಾಡಿ ತೆರಳಿದರು. ವಿವಿಧ ಇಲಾಖೆಗಳಿಂದ ಪ್ರದರ್ಶನಕ್ಕಿಟ್ಟಿದ್ದ ಮಳಿಗೆಗಳನ್ನು ತೆರವು ಮಾಡಲಾಯಿತು.

ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಪೋಲಿಸರು ಭದ್ರತೆ ಒದಗಿಸಿದ್ದರು.

‘ಪ್ರಜಾ ಸೇವಾ’ ಅಭಿಯಾನ ರದ್ದು ಖಂಡನೆ

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿಯಲ್ಲಿ ಶನಿವಾರದ ನಡೆಯಬೇಕಿದ್ದ ‘ಪ್ರಜಾ ಸೇವಾ’ ಅಭಿಯಾನ ರದ್ದಾಗಿರುವುದು ಬೇಸರದ ಸಂಗತಿ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಿಜೆಪಿಯವರಿಗೆ ನಿಜವಾಗಿಯೂ ರೈತರ ಹಾಗೂ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಇದ್ದಿದ್ದರೆ, ಅಭಿಯಾನದ ವೇಳೆ ಜಿಲ್ಲಾಧಿಕಾರಿ ಮುಂದೆ ಕುಡಿಯುವ ನೀರಿನ ಸಮಸ್ಯೆ ಸೇರಿ ರೈತರ ಸಮಸ್ಯೆಗಳನ್ನು ಮಂಡಿಸಬಹುದಾಗಿತ್ತು. ಯಾವುದೇ ಅಡೆತಡೆ ಎದುರಾದರೂ ಅದನ್ನು ನಿವಾರಿಸಿಕೊಂಡು ಕಾರ್ಯಕ್ರಮ ನಡೆಸುವ ಜವಾಬ್ದಾರಿ ಜಿಲ್ಲಾಡಳಿತಕ್ಕಿತ್ತು. ಆದರೆ, ಕಾರ್ಯಕ್ರಮವೇ ನಡೆಯುವುದು ಅವರಿಗೆ ಬೇಕಿರಲಿಲ್ಲ ಎಂಬ ಅನುಮಾನ ಮೂಡುವಂತಾಗಿದೆ. ಸರ್ಕಾರ ಸಮಗ್ರ ವರದಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ