
ತುಮಕೂರು: ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಹೈಕಮಾಂಡ್‌ಗೆ ಕಗ್ಗಂಟು
ತುಮಕೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ವಿಷಯ ಹೈಕಮಾಂಡ್‌ಗೆ ಕಗ್ಗಂಟಾಗಿದೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಹಾಗೂ ಟಿ.ಬಿ.ಜಯಚಂದ್ರ ಅವರ ಬಣಗಳಿದ್ದು, ಈ ಮೂವರು ಹಿರಿಯ ನಾಯಕರೊಟ್ಟಿಗೆ ಪಕ್ಷವನ್ನು ಮುನ್ನಡೆಸುವ ವ್ಯಕ್ತಿಯನ್ನು ಆಯ್ಕೆ ಮಾಡುವುದು ವರಿಷ್ಠರಿಗೆ ಸವಾಲಾಗಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ, ಜಿಲ್ಲೆಯಲ್ಲಿ ಮೂವರು ಘಟಾನುಘಟಿ ನಾಯಕರು ಇರುವುದರಿಂದ ಹೊಸ ಮುಖಗಳು ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಒಲವು ತೋರಿಸುತ್ತಿಲ್ಲ ಎಂಬ ಅಭಿಪ್ರಾಯ ಕೂಡ ಪಕ್ಷದೊಳಗಿನಿಂದಲೇ ಕೇಳಿಬರುತ್ತಿದೆ.
‘ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂಬ ‘ಪಟ್ಟ’ ಬಿಟ್ಟರೆ; ಅಧ್ಯಕ್ಷನಿಗೆ ಯಾವುದೇ ‘ವಿಶೇಷ’ ಅಧಿಕಾರ, ಅವಕಾಶಗಳು ಇಲ್ಲ. ಪಕ್ಷದ ಕಾರ್ಯಕ್ರಮ, ಪ್ರತಿಭಟನೆ ಸಂಘಟಿಸಬೇಕಾದರೂ ‘ಕೈ’ಯಿಂದ ಹಣ ಹಾಕಬೇಕು. ಜಿಲ್ಲೆಯಲ್ಲಿರುವ ಪಕ್ಷದ ಶಾಸಕರು ಆರ್ಥಿಕವಾಗಿ ನೆರವಾಗುವುದಿಲ್ಲ. ಹೀಗಿದ್ದಾಗ, ಜಿಲ್ಲಾಧ್ಯಕ್ಷನ ಕೈಯಿಂದ ಹಣ ಖರ್ಚಾಗುತ್ತದೆಯೇ ಹೊರತು; ವೈಯಕ್ತಿಕ ಬೆಳವಣಿಗೆ ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಹೊಸಬರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಉತ್ಸಾಹವನ್ನೇ ತೋರಿಸಿಲ್ಲ’ ಎಂದು ಪಕ್ಷದ ಕಾಂಗ್ರೆಸ್ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.
ಜಿಲ್ಲೆಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಪ್ರಬಲವಾಗಿದೆ. ಒಕ್ಕಲಿಗ ಸಮಾಜದಿಂದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮುದ್ದಹನುಮೇಗೌಡ, ಗೌರಿಶಂಕರ್ ಹಾಗೂ ಮುರಳೀಧರ ಹಾಲಪ್ಪ ಹೆಸರು ಜೋರಾಗಿ ಕೇಳಿಬರುತ್ತಿದೆ. ಆದರೆ, ಇವರಾರು ಅರ್ಜಿ ಹಾಕಿಲ್ಲ. ಈ ಮೂವರ ಬಗ್ಗೆ ಹೈಕಮಾಂಡ್‌ಗೆ ಜನಾಭಿಪ್ರಾಯ ಹೋಗಿದೆ ಎನ್ನಲಾಗಿದೆ.
ಅದೇರೀತಿ, ಲಿಂಗಾಯತ ಸಮಾಜದಿಂದ ತಿಪಟೂರು ಶಶಿಧರ್, ಅರಕೆರೆ ಶಂಕರ್, ಒಬಿಸಿಯಿಂದ ನಟರಾಜ್, ನಿಕೇತ್‌ರಾಜ್ ಮೌರ್ಯ, ಎಸ್‌ಸಿ ಸಮುದಾಯದಿಂದ ರಾಮಕೃಷ್ಣಪ್ಪ, ನರಸೀಯಪ್ಪ, ನಾರಾಯಣಮೂರ್ತಿ, ದಿನೇಶ್, ಮುಸ್ಲಿಂ ಸಮುದಾಯದಿಂದ ಅತೀಕ್ ಅಹಮದ್, ಇಕ್ಬಾಲ್ ಅಹಮದ್, ಮಹಿಳಾ ವಿಭಾಗದಿಂದ ಗೂಳೂರು ಸೌಭಾಗ್ಯ, ಗೀತಾ ರಾಜಣ್ಣ, ಸುಜಾತಾ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ.
ಸಂಘಟನಾ ಸೃಜನ್ ಅಭಿಯಾನದ ಅಡಿಯಲ್ಲಿ ರಾಜ್ಯದ 35 ಸಂಘಟನಾತ್ಮಕ ಜಿಲ್ಲೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ನೂತನ ಅಧ್ಯಕ್ಷರ ಹೆಸರು ಘೋಷಿಸಿದೆ. ಈ ಪೈಕಿ ಐದು ಕಡೆ ಮಾತ್ರ ಹಳಬರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಕೂಡ ಹಳೆ ಅಧ್ಯಕ್ಷರೇ ಹೊಸ ಅವಧಿಗೆ ಮುಂದುವರಿಯುತ್ತಾರೆಯೇ ಅಥವಾ ಬಣಗಳನ್ನು ಮೀರಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನೂತನ ಅಧ್ಯಕ್ಷರು ಬರುತ್ತಾರೆಯೇ ಎಂಬ ಕುತೂಹಲ ತಣಿಯಲು ಎರಡನೇ ಪಟ್ಟಿ ಬಿಡುಗಡೆ ಆಗುವವರೆಗೆ ಕಾಯಬೇಕಿದೆ.
ಅಧ್ಯಕ್ಷ ಸ್ಥಾನ: ಸಿಗಬಹುದೇ ಮಹಿಳೆಗೆ ಅವಕಾಶ?
ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ವಿಜಯಪುರ ಹಾಗೂ ಕೂಡ್ಲಿಗಿ ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ಹೆಸರು ಘೋಷಣೆ ಆಗಿಲ್ಲ.
ಈಗ ಘೋಷಣೆಯಾಗಿರುವ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಿಲ್ಲ. ಬಾಕಿಯಾಗಿರುವ ಐದು ಜಿಲ್ಲೆಗಳಲ್ಲಿ ಕನಿಷ್ಠ ಎರಡು ಕಡೆ ಮಹಿಳೆಯರಿಗೆ ಅವಕಾಶ ನೀಡುವ ಚಿಂತನೆ ಹೈಕಮಾಂಡ್‌ಗೆ ಇದೆ. ಈ ಕಾರಣಕ್ಕಾಗಿಯೇ ಐದು ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಘೋಷಣೆ ತಡವಾಗಿದೆ ಎಂಬ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿವೆ.
‘ಮಹಿಳೆಯರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಎಲ್ಲ ಜಿಲ್ಲೆಗಳಿಂದ ಮಹಿಳಾ ನಾಯಕಿಯರ ಬಗ್ಗೆ ಪ್ರಬಲ ಜನಾಭಿಪ್ರಾಯ ಹೋಗಿಲ್ಲ. ತುಮಕೂರು ಜಿಲ್ಲೆಯಿಂದ ಮಹಿಳಾ ವಿಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರೆ ಕೆ.ಎಂ.ಸುಜಾತಾ ಅವರು ಹೆಸರು ಹೋಗಿದ್ದು, ಅವರಿಗೆ ಅವಕಾಶ ಸಿಕ್ಕರೂ ಸಿಗಬಹುದು’ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು.