
ಪತ್ರಿಕಾ ವಿತರಕರು ಸಮಾಜ ಬೆಸೆಯುವ ಕೊಂಡಿ ಎಂದ ಜಿ.ಚಿದ್ವಿಲಾಸ್
ಸುಂಟಿಕೊಪ್ಪ: ಪತ್ರಿಕಾ ವಿತರಕರು ಪತ್ರಿಕೆ ಮತ್ತು ಓದುಗರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪತ್ರಕರ್ತ ಜಿ.ಚಿದ್ವಿಲಾಸ್ ಹೇಳಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲ್ಲೂಕು ಘಟಕದಿಂದ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದ ಸಹಯೋಗದಲ್ಲಿ ಇಲ್ಲಿನ ಕೇರಳ ಸಮಾಜಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ತಾಲ್ಲೂಕು ಘಟಕ ನೀಡುವ ಶೈಕ್ಷಣಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆ ಮತ್ತು ಪತ್ರಿಕಾ ವಿತರಕರು ಒಂದು ಕುಟುಂಬವಿದ್ದಂತೆ. ಪತ್ರಿಕಾ ಸಂಪಾದಕ ಎಷ್ಟೇ ಉತ್ತಮವಾಗಿ ಪತ್ರಿಕೆ ಹೊರತಂದರೂ, ಅದು ಓದುಗರಿಗೆ ತಲುಪದಿದ್ದರೆ ವ್ಯರ್ಥ. ಆದ್ದರಿಂದ ಪತ್ರಿಕೆಗಳ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಹಿರಿಯ ತಲೆಮಾರಿನವರು ಮಾತ್ರ ಪತ್ರಿಕೆಗಳನ್ನು ಓದುತ್ತಿದ್ದು, ಯುವ ಜನರಲ್ಲಿ ಪತ್ರಿಕೆ ಓದುವ ಸಂಖ್ಯೆ ಇಳಿಮುಖಯಾಗುತ್ತಿದೆ ಎಂದು ವಿಷಾದಿಸಿದ ಅವರು, ಇಂದು ಪತ್ರಿಕಾ ವಿತರಣೆ ಲಾಭದ ವೃತ್ತಿಯಾಗಿ ಉಳಿದಿಲ್ಲ. ಬದಲಾಗಿ ಪತ್ರಿಕೆಗಳ ಮೇಲಿನ ಪ್ರೀತಿಯಿಂದ ಮಾತ್ರ ವಿತರಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಓದುಗರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕಳೆದ 10 ವರ್ಷಗಳಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಪತ್ರಿಕೆಗಳ ಬೆಲೆ ಮಾತ್ರ ನಿಂತ ನೀರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪತ್ರಿಕಾ ವಿತರಕರೇ ಪತ್ರಿಕೆಗಳಿಗೆ ಸುದ್ದಿ ನೀಡುವ ವರದಿಗಾರರೂ ಆಗಿರುವುದರಿಂದ ಅವರು ಸಮಾಜದ ಸಮಸ್ಯೆಗಳನ್ನು ಪತ್ರಿಕೆಗಳ ಗಮನಕ್ಕೆ ತರುವುದರಿಂದ ಸಮಾಜದಲ್ಲೂ ಸಾಕಷ್ಟು ಬದಲಾವಣೆ ತರಲು ಸಾಧ್ಯವಿದೆ ಎಂದು ತಿಳಿಸಿದರು.
ಪತ್ರಿಕಾ ವಿತರಕರ ಕ್ಷೇಮ ನಿಧಿಗಾಗಿ ‘ಶಕ್ತಿ’ ಸಂಸ್ಥೆಯಿಂದ ₹1 ಲಕ್ಷ ನೆರವನ್ನು ಎರಡು ವರ್ಷಗಳ ಹಿಂದೆಯೇ ಘೋಷಿಸಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಟಿ.ಜಿ.ಸತೀಶ್ ಅವರಲ್ಲಿ ಮನವಿ ಮಾಡಿದರು.
ಕೊರವಂಡ ವಸಂತಿ ಪೊನ್ನಪ್ಪ ಮತ್ತು ಕೊರವಂಡ ಪೊನ್ನಪ್ಪ ಅವರು ಸ್ಥಾಪಿಸಿರುವ ಶೈಕ್ಷಣಿಕ ದತ್ತಿ ನಿಧಿಯ ಪ್ರತಿಭಾ ಪುರಸ್ಕಾರವನ್ನು ಶಿರಂಗಾಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಿ.ಪಿ.ಪ್ರಣಯ್ ಅವರಿಗೆ ನೀಡಿ ಗೌರವಿಸಲಾಯಿತು.
ವೇವ್ ಸಂಘಟನೆ ಕುರಿತು ಹೈಕೋರ್ಟ್ ವಕೀಲ ಪರಾಜ್ ಉಸ್ಮಾನ್ ಮಾಹಿತಿ ನೀಡಿದರು.
ಕುಶಾಲನಗರ ತಾಲ್ಲೂಕು ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ವೇವ್ ಸಂಸ್ಥೆ ಅಧ್ಯಕ್ಷ ಕೆ.ಎ.ಲತೀಫ್, ಕೇರಳಂ ಸಮಾಜದ ಅಧ್ಯಕ್ಷ ಪಿ.ರವೀಂದ್ರನ್, ಜಿಲ್ಲಾ ಸಂಘದ ಖಜಾಂಚಿ ಟಿ.ಕೆ.ಸಂತೋಷ್ ಉಪಸ್ಥಿತರಿದ್ದರು.
ಪತ್ರಿಕಾ ವಿತರಕರಿಗೆ ವಸತಿ ನಿರ್ಮಿಸಿ
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಪತ್ರಿಕಾ ವಿತರಕರಿಗೆ ವಸತಿ ಸಂಕೀರ್ಣಗಳನ್ನು ಸರ್ಕಾರ ನಿರ್ಮಿಸಿಕೊಡಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಅನುದಾನ ನೀಡುವುದಾಗಿ ಘೋಷಿಸಿದ್ದು, ಅದು ಇನ್ನೂ ಅನುಷ್ಠಾನಗೊಂಡಿಲ್ಲ ಎಂದರು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ಮಾತನಾಡಿ, ಪತ್ರಿಕಾ ವಿತರಕರು ಏಜೆಂಟರು ಅಸಂಘಟಿತ ಕಾರ್ಮಿಕರ ವಿಭಾಗದಲ್ಲಿ ಬರುತ್ತಿದ್ದು, ಸಾಮಾಜಿಕ ಭದ್ರತೆಗಳನ್ನು ಹೊಂದಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಸಂಘದ ಮೂಲಕ ಪ್ರತಿಯೊಬ್ಬರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.