
ಹನೂರು| ಕಾಡುಪ್ರಾಣಿ ಮಾಂಸದ ಮೋಹ; ಬೇಟೆಯ ದಾಹ
ಹನೂರು: ಉಡದ ಮಾಂಸದ ತಿಂದರೆ ಪುರುಷತ್ವ ಹೆಚ್ಚುತ್ತದೆ, ಜಿಂಕೆ ಮಾಂಸ ರೋಗಗಳಿಂದ ಮುಕ್ತ, ಹಂದಿ ಮಾಂಸ ದೇಹಕ್ಕೆ ತಂಪು....
ಕಾಡುಪ್ರಾಣಿಗಳ ಮಾಂಸ ಹೀಗೆ ನಾನಾ ಬಗೆಯಲ್ಲಿ ಲೇಸೆಂಬ ನಂಬಿಕೆಯು ಕಾಡಂಚಿನ ಗ್ರಾಮಗಳ ಜನರನ್ನು ಬೇಟೆಗೆ ದೂಡುತ್ತಿದೆ. ದಟ್ಟ ಕಾನನದಲ್ಲಿ ಬಂದೂಕಿನ ಮೊರೆತ ಹೆಚ್ಚುತ್ತಲೇ ಇದೆ. ಮಾಂಸದ ಬೇಡಿಕೆಯ ಬಹುಪಾಲು ಬರುವುದು ನಗರಗಳ ಜನರಿಂದಲೇ!
ಜಿಂಕೆ, ಕಡವೆ, ಮೊಲ, ಹಂದಿ, ಉಡ ಮೊದಲಾದವುಗಳು ಬೇಟೆಗಾರರ ಮೊದಲ ಆಯ್ಕೆ ಆಗುತ್ತಿವೆ. ‘ಕಾವೇರಿ ವನ್ಯಜೀವಿಧಾಮದ ಹನೂರು ವಲಯ ವ್ಯಾಪ್ತಿಯಲ್ಲಿ ಕಳೆದೊಂದು ದಶಕದಲ್ಲಿ 66 ಕಳ್ಳಬೇಟೆ ಪ್ರಕರಣಗಳಲ್ಲಿ ಬಂದೂಕು ಬಳಕೆಯಾದ ಬಗ್ಗೆ ವರದಿಯಾಗಿವೆ. ಇವರಲ್ಲಿನ ಶೇ 90ಕ್ಕೂ ಹೆಚ್ಚು ಪ್ರಕರಣಗಳು ಕಾಡುಪ್ರಾಣಿಗಳ ಮಾಂಸಕ್ಕಾಗಿಯೇ ನಡೆದಿವೆ’ ಎಂದು ಕಾವೇರಿ ವನ್ಯಜೀವಿ ಧಾಮದ ಹನೂರು ವಿಭಾಗದ ಎಸಿಎಫ್ ಮರಿಸ್ವಾಮಿ ಹೇಳುತ್ತಾರೆ.
‘ಕಾಡಂಚಿನ ಕೆಲವು ಹೋಟೆಲ್ಗಳು, ಢಾಬಾ ಹಾಗೂ ರೆಸಾರ್ಟ್ಗಳಿಂದಲೂ ಕಾಡುಪ್ರಾಣಿಗಳ ಮಾಂಸ ಗ್ರಾಹಕರಿಗೆ ಅಕ್ರಮವಾಗಿ ಸರಬರಾಜಾಗುತ್ತಿದೆ. ಇದಕ್ಕಿರುವ ಬೇಡಿಕೆ, ಬೆಲೆ ಎರಡೂ ಹೆಚ್ಚು. ಇವುಗಳಲ್ಲಿ ನಗರದ ಗ್ರಾಹಕರೇ ಹೆಚ್ಚಾಗಿರುತ್ತಾರೆ. ಇದು ಸ್ಥಳೀಯರನ್ನು ಪ್ರಚೋದನೆಗೆ ದೂಡುತ್ತಿದೆ’ ಎಂದು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.
‘ಕಳ್ಳಬೇಟೆಗಳು ನಿಲ್ಲಬೇಕಾದರೆ ಮೊದಲು ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ವನ್ಯಜೀವಿಧಾಮಗಳ ಸುತ್ತಲಿನ ಅಕ್ರಮ ರೆಸಾರ್ಟ್ಗಳ ಬಾಗಿಲು ಮುಚ್ಚಬೇಕು’ ಎನ್ನುತ್ತಾರೆ ಅವರು.
ಹನೂರು ಶೂಟೌಟ್ನಲ್ಲಿ ಮೃತಪಟ್ಟ ಮೂವರ ಮನೆಗಳೂ ಕಾವೇರಿ ವನ್ಯಜೀವಿ ಧಾಮದಿಂದ ಕೂಗಳತೆ ದೂರದಲ್ಲಿವೆ. ಬಹುತೇಕ ಸಂದರ್ಭಗಳಲ್ಲಿ ಕಾಡಂಚಿನ ಸ್ಥಳೀಯರೇ ಬೇಟೆ ಪ್ರಕರಣಗಳಲ್ಲಿ ಭಾಗಿ ಆಗುತ್ತಾರೆ ಎಂಬ ಆರೋಪವಿದೆ.
‘ಪ್ರಾಣಿಗಳ ಬೇಟೆಗಳು ಪ್ರಮುಖವಾಗಿ ಎರಡು ಕಾರಣಗಳಿಗೆ ನಡೆಯುತ್ತಿವೆ. ದಂತ, ಕೊಂಬು, ಉಗುರು, ಚರ್ಮ ಮೊದಲಾದವುಗಳಿಗಾಗಿ ನಡೆಯುವ ಬೇಟೆ ಅತ್ಯಂತ ವ್ಯವಸ್ಥಿತ ಜಾಲ. ಆದರೆ ಮಾಂಸಕ್ಕಾಗಿ ನಡೆಯುವ ಬೇಟೆಗಳು ಪ್ರಮುಖವಾಗಿ ಮೋಜು, ಪ್ರತಿಷ್ಠೆ, ಮಾಂಸ ಹಾಗೂ ಅಲ್ಪ ಹಣಕ್ಕಾಗಿ ನಡೆಯುವಂತಹವು. ಇಂತಹ ಪ್ರಕರಣಗಳಲ್ಲಿ ಸ್ಥಳೀಯರೇ ಆರೋಪಿಗಳಾಗಿರುತ್ತಾರೆ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
‘ಬೇಟೆಗಾರರು ಸಾಮಾನ್ಯವಾಗಿ ಅಮಾವಾಸ್ಯೆ, ಹುಣ್ಣಿಮೆಯಂತಹ ದಿನಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ತಮಿಳುನಾಡು ಭಾಗದಿಂದ ಕೆಲವರು ಮಧ್ಯರಾತ್ರಿ ಬಸ್ಗಳಲ್ಲಿ ಬಂದು ಕಾಡಿನ ಮಧ್ಯದಲ್ಲೇ ಇಳಿದು ಬೇಟೆಯಾಡಿ ನಂತರ ಮಾಂಸ ಇಲ್ಲವೇ ಉತ್ಪನ್ನವನ್ನು ಬೇರೊಂದು ವಾಹನದಲ್ಲಿ ಕೊಂಡೊಯ್ಯುತ್ತಾರೆ’ ಎಂದು ಸ್ಥಳೀಯರೊಬ್ಬರು ವಿವರಿಸುತ್ತಾರೆ.
‘ಮಾಂಸದ ಕಾರಣಕ್ಕೆ ಬೇಟೆ ಹೆಚ್ಚು ಎನ್ನುವುದು ನಿಜ. ಆದರೆ ಕಾಡಂಚಿನ ಗ್ರಾಮಗಳಲ್ಲಿ ಆಗಾಗ್ಗೆ ವನ್ಯಜೀವಿ ದಾಳಿಯೂ ಪ್ರಚೋದನೆ ಒಡ್ಡುತ್ತಿದೆ. ಹೊಲಗಳಿಗೆ ನುಗ್ಗುವ ಜಿಂಕೆ, ಹಂದಿಗಳನ್ನು ಹೊಡೆಯುವುದು ನಡೆದೇ ಇದೆ. ಅರಣ್ಯ ಇಲಾಖೆ ಈ ವಿಚಾರದಲ್ಲಿ ಸ್ಥಳೀಯರೊಡನೆ ಸಮನ್ವಯ ಸಾಧಿಸಿ ವನ್ಯಜೀವಿ ರಕ್ಷಣೆಯ ಕೆಲಸ ಮಾಡಬೇಕಿದೆ’ ಎಂಬುದು ಈ ಭಾಗದ ರೈತ ಮುಖಂಡರೊಬ್ಬರ ಆಗ್ರಹ.
ಬಂದೂಕು ಬಳಕೆ: ಅಧಿಕಾರಿಗಳಿಗೇ ಅಚ್ಚರಿ!
ಹನೂರು ಪ್ರಕರಣದ ಆರೋಪಿಗಳ ಬಳಿ ಪತ್ತೆ ಆಗಿರುವ ಬಂದೂಕು ವಿವಿಧ ಸ್ಫೋಟಕ ಸಾಮಗ್ರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೇ ಅಚ್ಚರಿ ತರಿಸಿವೆ. ಅದರಲ್ಲೂ ಸ್ಥಳೀಯರಿಗೆ ಗನ್ ಪೌಡರ್ ಬಳಕೆಯಂತಹ ಸೂಕ್ಷ್ಮತೆಗಳು ಮತ್ತು ತರಬೇತಿ ದೊರೆತದ್ದು ಎಲ್ಲಿಂದ ಎಂಬ ಪ್ರಶ್ನೆ ಮೂಡಿದೆ.
ಹನೂರಿನ ಕಾಡಂಚಿನ ಗ್ರಾಮಗಳಲ್ಲಿ ನಾಡ ಬಂದೂಕು ಬಳಕೆ ಸಾಮಾನ್ಯವಾಗುತ್ತಿದೆ. ತಮಿಳುನಾಡು ಗಡಿಭಾಗದಿಂದ ಹೆಚ್ಚಾಗಿ ಶಸ್ತ್ರಾಸ್ತ್ರ ಪೂರೈಕೆ ಆಗುತ್ತಿದೆ. ಇವುಗಳು ಸಾಮಾನ್ಯರಿಗೂ ಸುಲಭವಾಗಿ ಸಿಗುವಂತೆ ಆಗಿರುವುದು ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮೊದಲು ಇದನ್ನು ವ್ಯವಸ್ಥಿತವಾಗಿ ಪತ್ತೆ ಹಚ್ಚಿ ವಶಪಡಿಸಿಕೊಳ್ಳುವ ಕೆಲಸ ಆಗಬೇಕಿದೆ.