ಮೈಸೂರು ಜಿಲ್ಲೆಯಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿ; ಜನರಿಗೆ ತೀವ್ರ ತೊಂದರೆ
ಮೈಸೂರು: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ವಾರದಿಂದ ಈಚೆಗೆ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ.
ಗ್ರಾಮೀಣ ಭಾಗದಲ್ಲಿ ಸುಮಾರು 9 ರಿಂದ 10 ತಾಸು ಗೃಹಬಳಕೆ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ಕೃಷಿ ಪಂಪ್‌ಸೆಟ್‌ಗೆ ಮೂರು ತಾಸು ಸರಿಯಾಗಿ ತ್ರಿಫೇಸ್ ವಿದ್ಯುತ್ ದೊರೆಯುತ್ತಿಲ್ಲ.
‘ಸೆಸ್ಕ್ ಅಧಿಕಾರಿ, ಸಿಬ್ಬಂದಿ ಲೋಡ್‌ಶೆಡ್ಡಿಂಗ್ ಹೆಸರು ಉಪಯೋಗಿಸದೆ ಅದೇ ಅನುಭವವನ್ನು ಬಳಕೆದಾರರಿಗೆ ನೀಡುತ್ತಿದ್ದಾರೆ. ಮಕ್ಕಳ ಓದು, ಮನೆಯ ಕೆಲಸಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ’ ಎಂದು ರಾಜ್ಯ ರೈತ ಸಂಘದ ಮುಖಂಡ ಮರಂಕಯ್ಯ ತಿಳಿಸಿದರು.
ಮೈಸೂರು ನಗರದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಶತ ದಿನ ಪೂರೈಸಿದ ಹಿನ್ನೆಲೆಯಲ್ಲಿ ಅರಮನೆಗೆ ವಿಶೇಷ ಬೆಳಕಿನ ಅಲಂಕಾರ ಮಾಡಿ, ಬುಧವಾರ ರಾತ್ರಿ ಪರಿಶೀಲನೆ ಮಾಡಲಾಗಿತ್ತು. ಈ ವೇಳೆ ನಗರದ ಎಲ್ಲೆಡೆ ವಿದ್ಯುತ್ ಕಡಿತಗೊಂಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಭಾನುವಾರ (ಸೆ.6) ದಿನವಿಡೀ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದರಿಂದ ಉದ್ಯಮ ಕ್ಷೇತ್ರಗಳಿಗೂ ತೊಂದರೆ ಉಂಟಾಗಿತ್ತು.
ಚಾಮರಾಜನಗರ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದು, ಸಾರ್ವನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಸೆಸ್ಕ್ ಮುನ್ಸೂಚನೆ ನೀಡದೆ ವಿದ್ಯುತ್ ಕಡಿತಗೊಳಿಸುತ್ತಿದ್ದು ಪ್ರತಿದಿನ ಐದಾರು ಬಾರಿ ವ್ಯತ್ಯಯ ಉಂಟಾಗುತ್ತಿದೆ. ಹೆಚ್ಚು ವಿದ್ಯುತ್ ಬಳಕೆಯಾಗುವ ಬೆಳಗ್ಗೆ ಹಾಗೂ ರಾತ್ರಿಯ ಹೊತ್ತು ಕನಿಷ್ಠ ಅರ್ಧ ತಾಸಿನಿಂದ ಒಂದು ತಾಸಿನವರೆಗೂ ಕಡಿತ ಮಾಡಲಾಗುತ್ತಿದೆ. ಇದರಿಂದ ನಿತ್ಯದ ಕೆಲಸ ಕಾರ್ಯಗಳು ತಡವಾಗುತ್ತಿವೆ, ರೈತರು ಬೆಳೆಗಳಿಗೆ ನೀರು ಹಾಯಿಸಲು ಜಮೀನಿನಲ್ಲಿ ಬಿಡಾರ ಹೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಸನ ಜಿಲ್ಲೆಯಲ್ಲಿ ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಇಲ್ಲ, ಆದರೆ ಪ್ರತಿದಿವಸ ತುರ್ತು ನಿರ್ವಹಣಾ ಕೆಲಸಗಳಿಗಾಗಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಹಾಗೂ ನಗರ ಪ್ರದೇಶದಲ್ಲಿ ಗಣಪತಿ ಮೂರ್ತಿ ನೆಪ ಹೇಳಿ ಪ್ರತಿ ದಿವಸ ಎರಡು ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.