ಜಾರಕಿಹೊಳಿ ಚಿನ್ನದ ಗಣಿ; ಮೂರು ಕಂಪನಿಗಳ ಪಾಲು ಖರೀದಿ: ಇ.ಡಿ ಆರೋಪ
ಬೆಂಗಳೂರು: ಕಾಂಗೊದ ಚಿನ್ನ ಗಣಿಗಾರಿಕೆ ಕಂಪನಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರ ಮಗಳು, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೇರಿ ಅವರ ಕುಟುಂಬ ಹೂಡಿಕೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.
ಕಾಂಗೊದ ಚಿನ್ನದ ಗಣಿಗಾರಿಕೆ ಕಂಪನಿಯಲ್ಲಿ ಶೇ 40ರಷ್ಟು ಪಾಲು ಹೊಂದಿದ್ದರೆ, ಜಾಂಬಿಯಾದ ಚಿನ್ನ ನಿಕ್ಷೇಪ ಪತ್ತೆ ಕಂಪನಿಗಳಲ್ಲಿಯೂ ಸತೀಶ ಜಾರಕಿಹೊಳಿ ಕುಟುಂಬದವರು ಹೂಡಿಕೆ ಮಾಡಿದ್ದಾರೆ ಎಂದು ಇ.ಡಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ವಿದೇಶಿ ಕಂಪನಿಗಳಲ್ಲಿ ಅವರು ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದು, ಈ ಬಗ್ಗೆ ಆರ್‌ಬಿಐಗೆ ಮಾಹಿತಿ ನೀಡಿರಲಿಲ್ಲ. ಅವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಆರಂಭಿ
ಸಲಾಗಿತ್ತು ಎಂದು ಇ.ಡಿ ತಿಳಿಸಿದೆ.
‘ತನಿಖೆಯ ಭಾಗವಾಗಿ ಇದೇ 9–10ರಂದು ಸತೀಶ ಮತ್ತು ಅವರ ಕುಟುಂಬದವರು ಹಾಗೂ ಆಪ್ತರ ಮನೆ, ಕಚೇರಿ ಸೇರಿ 21 ಸ್ಥಳಗಳ ಮೇಲೆ ದಾಳಿ ಮಾಡಿ, ಶೋಧ ನಡೆಸಲಾಗಿತ್ತು. ಫೆಮಾ ಕಾಯ್ದೆಯ ಪ್ರಕಾರ, ವಿದೇಶಿ ಹೂಡಿಕೆ ಬಗ್ಗೆ ಆರ್‌ಬಿಐಗೆ ಮಾಹಿತಿ ನೀಡಬೇಕಿತ್ತು. ಆದರೆ, ಈ ಹೂಡಿಕೆಗಳ ಬಗ್ಗೆ ಅವರು ಆರ್‌ಬಿಐಗೆ ಮಾಹಿತಿ ನೀಡಿಲ್ಲ’ ಎಂದಿದೆ.
‘ಕಾಂಗೊದ ಮ್ಯಾಗ್ನಿಟೂಡ್ ಸ್ಟಾರ್ಸ್ ಎಸ್‌ಎಆರ್‌ಎಲ್ ಎಂಬ ಚಿನ್ನದ ಗಣಿಗಾರಿಕೆ ಕಂಪನಿಯ ಒಟ್ಟು ಮೌಲ್ಯದ ಶೇ 40ರಷ್ಟು ಸ್ವತ್ತುಗಳನ್ನು ಸತೀಶ ಜಾರಕಿಹೊಳಿ ಅವರು ಈಚೆಗೆ ಖರೀದಿಸಿದ್ದಾರೆ. ಮಗಳು ಪ್ರಿಯಾಂಕಾ, ಮಗ ರಾಹುಲ್, ಸೋದರಿ ಮಹಾದೇವಿ, ಸೋದರಿಯ ಪತಿ ಮತ್ತು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಡಿ.ಮಂಜುನಾಥ್ ಅವರು ಕಾಂಗೊದ ಎಲ್‌ಡೊರಾಡೊ ಮೈನಿಂಗ್ ರಿಸೋರ್ಸ್ ಲಿಮಿಟೆಡ್ ಮತ್ತು ಜಾಂಬಿಯಾದ ನವ ಆರಮ್ ಮೈನಿಂಗ್ ಲಿಮಿಟೆಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಶೋಧದ ವೇಳೆ ಈ ಎಲ್ಲ ಹೂಡಿಕೆಗಳ ಕುರಿತಾದ ದಾಖಲೆಗಳು ಲಭ್ಯವಾಗಿವೆ’ ಎಂದು ಪ್ರಕಟಣೆ ವಿವರಿಸಿದೆ.
‘ಮ್ಯಾಗ್ನಿಟೂಡ್ ಸ್ಟಾರ್ಸ್ ಎಸ್‌ಎಆರ್‌ಎಲ್ ಕಂಪನಿಯು ಕಾಂಗೊದಲ್ಲಿ ಹಲವು ಚಿನ್ನದ ಗಣಿಗಳನ್ನು ನಡೆಸುತ್ತಿದ್ದು, ಅಕ್ರಮ ಗಣಿಗಾರಿಕೆ ಮತ್ತು ರಫ್ತು ಅಕ್ರಮದ ಸಂಬಂಧ ಪ್ರಕರಣಗಳನ್ನು ಎದುರಿಸುತ್ತಿದೆ. ಅಲ್ಲದೆ, ಯಾವುದೇ ಷೇರು ಮಾರುಕಟ್ಟೆಯಲ್ಲಿ ಈ ಕಂಪನಿ ನೋಂದಣಿಯಾಗಿಲ್ಲ. ಇಂತಹ ಕಂಪನಿಯಲ್ಲಿನ ಹೂಡಿಕೆಯೇ ಅಕ್ರಮ. ಇದು ಗೊತ್ತಿದ್ದೂ ಜಾರಕಿಹೊಳಿ ಕುಟುಂಬದವರು ಹೂಡಿಕೆ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಇ.ಡಿ ಮೂಲಗಳು ಹೇಳಿವೆ.
‘ಉಳಿದ ಇನ್ನೆರಡು ಕಂಪನಿಗಳು ಚಿನ್ನದ ನಿಕ್ಷೇಪ ಪತ್ತೆ ಮತ್ತು ಚಿನ್ನ ರಫ್ತು ಸೇವೆ ಒದಗಿಸುತ್ತವೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ಚಿನ್ನದ ಗಣಿ ಗುತ್ತಿಗೆ, ಗಣಿಗಾರಿಕೆ ಮತ್ತು ಮಾರಾಟ ವ್ಯವಹಾರ ಆರಂಭಿಸುವ ಉದ್ದೇಶದಿಂದ ಹೂಡಿಕೆ ಮಾಡಿರುವ ಸಾಧ್ಯತೆ ಇದೆ. ಈ ಕುರಿತು ಕೇಳಲಾದ ಪ್ರಶ್ನೆಗಳಿಗೆ ಅವರು ಸಮರ್ಪಕವಾದ ಉತ್ತರ ನೀಡಿಲ್ಲ’ ಎಂದು ಹೇಳಿವೆ.
ಹೆದ್ದಾರಿ ನಿರ್ಮಾಣ ಕಂಪನಿಯಿಂದ ಲಂಚ
‘ಕೋಲ್ಕತ್ತದಲ್ಲಿ ಕೇಂದ್ರ ಕಚೇರಿ ಹೊಂದಿರುವ ಹೆದ್ದಾರಿ ನಿರ್ಮಾಣ ಕಂಪನಿ ‘ಬಿವಿಇಪಿಎಲ್’ ರಾಜ್ಯದಲ್ಲಿ ಎರಡು ಪ್ರಮುಖ ರಾಜ್ಯ ಹೆದ್ದಾರಿ ನಿರ್ಮಾಣ ಗುತ್ತಿಗೆಯನ್ನು ಲೋಕೋಪಯೋಗಿ ಇಲಾಖೆಯ ಕೆಆರ್‌ಡಿಎಲ್ ಮೂಲಕ ಪಡೆದುಕೊಂಡಿದ್ದು, ಇದಕ್ಕಾಗಿ ಸತೀಶ ಜಾರಕಿಹೊಳಿ ಅವರಿಗೆ ಲಂಚ ಸಂದಾಯವಾಗಿದೆ’ ಎಂದೂ ಇ.ಡಿ ಹೇಳಿದೆ.
‘ಬಿವಿಇಪಿಎಲ್ ಲಂಚ ನೀಡಿರುವುದರ ಸಾಕ್ಷ್ಯಗಳು ಶೋಧದ ವೇಳೆ ಪತ್ತೆಯಾಗಿವೆ. ಆದರೆ ಲಂಚವನ್ನು ಹಣದ ರೂಪದಲ್ಲಿ ನೀಡಿಲ್ಲ. ಬದಲಿಗೆ ಹವಾಲಾ ಮತ್ತಿತರ ಅಕ್ರಮ ಮಾರ್ಗಗಳ ಮೂಲಕ ಕಾಂಗೊಗೆ ತಲುಪಿಸಲಾಗಿದೆ. ಅಲ್ಲಿನ ಕಂಪನಿಗಳಲ್ಲಿ ಸತೀಶ ಜಾರಕಿಹೊಳಿ ಅವರ ಕುಟುಂಬದವರ ಹೆಸರಿನಲ್ಲಿ ಹೂಡಿಕೆ ಮಾಡಿದ್ದು, ಅದರ ದಾಖಲೆಗಳನ್ನು ಸತೀಶ ಅವರ ಕುಟುಂಬದವರಿಗೆ ತಲುಪಿಸಲಾಗಿದೆ’ ಎಂದು ಮೂಲಗಳು ವಿವರಿಸಿವೆ.
‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಕೋಲಾರ ಮೂಲಕ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ 2 ಪ್ರಮುಖ ರಾಜ್ಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಬಿವಿಇಪಿಎಲ್‌ಗೆ ಈಚೆಗೆ ನೀಡಲಾಗಿದೆ. ಈ ಗುತ್ತಿಗೆಗಳ ಒಟ್ಟು ಮೊತ್ತ ₹1,884 ಕೋಟಿ. ಒಂದು ಕಾಮಗಾರಿಗೆ ಸಂಬಂಧಿಸಿದಂತೆ ತಾಂತ್ರಿಕ ಬಿಡ್ ಸಲ್ಲಿಸಿದ್ದ ಬೇರೊಂದು ಕಂಪನಿಯ ವಿರುದ್ಧ ಬಿವಿಇಪಿಎಲ್ ಆಕ್ಷೇಪ ಸಲ್ಲಿಸಿತ್ತು. ಪರಿಶೀಲನೆಯ ನಂತರ ಬೇರೊಂದು ಕಂಪನಿಯನ್ನು ಇಲಾಖೆಯು ಅನರ್ಹ ಗೊಳಿಸಿತ್ತು. ನಂತರ ನಡೆದ ಟೆಂಡರ್‌ನಲ್ಲಿ ಬಿವಿಇಪಿಎಲ್‌ಗೆ ಗುತ್ತಿಗೆ ದೊರೆತಿತ್ತು’ ಎಂದಿವೆ.
ನಾಲ್ವರ ಮೇಲೆ ದಾಳಿ ಸಾಧ್ಯತೆ: ಸಿ.ಎಂ
‘ಕಾಂಗ್ರೆಸ್ ಪಕ್ಷದ ನಾಯಕರನ್ನು ಹಾಗೂ ಎನ್‌ಡಿಎ ಹೊರತಾದ ಇತರ ಪಕ್ಷದವರನ್ನು ಗುರಿ ಮಾಡಲಾಗುತ್ತಿದೆ. ಇನ್ನೂ ಮೂರು–ನಾಲ್ಕು ಜನರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡುವ ಸಾಧ್ಯತೆ ಇದೆ’ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸತೀಶ ವಿರುದ್ಧ ರಾಜಕೀಯ ದ್ವೇಷದ ದಾಳಿ ನಡೆಸಲಾಗಿದೆ. ಅವರಿಗೆ ಧೈರ್ಯ ತುಂಬಿದ್ದೇನೆ. ಅವರು ಯಾವುದೇ ತಪ್ಪು ಮಾಡಿಲ್ಲ. ಕಾನೂನು ಚೌಕಟ್ಟಿ ನಲ್ಲಿಯೇ ವ್ಯವಹಾರ ನಡೆಸುತ್ತಿದ್ದಾರೆ. ಬಿಜೆಪಿಯ ಕೆಲ ನಾಯಕರ ಮೇಲೆ ಅಕ್ರಮ ಹಣ ವರ್ಗಾವಣೆ ಹಾಗೂ ವಿದೇಶಿ ಖಾತೆಗಳಿಗೆ ಹಣ ಜಮೆ ಮಾಡಿ ರುವ ಆರೋಪಗಳಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಕಾಂಗ್ರೆಸ್ ನಾಯಕರ ಮೇಲಷ್ಟೇ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತಿವೆ’ ಎಂದರು.
‘ಲೆಕ್ಕಪತ್ರಗಳಲ್ಲಿ ಪ್ರಭಾವಿಗಳ ಹೆಸರು’
‘ದಾಳಿಯ ವೇಳೆ ದಾಖಲೆ ಇಲ್ಲದ ₹3.3 ಕೋಟಿ ನಗದು, ₹15 ಲಕ್ಷ ಮೌಲ್ಯದ ಡಾಲರ್ ಮತ್ತು ಯೂರೊ ಪತ್ತೆಯಾಗಿವೆ. ಸತೀಶ ಜಾರಕಿಹೊಳಿ ಅವರ ಈ ಎಲ್ಲ ಹೂಡಿಕೆಗಳ ಹಣಕಾಸು ವ್ಯವಹಾರಗಳನ್ನು ವೈ.ಡಿ.ಮಂಜುನಾಥ್ ನಿರ್ವಹಿಸು ತ್ತಿದ್ದರು. ಜಾರಕಿಹೊಳಿ ಕುಟುಂಬದ ಕೆಲ ಕಂಪನಿಗಳನ್ನು ಮಂಜುನಾಥ್ ಸಂಪೂರ್ಣವಾಗಿ ತಾವೇ ನಿರ್ವಹಿಸುತ್ತಿದ್ದರು. ಈ ಕುರಿತ ಲೆಕ್ಕಪತ್ರಗಳಲ್ಲಿ ರಾಜ್ಯದ ಕೆಲ ಪ್ರಭಾವಿಗಳ ಹೆಸರು ಇದೆ’ ಎಂದು ಇ.ಡಿ ಹೇಳಿದೆ.