
ಪ್ರಜಾವಾಣಿ ಸಂದರ್ಶನ |ಆಹಾರ ಗುಣಮಟ್ಟ ತಪಾಸಣೆ ಎಸ್‌ಒಪಿ ಶೀಘ್ರ: ಯು.ಟಿ.ಖಾದರ್
ಸೇವಿಸುವ ಆಹಾರ ಮತ್ತು ಔಷಧದ ಕುರಿತು ಜನರಿಗೆ ಖಾತರಿ ಇರಬೇಕು. ಅವು ಎಷ್ಟು ಹಳೆಯವು, ಅವುಗಳಲ್ಲಿರುವ ಅಂಶಗಳು ಯಾವುವು ಎಂಬ ಪೂರ್ತಿ ಮಾಹಿತಿ ಜನರಿಗೆ ತಿಳಿದಿರಬೇಕು ಎಂದು ಪ್ರತಿಪಾದಿಸುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್. ಅವರ ಸೂಚನೆ ಮೇರೆಗೆ ಬೆಂಗಳೂರಿನ ಸ್ಟಾರ್ ಹೋಟೆಲ್‌ಗಳಿಗೆ, ಔಷಧ ತಯಾರಿ ಹಾಗೂ ದಾಸ್ತಾನು ಸಂಸ್ಥೆಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸುತ್ತಿದ್ದಾರೆ. ಈ ವೇಳೆ ಆಹಾರ ಸುರಕ್ಷತೆ ಹಾಗೂ ಔಷಧ ಸುರಕ್ಷತೆ ಕುರಿತು ಆತಂಕ ಮೂಡಿಸುವ ಅಂಶಗಳು ಬೆಳಕಿಗೆ ಬಂದಿವೆ. ಜನ ಸೇವಿಸುವ ಆಹಾರ ಹಾಗೂ ಔಷಧಗಳ ಸುರಕ್ಷತೆ ಕಾಪಾಡುವ ಉದ್ದೇಶದಿಂದ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅಭಿಪ್ರಾಯಗಳ ಪ್ರಮುಖ ಅಂಶಗಳು ಇಲ್ಲಿವೆ
ಆಹಾರ ಪದಾರ್ಥ ಹಾಗೂ ಔಷಧಗಳ ಸುರಕ್ಷತೆಗಾಗಿ ಸರ್ಕಾರ ದಿಢೀರ್ ದಾಳಿ ನಡೆಸಿ, ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದೇಕೆ?
ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದೇ ಸೇವಿಸುವ ಆಹಾರದಿಂದ. ಆರೋಗ್ಯ ಕಾಪಾಡುವಲ್ಲಿ ಆಹಾರ ಹಾಗೂ ಔಷಧದ ಪಾತ್ರ ಮುಖ್ಯವಾದುದು. ಆಹಾರ ಮತ್ತು ಔಷಧ ಗುಣಮಟ್ಟ ಕಾಪಾಡುವ ವ್ಯವಸ್ಥೆಯ ಲೋಪ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಅಮೆರಿಕದ ಷಿಕಾಗೊಗೆ ಈಚೆಗೆ ಪ್ರವಾಸ ಕೈಗೊಂಡಿದ್ದೆ. ಆಗ ಅಲ್ಲಿನ ತಮಿಳು ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ್ದೆ. ಅದರ ಮಾಲೀಕನ ಜೊತೆ ಹರಟುತ್ತಿದ್ದಾಗ, ಆತ ಬ್ಲಾಕ್ ಚೈನ್ ವ್ಯವಹಾರವನ್ನೂ ನಡೆಸುತ್ತಿರುವುದು ಗೊತ್ತಾಯಿತು. ಅದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುವ ಕುತೂಹಲದಿಂದ, ‘ಚಿಕನ್ ಅನ್ನು ಎಷ್ಟು ಸಮಯದವರೆಗೆ ಇಡಲಾಗುತ್ತದೆ’ ಎಂದು ಕೇಳಿದ್ದೆ. ಆತ, ‘ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನು ಇರುತ್ತದೆ. ಸಾಮಾನ್ಯವಾಗಿ ಚಿಕನ್ ಅನ್ನು ಒಂದು ವರ್ಷದವರೆಗೂ ಇಡುತ್ತಾರೆ. ತಮಗೆ ಪೂರೈಕೆಯಾಗುವ ಬನ್‌ಗಳು ಇಂಗ್ಲೆಂಡ್, ಕೆನಡಾದಂತಹ ದೇಶಗಳಿಂದ ಬರುವುದು. ಅವನ್ನು ಎಂಟು ತಿಂಗಳವರೆಗೂ ಇಡುತ್ತಾರೆ’ ಎಂದು ಆತ ಹೇಳಿದ್ದನ್ನು ಕೇಳಿ ಆಶ್ಚರ್ಯವಾಯಿತು. ಅಷ್ಟು ಕಾಲ ದಾಸ್ತಾನಿಡುವ ಆಹಾರ ಸರಿ ಇರುತ್ತದೋ ಕೆಟ್ಟಿರುತ್ತದೋ ಎನ್ನುವ ಮಾಹಿತಿಗಿಂತ ಅದು ಎಷ್ಟು ಹಳೆಯದು ಎಂಬ ಮಾಹಿತಿ ಗ್ರಾಹಕರಿಗೆ ತಿಳಿಯಬೇಕು. ರಾಜ್ಯದಲ್ಲಿರುವ ಈ ವ್ಯವಸ್ಥೆ ಬಗ್ಗೆಯೂ ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಇಲ್ಲೂ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಲು ಮುಂದಾದೆವು.
ಮೊದಲು ಸ್ಟಾರ್ ಹೋಟೆಲ್‌ಗಳನ್ನೇ ಗುರಿಯಾಗಿಸಿದ್ದು ಏಕೆ?
ಸಣ್ಣ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಎರಡೇ ಸಮಸ್ಯೆ; ಅವರು ಆಹಾರ ಪದಾರ್ಥ ಕರಿಯಲು ಉಪಯೋಗಿಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತಾರೆ. ಸ್ವಚ್ಛತೆ ಸ್ವಲ್ಪ ಕಡಿಮೆ. ಅದನ್ನು ಹೊರತುಪಡಿಸಿದರೆ, ಅವರು ಸ್ಥಳೀಯವಾಗಿ ಲಭ್ಯ ಇರುವ ತಾಜಾ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಶೀತಲೀಕರಿಸಿ ವರ್ಷಗಟ್ಟಲೆ ದಾಸ್ತಾನಿಟ್ಟ ಆಹಾರ ಪದಾರ್ಥಗಳನ್ನು ಅವರು ಬಳಸುವುದು ಕಡಿಮೆ. ಸ್ಟಾರ್ ಹೋಟೆಲ್‌ಗಳಿಗೂ ಅಧಿಕಾರಿಗಳು ದಾಳಿ ನಡೆಸುತ್ತಾರೆ, ದೊಡ್ಡ ಹೋಟೆಲ್‌ನವರನ್ನೂ ಬಿಡುವುದಿಲ್ಲ ಎಂದು ಗೊತ್ತಾದರೆ ಸಣ್ಣ ಹೋಟೆಲ್‌ನವರು ಎಚ್ಚೆತ್ತುಕೊಂಡು ಗುಣಮಟ್ಟದ ಬಗ್ಗೆ ತಾವಾಗಿಯೇ ಕಾಳಜಿ ವಹಿಸುತ್ತಾರೆ. ಈ ಕಾರಣಕ್ಕಾಗಿ ಮೊದಲು ಸ್ಟಾರ್ ಹೋಟೆಲ್, ದೊಡ್ಡ ಸಂಸ್ಥೆಗಳ ಹೋಟೆಲ್‌ಗಳ ಆಹಾರ ಪದಾರ್ಥಗಳ ಗುಣಮಟ್ಟದ ತಪಾಸಣೆ ಆರಂಭಿಸಿದೆವು. ಆಗ ಒಂದೊಂದೇ ಹುಳುಕುಗಳು ಹೊರಬಂದವು.
ಆರೋಗ್ಯ ಇಲಾಖೆ ಸದ್ಯಕ್ಕೆ ಅಲ್ಲೊಂದು ಇಲ್ಲೊಂದು ದಾಳಿ ಮಾತ್ರ ನಡೆಸಿದೆ. ಆಹಾರ, ಔಷಧ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಶಾಶ್ವತ ವ್ಯವಸ್ಥೆ ರೂಪಿಸುವ ಅಗತ್ಯ ಇದೆಯಲ್ಲವೇ?
ಸದ್ಯಕ್ಕೆ ಜನರಿಂದ ದೂರು ಬಂದ ಕಡೆ ಮಾತ್ರ ಇಲಾಖೆಯ ಅಧಿಕಾರಿಗಳು ಆಹಾರ ಪದಾರ್ಥಗಳ ತಪಾಸಣೆ ನಡೆಸಿದ್ದಾರೆ. ಈ ಪ್ರಕ್ರಿಯೆ ನಿಯಮಿತವಾಗಿ ನಡೆಯಬೇಕಿದೆ. ಇದಕ್ಕಾಗಿ ಸರ್ಕಾರ ಶೀಘ್ರದಲ್ಲೇ ಪ್ರಮಾಣಿತ ಕಾರ್ಯ ವಿಧಾನವನ್ನು (ಎಸ್‌ಒಪಿ) ರೂಪಿಸಲಿದೆ. ಆಹಾರ ಪದಾರ್ಥಗಳ ಸುರಕ್ಷತೆ ಕಾಪಾಡುವ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸಲಿದೆ. ತಿನ್ನುವ ಆಹಾರ ಸುರಕ್ಷಿತವಾಗಿದೆ ಎಂದು ಜನರಿಗೆ ಖಾತರಿ ನೀಡುವುದು ನಮ್ಮ ಉದ್ದೇಶವೇ ಹೊರತು, ಹೋಟೆಲ್ ಅಥವಾ ಆಹಾರ ಪದಾರ್ಥ ತಯಾರಿಕಾ ಘಟಕಗಳನ್ನು ಗುರಿಯಾಗಿಸುವುದಲ್ಲ.
ಸೀಮಿತ ಸಂಖ್ಯೆಯ ಸಿಬ್ಬಂದಿಯನ್ನು ಇಟ್ಟುಕೊಂಡು, ಕೇವಲ ಮಾರ್ಗಸೂಚಿ ರಚಿಸಿ ಆಹಾರದ ಸುರಕ್ಷತೆಯ ಖಾತರಿ ನೀಡಲು ಸಾಧ್ಯವೇ?
ನಾವು ರೂಪಿಸುವ ಮಾರ್ಗಸೂಚಿಯಿಂದ ಎಲ್ಲವನ್ನೂ ನಿಯಂತ್ರಿಸಬಹುದು ಎಂದು ಹೇಳಲಾರೆ. ಆಹಾರ ಮತ್ತು ಔಷಧದ ಸುರಕ್ಷತೆ ವಿಚಾರದಲ್ಲಿ ಜನರು ಮೊದಲು ಜಾಗೃತರಾಗಬೇಕು. ತಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ, ಅದನ್ನು ಹೇಗೆ ತಯಾರಿಸಲಾಗುತ್ತದೆ, ಅದು ಎಷ್ಟು ಹಳೆಯದು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಆಹಾರ ಸುರಕ್ಷತೆ ಬಗ್ಗೆ ಸಂದೇಹಗಳಿದ್ದರೆ ದೂರು ನೀಡಲು ಕ್ಯೂಆರ್ ಕೋಡ್ ರೂಪಿಸಿದ್ದೇವೆ. ಸಂಘ ಸಂಸ್ಥೆಗಳು ಈ ವಿಚಾರದಲ್ಲಿ ಜಾಗೃತಿ ಮೂಡಿಸಲು ಮುಂದೆ ಬರಬೇಕು.
ಔಷಧಗಳ ವಿಚಾರದಲ್ಲೂ ನಕಲಿ ಹಾವಳಿ ಆಘಾತಕರ. ಇದನ್ನು ತಡೆಯಲು ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ?
ಕೆಲ ಕಂಪನಿಗಳ ಔಷಧಗಳಲ್ಲಿ ಅವಧಿ ಮೀರಿದ ಲೇಬಲ್‌ಗಳಿದ್ದುದು, ಲೇಬಲ್‌ಗಳನ್ನು ತಪ್ಪಾಗಿ ಅಳವಡಿಸಿದ್ದುದು, ದುಬಾರಿ ದರ ವಿಧಿಸುತ್ತಿರುವ ಕುರಿತು ನಮಗೂ ದೂರುಗಳು ಬಂದಿವೆ. ಕೆಲ ಔಷಧಗಳಿಗೆ ಸಮರ್ಪಕವಾದ ಎಂಆರ್‌ಪಿ ನಮೂದಿಸಿರಲಿಲ್ಲ. ಇಂತಹ ಔಷಧ ಮಾರಾಟ ಘಟಕಗಳಿಗೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ. ಔಷಧಗಳ ದರ ನಿಯಂತ್ರಣ ಕೇಂದ್ರ ಸರ್ಕಾರದ ಹೊಣೆ. ಕ್ಯಾನ್ಸರ್ ಔಷಧ ದರ ಪಟ್ಟಿಯಲ್ಲೇ ಬರುವುದಿಲ್ಲ. ಅದಕ್ಕೆ ಕೇಂದ್ರ ವಿನಾಯಿತಿ ನೀಡಿತ್ತು. ಅದೂ ದುರ್ಬಳಕೆ ಆಗುತ್ತಿದೆ. ಅಗತ್ಯ ಇಲ್ಲದಿದ್ದರೂ ದುಬಾರಿ ದರದ ಔಷಧ ನೀಡಿ ವಂಚಿಸುವ ಪ್ರಕರಣಗಳು ಇವೆ. ಔಷಧಗಳ ಗುಣಮಟ್ಟದ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸಲು ಶಾಶ್ವತ ವ್ಯವಸ್ಥೆ ಅಗತ್ಯವಿದೆ. ಔಷಧಾಲಯ, ಆಸ್ಪತ್ರೆ ಮಾತ್ರವಲ್ಲ, ಔಷಧ ತಯಾರಿಸುವ ಖಾಸಗಿ ಘಟಕಗಳನ್ನೂ ಆಗಾಗ್ಗೆ ತಪಾಸಣೆ ನಡೆಸುವ ವ್ಯವಸ್ಥೆ ರೂಪಿಸಲಿದ್ದೇವೆ.
ಔಷಧವನ್ನೇ ನಕಲಿ ಮಾಡಿದವರಿಗೆ ದಂಡ ವಿಧಿಸಿ ಬಿಟ್ಟುಬಿಟ್ಟರೆ ಸಾಕೇ?
ಔಷಧಕ್ಕೆ ನಕಲಿ ಲೇಬಲ್ ಅಂಟಿಸುವವರ ವಿರುದ್ಧ, ನಕಲಿ ಔಷಧಿ ತಯಾರಿಸಿ ಜನರ ಜೀವದ ಜೊತೆ ಆಟ ಆಡುವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇದಕ್ಕೆ ಅಗತ್ಯ ಕಾನೂನು ತಿದ್ದುಪಡಿಯ ಅಗತ್ಯವಿದೆ.
ಆಹಾರ– ಔಷಧ ಗುಣಮಟ್ಟ ಪರಿಶೀಲನೆಗೆ ಬೇಕಾದಷ್ಟು ಪ್ರಯೋಗಾಲಯಗಳು ನಮ್ಮಲ್ಲಿವೆಯೇ?
ಆಹಾರ ಪದಾರ್ಥಗಳ ಗುಣಮಟ್ಟ ತಪಾಸಣೆ ನಡೆಸಲು ಅಗತ್ಯ ಪ್ರಮಾಣದ ಪ್ರಯೋಗಾಲಯಗಳು ನಮ್ಮಲ್ಲಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಸುವ ಔಷಧ ತಯಾರಿಸಲು ಟೆಂಡರ್ ನೀಡುವಾಗಲೇ ಅವುಗಳ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತದೆ. ಖಾಸಗಿ ಕಂಪನಿಗಳು ತಯಾರಿಸಿದ ಔಷಧದಲ್ಲಿ ಅಗತ್ಯ ಔಷಧೀಯ ಪದಾರ್ಥಗಳು ನಿರ್ದಿಷ್ಟ ಪ್ರಮಾಣದಲ್ಲಿ ಇವೆಯೇ ಎಂಬುದನ್ನು ತಪಾಸಣೆ ನಡೆಸುವುದಕ್ಕೆ ಉತ್ಕೃಷ್ಟ ಪ್ರಯೋಗಾಲಯದ ವ್ಯವಸ್ಥೆ ಬೇಕು. ಅಂತಹ ಪ್ರಯೋಗಾಲಯಗಳು ನಮ್ಮಲ್ಲಿಲ್ಲ. ಅದಕ್ಕಾಗಿ ಎನ್‌ಎಬಿಎಲ್‌ನಿಂದ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳ ನೆರವು ಪಡೆಯಲಿದ್ದೇವೆ.