ಚಿಂತಾಮಣಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಕನಸು ನನಸಾಗುವುದೇ?

ಚಿಂತಾಮಣಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಕನಸು ನನಸಾಗುವುದೇ?

ಚಿಂತಾಮಣಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಕನಸು ನನಸಾಗುವುದೇ?

ಚಿಂತಾಮಣಿ: ತಾಲ್ಲೂಕಿನ ಜನರ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಕನಸು ಈಡೇರಿದ್ದು, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಘಟಕ ಕಾಲೇಜು ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕಿನಲ್ಲೀಗ ವೈದ್ಯಕೀಯ ಕಾಲೇಜಿನ ಕನಸು ಚಿಗುರೊಡೆದಿದೆ.

ನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ಬೆಂಗಳೂರು ವಿಭಾಗದ 4ರಿಂದ 5 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಚಿಂತಾಮಣಿ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕಿನ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ನೂರಾರು ಜನರಿಗೆ ಉದ್ಯೋಗ ದೊರೆಯುತ್ತದೆ ಎನ್ನುವುದು ಸ್ಥಳೀಯರ ಆಶಯ.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಚಿಂತಾಮಣಿ ತಾಲ್ಲೂಕು ಇತರೆ ತಾಲ್ಲೂಕುಗಳಿಗಿಂತ ಬೌಗೋಳಿಕವಾಗಿ ಹೆಚ್ಚು ವಿಸ್ತಾರವಾಗಿದೆ. ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಕೋಲಾರ ಜಿಲ್ಲೆ ಉದಯವಾದ ಸಂದರ್ಭದಲ್ಲೇ ಚಿಂತಾಮಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಕೂಗು ಕೇಳಿಬಂದಿತ್ತು. ಈಗ ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಕೂಗು ಬಲವಾಗಿ ಕೇಳಿಬರುತ್ತಿದೆ.

‘ತಾಲ್ಲೂಕು ಕೇಂದ್ರವಾಗಿರುವುದರಿಂದ ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಾಧ್ಯವಾಗುವುದಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜಿನ ಚಿಂತನೆ ಇದೆ. ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡುತ್ತಿರುವ ಕೆಲವು ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ’ ಎಂದು ಶಾಸಕ ಡಾ. ಎಂ.ಸಿ.ಸುಧಾಕರ್ ಹೇಳಿದ್ದರು.

ತಾಲ್ಲೂಕು ಆಸ್ಪತ್ರೆಯನ್ನು 150 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ಉನ್ನತೀಕರಣ ಕಾಮಗಾರಿ ನಡೆಯುತ್ತಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಹ ಕಾರ್ಪೋರೇಟ್ ಆಸ್ಪತ್ರೆ ಮಾದರಿಯಲ್ಲಿ ಉನ್ನತೀಕರಿಸಲಾಗಿದೆ. ತುರ್ತು ಚಿಕಿತ್ಸಾ ಘಟಕದ ಕಾಮಗಾರಿ ಸಹ ಮುಕ್ತಾಯದ ಹಂತಕ್ಕೆ ಬಂದಿದೆ.

ನೂರಾರು ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಿದ್ದು ನಿರ್ವಹಣೆ ಇಲ್ಲದಿದ್ದರೆ ಹಾಳಾಗುತ್ತವೆ. ಸಾರ್ವಜನಿಕರಿಗೆ ಸಮರ್ಪಕವಾಗಿ ಚಿಕಿತ್ಸೆ ದೊರೆಯುವುದಿಲ್ಲ. ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ಆಸ್ಪತ್ರೆಗಳ ನಿರ್ವಹಣೆ ಉತ್ತಮವಾಗಿ ನಡೆಯುತ್ತದೆ. ರೋಗಿಗಳಿಗೆ ಇಲ್ಲೇ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎನ್ನುತ್ತಾರೆ ಹಿರಿಯ ನಾಗರಿಕ ರಮೇಶ್‌.

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದೆ ಬಂದರೆ ಅಸ್ಪತ್ರೆ ಸೌಲಭ್ಯ, ವೈದ್ಯಕೀಯ ಕಾಲೇಜಿಗಾಗಿ ನಿವೇಶನ ನೀಡುವುದಾಗಿ ಶಾಸಕರು ಪ್ರಕಟಿಸಿ ತಾಲ್ಲೂಕಿನ ದೊಡ್ಡಿಹಳ್ಳಿ ಬಳಿ 20 ಎಕರೆ ಜಾಗ ಗುರುತಿಸಲಾಗಿತ್ತು.

ತಾಲ್ಲೂಕಿನಲ್ಲಿ ಒಕ್ಕಲಿಗ ಸಮುದಾಯ ಬಹುಸಂಖ್ಯಾತರಾಗಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಗಳಿವೆ. ಚಿಂತಾಮಣಿಯಲ್ಲೂ ಆದಿಚುಂಚನಗಿರಿಯ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು ಎನ್ನುವುದು ತಾಲ್ಲೂಕಿನ ಜನರ ಬಹುಕಾಲದ ಬೇಡಿಕೆ. ನಿರ್ಮಲಾನಂದನಾಥ ಸ್ವಾಮೀಜಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಸಕ್ತಿ ತೋರಿಸಿ, ನಗರದ ಸರ್ಕಾರಿ ಆಸ್ಪತ್ರೆಗಳು, ನಿವೇಶನವನ್ನು ಪರಿಶೀಲಿಸಿ, ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.

ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರ್ಕಾರಿ ಜಾಗ ಮಂಜೂರು ಮಾಡುವ ಪ್ರಸ್ತಾವನೆ ಸಲ್ಲಿಕೆಯಾದ ಕೂಡಲೇ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆ ಸ್ಥಳವು ನಗರಸಭೆ ಸರಹದ್ದಿನಲ್ಲಿ ಬರುತ್ತದೆ. ಹೀಗಾಗಿ ಟ್ರಸ್ಟ್‌ಗೆ ಮಂಜೂರು ಮಾಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ