
ಬರ ತೀವ್ರಗೊಳಿಸಿ ಮರೆಯಾದ ಮುಂಗಾರು
ಚಿಕ್ಕಮಗಳೂರು: ಮುಂಗಾರು ಮಾರುತಗಳು ಕೊನೆಯ ದಿನಗಳಲ್ಲಿದ್ದು, ಜಿಲ್ಲೆಯಲ್ಲಿ ಈ ವರ್ಷ ಬರಗಾಲದ ಪರಿಸ್ಥಿತಿಯನ್ನು ಉಳಿಸಿ ಹೊರಟಿವೆ. ಕಳೆದ 50 ವರ್ಷಗಳ ಮಳೆ ಅಂಕಿ ಅಂಶ ಗಮನಿಸಿದರೆ ಮಳೆ ಕಡಿಮೆಯಾಗಿರುವ ಐದನೇ ವರ್ಷ ಇದಾಗಿದೆ. ಮಳೆ ಕೊರತೆಯಿಂದ ಮುಂಗಾರು ಹಂಗಾಮಿನ ಬಿತ್ತನೆ ಶೇ 39ರಷ್ಟು ಮಾತ್ರ ಸಾಧ್ಯವಾಗಿದ್ದು, ಅವು ಕೂಡ ನೆಲ ಕಚ್ಚಿವೆ.
ಜೂನ್ 1ರಿಂದ ಸೆಪ್ಟೆಂಬರ್ ಅಂತ್ಯದ ತನಕದ ನಾಲ್ಕು ತಿಂಗಳ ಅವಧಿಯನ್ನು ಮಳೆಗಾಲ ಅಥವಾ ಮುಂಗಾರು ಹಂಗಾಮು ಎಂದು ಕರೆಯಲಾಗುತ್ತದೆ. ಈ ವರ್ಷ ಮುಂಗಾರಿನಲ್ಲಿ 861.5 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ವಾಡಿಕೆಯಂತೆ 1369.9 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಶೇ 37ರಷ್ಟು ಮಳೆ ಕೊರತೆ ಎಂದು ಅಂದಾಜಿಸಲಾಗಿದೆ.
ಕಳೆದ 50 ವರ್ಷಗಳಲ್ಲಿ ಮುಂಗಾರು ಮಳೆ ಪ್ರಮಾಣವನ್ನು ಗಮನಿಸಿದರೆ 1987ರಲ್ಲಿ ಅತೀ ಕಡಿಮೆ ಎಂದರೆ ಶೇ49ರಷ್ಟು ಮಳೆ ಕೊರತೆಯಾಗಿತ್ತು. ಅದನ್ನು ಹೊರತುಪಡಿಸಿದರೆ 2002ರಲ್ಲಿ ಶೇ 40ರಷ್ಟು, 2003ರಲ್ಲಿ ಶೇ 39ರಷ್ಟು, 2023ರಲ್ಲಿ ಶೇ 40ರಷ್ಟು ಮಳೆ ಕೊರತೆಯಾಗಿದೆ.
ಇನ್ನು 1970ರಿಂದ ಈಚೆಗೆ ಅತೀ ಹೆಚ್ಚು ಮಳೆ ಸುರಿಸಿರುವ ವರ್ಷ ಎಂದರೆ 2018. ವಾಡಿಕೆಗಿಂತ ಶೇ 32ರಷ್ಟು ಮಳೆಯಾಗಿತ್ತು. 2013ರಲ್ಲೂ ಶೇ 25ರಷ್ಟು ಮತ್ತು 2019ರಲ್ಲಿ ಶೇ 22ರಷ್ಟು ಹೆಚ್ಚಿನ ಮಳೆಯಾಗಿದೆ.
ಈ ವರ್ಷ ಮುಂಗಾರು ಮಾತ್ರವಲ್ಲ, ಮುಂಗಾರು ಪೂರ್ವ ಮಳೆಯೂ ಕೊರತೆಯಾಗಿದೆ. ಜನವರಿ 1ರಿಂದ ಮೇ 31ರ ಐದು ತಿಂಗಳ ಮಳೆಯ ಪ್ರಮಾಣ ಗಮನಿಸಿದರೆ ಶೇ 4ರಷ್ಟು ಮಾತ್ರ ಮಳೆ ಕೊರತೆ ಇತ್ತು.
ಈಗ ಮುಂಗಾರು ಮಾರುತಗಳು ವಾಪಸ್ ಹೊರಟಿದ್ದು, ಒಂದೆರಡು ದಿನಗಳಲ್ಲಿ ಅವುಗಳು ಅಂತ್ಯವಾಗಲಿವೆ. ಬೇರೆಡೆ ಮಳೆ ಬಾರದಿದ್ದರೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂಬ ನಿರೀಕ್ಷೆಯನ್ನು ಮುಂಗಾರು ಮಾರುತಗಳು ಹುಸಿಗೊಳಿಸಿದವು. ಸೆಪ್ಟೆಂಬರ್ ತಿಂಗಳಿನಲ್ಲಿ ಬರ ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿ ಮಾನ್ಸೂನ್ ಮಾರುತಗಳು ಮರೆಯಾಗುತ್ತಿವೆ. ಮಳೆಗಾಲದಲ್ಲೇ ಬಿರು ಬೇಸಿಗೆಯ ಬಿಸಿಲು ಕಾಣುತ್ತಿರುವುದು ಜಿಲ್ಲೆಯ ಪರಿಸರ ಮತ್ತು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಬಿತ್ತನೆಯೇ ಆಗದ ರಾಗಿ ಈ ವರ್ಷ ಮುಂಗಾರು ಅತ್ಯಂತ ದುರ್ಬಲ ಆಗಿರುವುದರಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಿತ್ತನೆಯ ಪ್ರಮಾಣವೇ ಕಡಿಮೆಯಾಗಿದೆ. ಬಿತ್ತನೆಯಾಗಿದ್ದ ಬೆಳೆಯೂ ಉಳಿದಿಲ್ಲ. ಪ್ರಮುಖವಾಗಿ ಬಯಲು ಸೀಮೆಯಲ್ಲಿ ರಾಗಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುತ್ತಿತ್ತು. 97 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ರಾಗಿ ಬೆಳೆಯೇ 58 ಸಾವಿರ ಹೆಕ್ಟೇರ್ ಬಿತ್ತನೆಯಾಗುತ್ತಿತ್ತು. ಕೃಷಿ ಇಲಾಖೆ ಅಂಕಿ–ಅಂಶಗಳ ಪ್ರಕಾರ ಈ ವರ್ಷ 21481 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಡೂರಿನಲ್ಲಿ ಅತೀ ಹೆಚ್ಚು 46 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದ್ದು 7830 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಆದರೆ ವಾಸ್ತವದಲ್ಲಿ ಅಷ್ಟು ಬಿತ್ತನೆಯೂ ಸಾಧ್ಯವಾಗಿಲ್ಲ. ಬಿತ್ತನೆ ಬೀಜ ಖರೀದಿಯ ಆಧಾರದಲ್ಲಿ ಕೃಷಿ ಇಲಾಖೆ ಅಂದಾಜಿಸುತ್ತದೆ. ಬಿತ್ತನೆ ಬೀಜ ಗೊಬ್ಬರ ಖರೀದಿಸಿದ ಸಾಕಷ್ಟು ರೈತರು ಮಳೆ ಕೊರತೆಯಿಂದ ಬಿತ್ತನೆಯನ್ನೇ ಮಾಡಿಲ್ಲ. ಇನ್ನು ಬಿತ್ತನೆ ಮಾಡಿದ್ದ ಅಲ್ಪಸ್ವಲ್ಪ ಬೆಳೆಯೂ ಮಳೆ ಇಲ್ಲದೆ ಮೊಳಕೆಯೊಡೆಯದೆ ಮಣ್ಣು ಪಾಲಾಯಿತು ಎಂದು ರೈತರು ಹೇಳುತ್ತಾರೆ. ಮುಸುಕಿನ ಜೋಳ ಹತ್ತಿ ಆಲೂಗಡ್ಡೆ ಈರುಳ್ಳಿ ಬೆಳೆ ಕೂಡ ರೈತರ ಕೈ ಹಿಡಿಯಲಿಲ್ಲ. ಸದ್ಯ ಬಯಲು ಸೀಮೆಯಲ್ಲಿ ಕೃಷಿ ಭೂಮಿಗಳಲ್ಲಿ ಹಸಿರೇ ಇಲ್ಲವಾಗಿದ್ದು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ಹೊಲಗಳು ಹಾಗೇ ಉಳಿದುಕೊಂಡಿವೆ.
ಕಡಿಮೆಯಾದ ಭತ್ತದ ನಾಟಿ ಮಲೆನಾಡಿನ ಮೂಡಿಗೆರೆ ಕಳಸ ಕೊಪ್ಪ ಶೃಂಗೇರಿ ನರಸಿಂಹರಾಜಪುರ ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಹೋಬಳಿಗಳಲ್ಲಿ ಭತ್ತ ಬೆಳೆಯಲಾಗುತ್ತದೆ. 13400 ಹೆಕ್ಟೇರ್ ಭತ್ತದ ನಾಟಿ ಗುರಿಯಲ್ಲಿ 9434 ನಾಟಿಯಾಗಿದೆ. ಕಳೆದ ವರ್ಷ ಈ ವೇಳೆಗೆ 11682 ಹೆಕ್ಟೇರ್‌ನಲ್ಲಿ ನಾಟಿಯಾಗಿತ್ತು ಎಂಬುದು ಕೃಷಿ ಇಲಾಖೆಯ ಮಾಹಿತಿ. ಮಲೆನಾಡಿನಲ್ಲೂ ಮಳೆ ಕೊರತೆಯಾಗಿರುವುದು ಭತ್ತದ ಬೆಳೆಯ ಮೇಲೂ ಪರಿಣಾಮ ಬೀರಿದೆ. ಭತ್ತದ ಗದ್ದೆಗಳಿಗೆ ನದಿ ತೊರೆ ಹಳ್ಳದ ನೀರನ್ನೇ ರೈತರು ನಂಬಿದ್ದಾರೆ. ಹಲವೆಡೆ ನೀರಿನ ಕೊರತೆಯಿಂದ ಭತ್ತದ ಬೆಳೆಗಳು ನೆಲದಲ್ಲೇ ಉಳಿದುಕೊಂಡಿದೆ. ನಾಟಿ ಮಾಡಿರುವ ಭತ್ತ ಕೈ ಸೇರುವ ಸಾಧ್ಯತೆಯೂ ಕಡಿಮೆ ಇದೆ ಎನ್ನುತ್ತಾರೆ ರೈತರು.
ಕಾಫಿಗೆ ಕಾಡುತ್ತಿರುವ ಕಾಂಡ ಕೊರಕ ಮಳೆಗಾಲದಲ್ಲಿ ಬೇಸಿಗೆಯ ಬಿಸಿಲಿರುವುದು ಕಾಫಿ ಬೆಳೆಗೆ ಕಾಂಡ ಕೊರಕದ ಕಾಟ ಹೆಚ್ಚಾಗಿದೆ. ಶೀತಾಂಶ ಇದ್ದರೆ ಸಾಮಾನ್ಯವಾಗಿ ಕಾಂಡ ಕೊರಕ ಹುಳುಗಳ ಕಾಟ ಕಡಿಮೆಯಾಗಲಿದೆ. ಶೀತಾಂಶ ಕಡಿಮೆಯಾದರೆ ಇವುಗಳು ಕಾಟ ಜಾಸ್ತಿಯಾಗಲಿದೆ. ಕಾಂಡ ಕೊರಕ ಹುಳು ಕೊರೆದಿರುವ ಗಿಡದ ರಕ್ಕೆ ಮುರಿದು ಸುಡಲಾಗುತ್ತಿದೆ. ಮಳೆ ಕಡಿಮೆ ಆಗಿರುವುದರಿಂದ ಈಗ ಕಾಫಿ ಗಿಡಗಳ ಮೂಲ ಕಾಂಡವನ್ನೇ ಹುಳುಗಳು ಕೊರೆಯಲಾರಂಭಿಸಿವೆ. ಇದೇ ರೀತಿ ಬಿಸಿಲು ಮುಂದುವರಿದರೆ ಕಾಫಿ ಗಿಡಗಳೇ ಉಳಿಯುವ ಲಕ್ಷಣಗಳಿಲ್ಲ ಎನ್ನುತ್ತಾರೆ ಬೆಳೆಗಾರರು. ಕಾಂಡ ಕೊರಕ ಕಾಟದಿಂದ ಹಾಳಾದ ಗಿಡಗಳ ಜಾಗಕ್ಕೆ ಹೊಸ ಗಿಡ ನೆಡಲು ನೆಲದಲ್ಲಿ ತೇವಾಂಶ ಇಲ್ಲ. ಗುಂಡಿ ತೆಗೆಯಲು ಸಹ ಸಾಧ್ಯವಾಗದ ಸ್ಥಿತಿ ಇದೆ. ಇನ್ನು ಗೊಬ್ಬರ ಹಾಕಲು ಕಾದಿರುವ ಬೆಳೆಗಾರರಿಗೆ ಮಳೆ ಇಲ್ಲವಾಗಿದೆ. ಕೊಳವೆಬಾವಿ ಲಭ್ಯತೆ ಇರುವ ಬೆಳೆಗಾರರು ಗೊಬ್ಬರ ಹಾಕಿ ಸ್ಪಿಂಕ್ಲರ್ ಮಾಡಿಸುತ್ತಿದ್ದಾರೆ. ಬೇರೆ ಕಾಫಿ ತೋಟಗಳು ಹಾಳಾಗುವ ಸಾಧ್ಯತೆ ಇದೆ. ಉಷ್ಣಾಂಶ ಏರಿಕೆ ಆಗುತ್ತಿರುವುದರಿಂದ ಕಾಫಿ ಈಚುಗಳು ಬಲಿಯಲು ಸಾಧ್ಯವಾಗುತ್ತಿಲ್ಲ. ಗಿಡಗಳಲ್ಲಿ ಹೊಸ ಚಿಗುರು ಕೂಡ ಕಾಣಿಸುತ್ತಿಲ್ಲ. ಮುಂದಿನ 8ರಿಂದ 10 ದಿನಗಳಲ್ಲಿ ಮಳೆ ಬಂದರೆ ಶೇ 50ರಷ್ಟು ಫಸಲು ಕೈಸೇರುವ ಸಾಧ್ಯತೆ ಇದೆ. ಇಲ್ಲದಿದ್ದರೆ ಈ ಬಾರಿ ಕಾಫಿ ಫಸಲು ಸಂಪೂರ್ಣ ಕುಸಿಯಲಿದೆ ಎಂಬುದು ಬೆಳೆಗಾರರ ಆತಂಕ.
ಬತ್ತಿದ ಕೊಳವೆ ಬಾವಿ: ಅಡಿಕೆ ತೋಟ ಉಳಿಸಲು ಪರದಾಟ ಮಳೆಗಾಲದಲ್ಲೇ ಬೇಸಿಗೆ ವಾತಾವರಣ ಇರುವುದು ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಬಯಲು ಸೀಮೆಯಲ್ಲಿ ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ತರೀಕೆರೆ ಅಜ್ಜಂಪುರ ಕಡೂರು ಮತ್ತು ಚಿಕ್ಕಮಗಳುರು ತಾಲ್ಲೂಕಿನ ಬಯಲು ಸೀಮೆಯಲ್ಲಿ ಅಡಿಕೆ ಬೆಳೆ ವ್ಯಾಪಕವಾಗಿದೆ. ಡಿಸೆಂಬರ್ ತನಕ ಅಡಿಕೆ ಕೊಯ್ಲು ಕೆಲಸ ನಡೆಯಲಿದ್ದು ಆ ತನಕ ತೋಟ ನಿರ್ವಹಣೆ ಮಾಡುವುದು ಈಗ ರೈತರಿಗೆ ಕಷ್ಟವಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು ಒಂದೆರಡು ಬಾರಿ ಮಳೆ ಬಂದರೂ ತೋಟಗಳನ್ನು ಹೇಗೋ ಉಳಿಸಿಕೊಳ್ಳಬಹುದು. ಡಿಸೆಂಬರ್ ನಂತರ ಟ್ಯಾಂಕರ್ ನೀರಿನ ಮೊರೆ ಹೋಗುವ ಆಲೋಚನೆ ಇದೆ. ಮಳೆ ಬಾರದಿದ್ದರೆ ಈಗಲೇ ಟ್ಯಾಂಕರ್ ನೀರು ತಂದು ತೋಟ ಉಳಿಸಿಕೊಳ್ಳಬೇಕಾಗುತ್ತದೆ. ಮುಂದಿನ ಮಳೆಗಾಲದ ತನಕ ಟ್ಯಾಂಕರ್ ನೀರಿನಲ್ಲಿ ತೋಟ ನಿರ್ವಹಣೆ ಮಾಡುವುದು ಕಷ್ಟ ಎಂದು ಅಜ್ಜಂಪುರ ತಾಲ್ಲೂಕಿನ ಚೀರನಹಳ್ಳಿಯ ಕಿರಣ್ ಹೇಳುತ್ತಾರೆ.
ಜೂನ್ 1ರಿಂದ ಈವರೆಗಿನ ಮಳೆ ಪ್ರಮಾಣ(ಮಿಲಿ ಮೀಟರ್‌ಗಳಲ್ಲಿ) ತಾಲ್ಲೂಕು;ವಾಡಿಕೆ ಮಳೆ;ಸುರಿದ ಮಳೆ;ವ್ಯತ್ಯಾಸ ಚಿಕ್ಕಮಗಳೂರು;381.8;557.0;+46 ಕಡೂರು;226.7;121.1–47 ಕೊಪ್ಪ;2423.9;1770.2;–27 ಮೂಡಿಗೆರೆ;1726.1;1266.4;–27 ನರಸಿಂಹರಾಜಪುರ;1228.4;829.2;–32 ಶೃಂಗೇರಿ;3313.1;3024.9;–9 ತರೀಕೆರೆ;537.2;314.6;–41 ಅಜ್ಜಂಪುರ;347.3;171.7;–51 ಕಳಸ;2857.1;2011.7;–30 ––– ಕೃಷಿ ಬೆಳೆಗಳ ಬಿತ್ತನೆ ವಿಸ್ತೀರ್ಣ(ಹೆಕ್ಟೇರ್‌ಗಳಲ್ಲಿ) ತಾಲ್ಲೂಕು;ಬೆಳೆಗಳು;ಬಿತ್ತನೆ ಗುರಿ;ಬಿತ್ತನೆಯಾದ ಪ್ರಮಾಣ;ಶೇಕಡವಾರು;ಕಳೆದ ವರ್ಷ ಬಿತ್ತನೆ ಪ್ರಮಾಣ ಚಿಕ್ಕಮಗಳೂರು;ರಾಗಿಭತ್ತಮುಸುಕಿನ ಜೋಳಹತ್ತಿ;8855;3056;35;6245 ಮೂಡಿಗೆರೆ;ಭತ್ತ;2780;2093;75;2300 ಕಳಸ;ಭತ್ತ;720;513;71;640 ಕೊಪ್ಪ;ಭತ್ತ;2500;1962;78;2350 ಶೃಂಗೇರಿ;ಭತ್ತ;1800;1665;93;1680 ನರಸಿಂಹರಾಜಪುರ;ಭತ್ತ;2150;1680;78;2123 ತರೀಕೆರೆ;ರಾಗಿ;ಭತ್ತ;ನೆಲಗಡಲೆ;ಮುಸುಕಿನ ಜೋಳ;7485;3006;40;6795 ಅಜ್ಜಂಪುರ;ರಾಗಿ;ನೆಲಗಡಲೆ;ಮುಸುಕಿನ ಜೋಳ;12180;13111;108;11385 ಕಡೂರು;ಹತ್ತಿ;ರಾಗಿ;ಮುಸುಕಿನ ಜೋಳ;ನೆಲಗಡಲೆ;ಹೆಸರು;ಎಳ್ಳು;58575;10332;18;46137