
‘ಪಿ.ಜಿ.ಆರ್ ಸಿಂಧ್ಯ ಸಿ.ಎಂ ಆಗಬೇಕಿತ್ತು’ ಎಂದು ಸಿದ್ದರಾಮಯ್ಯ ಹೇಳಿದರು
ಬೆಂಗಳೂರು: ‘ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಮತ್ತು ಸಾಮರ್ಥ್ಯ ಪಿ.ಜಿ.ಆರ್ ಸಿಂಧ್ಯ ಅವರಿಗೆ ಇತ್ತು. ಆದರೆ ಆಗಲಿಲ್ಲ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹೇಳಿದರು.
ಸಿಂಧ್ಯ ಅವರ 78ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ, ಅವರ ಕುರಿತಾದ ‘ಪಿಜಿಆರ್ ಸಿಂಧ್ಯಾ–ಎ ಲೈಫ್ ಆಫ್ ಸರ್ವಿಸ್’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಸಿದ್ದರಾಮಯ್ಯ ಮಾತನಾಡಿದರು. ‘ಸಿಂಧ್ಯ ಅವರ ಬದುಕು ಮತ್ತು ಬದ್ಧತೆಯನ್ನು ಈ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ’ ಎಂದರು.
‘ಸಿಂಧ್ಯ ಅವರು ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಪತ್ರಿಕೆಯನ್ನೇ ನೀಡಿಲ್ಲ. ಫೋನ್ ಕರೆ ಮಾಡಿ, ಪುಸ್ತಕ ಬಿಡುಗಡೆ ಇದೆ ಬನ್ನಿ ಎಂದರು. ಆಹ್ವಾನ ಪತ್ರಿಕೆ ನೀಡುವಲ್ಲಿ ನನ್ನನ್ನು ಕಡೆಗಣಿಸಿದರು. ಇರಲಿ ಈ ಬಗ್ಗೆ ನನಗೆ ಬೇಸರವಿಲ್ಲ. ನನ್ನ ಮತ್ತು ಸಿಂಧ್ಯ ಅವರದ್ದು ಒಂದು ರೀತಿಯಲ್ಲಿ ಹೇಟ್ ಆ್ಯಂಡ್ ಲವ್ ಸ್ಟೋರಿ’ ಎಂದು ಚಟಾಕಿ ಹಾರಿಸಿದರು.
‘ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಸಿಂಧ್ಯ ಅವರಿಗೆ ಆರ್ಥಿಕ ಇಲಾಖೆ ನೀಡಲಾಗಿತ್ತು. ನಾನು ಆರೂವರೆ ವರ್ಷ ಆ ಖಾತೆ ನಿರ್ವಹಿಸಿದ್ದೆ. ದೇವೇಗೌಡ ಅವರು ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ್ದ ಕಾರಣ ಸಿಂಧ್ಯಗೆ ಆ ಖಾತೆ ಸಿಕ್ಕಿತ್ತು. ಅವರನ್ನು ಭೇಟಿ ಮಾಡಿದಾಗ, ‘ಏನಯ್ಯಾ ಹೊಸ ಇಲಾಖೆ ಹೇಗಿದೆ’ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು, ‘ನೀನು ಈ ಇಲಾಖೆಯಲ್ಲಿ ಮಾಡಿಹೋಗಿರುವ ತಪ್ಪುಗಳನ್ನು ಹುಡುಕಿ ಎಂದು ಮೇಲಿಂದ ಆದೇಶ ಬಂದಿದೆ. ಹುಡುಕುತ್ತಿದ್ದೇನೆ’ ಎಂದರು. ನಾನು, ಹುಡುಕು ಹುಡುಕು ಎಂದಿದ್ದೆ’ ಎಂದು ಹೇಳಿದರು.
ಪಿಜಿಆರ್ ಸಿಂಧ್ಯ, ಸಚಿವರಾದ ಯು.ಟಿ.ಖಾದರ್, ಈಶ್ವರ ಬಿ.ಖಂಡ್ರೆ, ಬಸವರಾಜ ರಾಯರಡ್ಡಿ, ಎಚ್.ಸಿ.ಬಾಲಕೃಷ್ಣ, ಕೃತಿಯ ಕರ್ತೃ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ.ಕೆ.ಖಂಡೇಲ್‌ವಾಲ್, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಉಪಾಧ್ಯಕ್ಷ ಕೊಂಡಜ್ಜಿ ಬಿ.ಷಣ್ಮುಖಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಅವಕಾಶ ಕಿತ್ತು ಕೊಳ್ಳಬೇಕು’
‘ಸಿಂಧ್ಯ ಅವರು ನನಗಿಂತಲೂ ಮೊದಲೇ ಸಚಿವರಾಗಿದ್ದರು. ನಾನು ಹಲವು ವರ್ಷಗಳ ನಂತರ ಸಚಿವನಾದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ, ಅವರು ಸಚಿವರಾಗಿಯೇ ಉಳಿದರು’ ಎಂದು ಸಿದ್ದರಾಮಯ್ಯ ಹೇಳಿದರು.
ಆಗ ಸಿಂಧ್ಯ, ‘ನನಗೆ ಅವಕಾಶ ಸಿಗಲಿಲ್ಲ’ ಎಂದರು.
ಸಿದ್ದರಾಮಯ್ಯ, ‘ನಮಗೆ ಯಾರೂ ಅವಕಾಶ ನೀಡುವುದಿಲ್ಲ. ಅದಾಗೆ ಬರಲಿ ಎಂದು ಕುಳಿತರೆ ಅದು ಬರುವುದಿಲ್ಲ. ನಾವು ಅವಕಾಶವನ್ನು ಕಿತ್ತುಕೊಳ್ಳಬೇಕು. ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು. ಸಿಂಧ್ಯ ಹಾಗೆ ಮಾಡಲಿಲ್ಲ’ ಎಂದರು.