
ಬಸವಕಲ್ಯಾಣ: ಮುಡಬಿ ಗ್ರಾಮದ ಕಾಲೇಜು ರಸ್ತೆ, ಬಸ್ ನಿಲ್ದಾಣದ ಅವ್ಯವಸ್ಥೆ
ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರವೂ ಆದ ಮುಡಬಿ ಗ್ರಾಮದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತೆರಳಲು ಕಚ್ಚಾ ರಸ್ತೆ ಅವಲಂಬಿಸಬೇಕು. ಗ್ರಾಮದ ಬಸ್ ತಂಗುದಾಣ ಅವ್ಯವಸ್ಥೆಯಿಂದ ಕೂಡಿದ್ದು, ಪ್ರತಿದಿನ ಜನ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದ ಸುತ್ತಲಿನಲ್ಲಿ 6 ವಾಡಿಗಳು ಮತ್ತು 18 ತಾಂಡಾಗಳ ಜನರು ಕಿರಾಣಾ, ಬಟ್ಟೆ, ತರಕಾರಿ ಮತ್ತು ಹಣ್ಣು ಇತ್ಯಾದಿ ಖರೀದಿಗೂ ಈ ಊರನ್ನು ಅವಲಂಬಿಸಿದ್ದಾರೆ. ಹುಮನಾಬಾದ್, ಬಸವಕಲ್ಯಾಣ, ಆಳಂದ, ಕಲಬುರ್ಗಿ ಮತ್ತಿತರೆ ನಗರಗಳಿಗೆ ಹೋಗುವುದಕ್ಕೂ ಇದೇ ಮಾರ್ಗ. ಹೀಗಾಗಿ ಯಾವಾಗಲೂ ಇಲ್ಲಿನ ಬಸ್ ನಿಲ್ದಾಣದಲ್ಲಿ ಜನಜಂಗುಳಿ ನೆರೆದಿರುತ್ತದೆ.
ಪ್ರಯಾಣಿಕರ ತಂಗುದಾಣ ಸಣ್ಣದಾಗಿದ್ದು, ಬಸ್‌ಗಳು ನಿಲ್ಲಲು ಸ್ಥಳದ ಕೊರತೆ ಕಾಡುತ್ತಿದೆ. ಮಳೆ, ಗಾಳಿ, ಬಿಸಿಲು ಇದ್ದಾಗ ಪ್ರಯಾಣಿಕರು ತಂಗುದಾಣದಲ್ಲಿ ಕುಳಿತುಕೊಳ್ಳುವುದಕ್ಕೆ ಜಾಗ ಸಾಲುತ್ತಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆವೂ ಇಲ್ಲ. ಗ್ರಾಮ ಪಂಚಾಯಿತಿಯಿಂದ ಶೌಚಾಲಯ ನಿರ್ಮಾಣಕ್ಕೆ ನಿರ್ಣಯ ಕೈಗೊಂಡರೂ ಈವರೆಗೆ ಕೆಲಸ ಆಗಿಲ್ಲ. ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ.
ಸರ್ಕಾರಿ ಪದವಿಪೂರ್ವ ಕಾಲೇಜು ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿದೆ. ಅರ್ಧದಷ್ಟು ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ಇನ್ನರ್ಧ ಕಚ್ಚಾ ರಸ್ತೆಯೇ ಇದೆ. ರಸ್ತೆಯಲ್ಲಿ ತಗ್ಗುಗುಂಡಿ ಬಿದ್ದಿದ್ದು, ರಸ್ತೆ ಇಕ್ಕಟ್ಟಾಗಿದೆ. ಇರುವುದರಿಂದ ವಾಹನಗಳ ಓಡಾಟಕ್ಕೆ ಮತ್ತು ನಡೆದುಕೊಂಡು ಹೋಗುವುದಕ್ಕೂ ಸಂಕಟ ಅನುಭವಿಸಬೇಕಾಗುತ್ತಿದೆ.
ಹಾರಕೂಡಕ್ಕೆ ಹೋಗುವ ರಸ್ತೆಯಲ್ಲಿನ ವಿದ್ಯಾರ್ಥಿ ನಿಲಯದ ಸಮೀಪ ಮತ್ತು ಹಿರೇನಾಗಾಂವಕ್ಕೆ ಹೋಗುವ ರಸ್ತೆಯಲ್ಲಿ ಪಿಕೆಪಿಎಸ್ ಎದುರಿನ ರಸ್ತೆಯಲ್ಲಿ ತಗ್ಗುಗುಂಡಿಗಳಿದ್ದು ಯಾವಾಗಲೂ ಅಲ್ಲಲ್ಲಿ ಚರಂಡಿ ನೀರು ಸಂಗ್ರಹಗೊಂಡಿರುತ್ತದೆ. ಬಸ್ ನಿಲ್ದಾಣದ ಎದುರಿನ ರಸ್ತೆ ಅಗಲಗೊಳಿಸಬೇಕು. ಚರಂಡಿ ವ್ಯವಸ್ಥೆಯೂ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-33-1378279311