
ನರೇಗಲ್| ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ದಿನವಿಡೀ ಸರತಿಯಲ್ಲಿ ನಿಲ್ಲುವ ದುಸ್ಥಿತಿ
ನರೇಗಲ್: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಪಡಿತರ ವಿತರಣಾ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ನಿರಂತರ ಸರ್ವರ್ ಸಮಸ್ಯೆಯಿಂದಾಗಿ ಬಡ ಜನರು ಪಡಿತರ ಧಾನ್ಯ ಪಡೆಯಲು ತೀವ್ರ ಹರಸಾಹಸ ಪಡುವಂತಾಗಿದೆ.
ಸೋಮವಾರವೇ ಕೊನೆ ದಿನಾಂಕ ಎನ್ನುವ ಕಾರಣಕ್ಕೆ ಬೆಳಿಗ್ಗೆಯಿಂದಲೇ ಪಡಿತರ ಅಂಗಡಿಗಳ ಎದುರು ಗ್ರಾಹಕರು ಸಾಲುಗಟ್ಟಿ ನಿಲ್ಲುತ್ತಿದ್ದು, ಇನ್ನೂ ಹಲವರಿಗೆ ಪಡಿತರ ಸಿಗದಿರುವುದರಿಂದ ವಿತರಣೆಯ ಕೊನೆಯ ದಿನವನ್ನು ವಿಸ್ತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಸಂತೆ ಬಜಾರ್‌ನ ಗಣೇಶ ಗುಡಿ ಸಮೀಪವಿರುವ ಸೊಸೈಟಿ ಪಡಿತರ ಕೇಂದ್ರದ ಮುಂದೆ ನಿತ್ಯ ಬೆಳಿಗ್ಗೆ 6 ಗಂಟೆಯಿಂದಲೇ ಗ್ರಾಹಕರು ಜಮಾಯಿಸುತ್ತಿದ್ದಾರೆ.
ವೃದ್ಧರು, ಮಹಿಳೆಯರು ಹಾಗೂ ದಿನಗೂಲಿ ಕಾರ್ಮಿಕರು ಬಿಸಿಲು -ಮಳೆಯೆನ್ನದೆ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ದುಸ್ಥಿತಿ ನಿರ್ಮಾಣವಾಗಿದೆ.
ದಿನದ ಕೂಲಿ ಕೆಲಸ ಬಿಟ್ಟು ಬಂದ ಕಾರ್ಮಿಕರಿಗೆ, ದಿನವಿಡೀ ಕಾದು ಕೊನೆಗೆ ಸರ್ವರ್ ಬಾರದೆ ಬರಿಗೈಯಲ್ಲಿ ಮನೆಗೆ ಮರಳುವಂತಾಗಿದೆ,
ಕೂಲಿಯೂ ಇಲ್ಲದೆ, ಪಡಿತರವೂ ಸಿಗದೆ ಆರ್ಥಿಕ, ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ವರ್ ಯಾವಾಗ ಸರಿಯಾ ಗಲಿದೆ ಎಂಬ ಬಗ್ಗೆ ನ್ಯಾಯಬೆಲೆ ಅಂಗಡಿಯವರಿಗೂ ಸ್ಪಷ್ಟತೆಯಿಲ್ಲದ ಕಾರಣ, ಕ್ಯೂನಲ್ಲಿ ನಿಂತ ಜನರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯುತ್ತಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಈ ತಾಂತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಡಿತರ ಪಡೆಯಲು ಸರ್ವರ್ ಸಮಸ್ಯೆ ದೊಡ್ಡ ಅಡ್ಡಿಯಾಗಿದೆ. ಶ್ರಾವಣ ಹಬ್ಬದ ಸಂಭ್ರಮದ ನಡುವೆ ಹಬ್ಬ ಆಚರಿಸುವುದನ್ನು ಬಿಟ್ಟು ಅಂಗಡಿ ಎದುರು ಕಾಯುವಂತಾಗಿದೆ. ಅಧಿ ಕಾರಿಗಳು ಕೂಡಲೇ ಸರ್ವರ್ ಸಮಸ್ಯೆ ಸರಿಪಡಿಸಿ, ಪಡಿತರ ಪಡೆಯುವ ದಿನ ವನ್ನು ವಿಸ್ತರಿಸಬೇಕು ಎಂದು ರೈತ ಮುಖಂಡ ಶರಣಪ್ಪ ಧರ್ಮಾಯತ ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-23-1424626496