
ಗದಗ| ರೈತರ ಕೈಹಿಡಿಯದ ತರಕಾರಿ ಬೆಳೆಗಳು; ಶ್ರಾವಣ ಮಾಸದಲ್ಲಿ ಆದಾಯ ಕುಸಿತ
ಗದಗ: ಶ್ರಾವಣ ಮಾಸದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ತರಕಾರಿ ಬೆಳೆ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂಬ ರೈತರ ನಿರೀಕ್ಷೆಗೆ ‘ಬರ’ ತಣ್ಣಿರೆರಚಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆ ತೀವ್ರ ಪ್ರಮಾಣದಲ್ಲಿ ಇರುವುದರಿಂದ ಅಷ್ಟಾಗಿ ಫಸಲು ದೊರೆತಿಲ್ಲ. ಇಳುವರಿ ಕಡಿಮೆ ಇರುವ ಕಾರಣ ಉತ್ತರ ದರ ಸಿಗಬಹುದೆಂಬ ಅಪಾರ ನಿರೀಕ್ಷೆ ಇತ್ತು. ಮಾರುಕಟ್ಟೆಯಲ್ಲಿ ದರ ಏರಿಳಿತವಾಗುತ್ತಿದ್ದರೂ, ಉತ್ತರ ಆದಾಯ ಸಿಗದಾಗಿದೆ ಎಂಬುದು ರೈತರ ಬೇಸರದ ನುಡಿ.
‘ಮುಂಡರಗಿ ತಾಲ್ಲೂಕಿನ ಕದಂಪುರದಲ್ಲಿನ 2.5 ಎಕರೆಯಲ್ಲಿ ಟೊಮೊಟೊ, ಬದನೆಕಾಯಿ, ಮೆಣಸಿನಕಾಯಿ, ಹೀರೇಕಾಯಿ, ಸೌತೆಕಾಯಿ, ಚವಳಿಕಾಯಿ ಬೆಳೆದಿರುವೆ. ಕಳೆದ ವರ್ಷ ಈ ಸಮಯಕ್ಕೆ ಪ್ರತಿದಿನ 25 ಕೆ.ಜಿಯ 20 ಟ್ರೇಗಳಷ್ಟು ಟೊಮೊಟೊ ಮಾರಾಟ ಮಾಡಿದ್ದೆ. ಈಗ ಒಂದು ವಾರಕ್ಕೆ 6ರಿಂದ 8 ಟ್ರೇಗಳಷ್ಟು ಟೊಮೊಟೊ ಸಿಗುವುದೂ ಕಷ್ಟವಾಗಿದೆ. ಬಹುತೇಕ ಎಲ್ಲ ಬೆಳೆಗಳ ಸ್ಥಿತಿ ಹೀಗೆಯೇ ಇದೆ’ ಎಂದು ತರಕಾರಿ ಬೆಳೆಗಾರ ಈಶ್ವರ ಗದುಗಿನ ತಿಳಿಸಿದರು.
‘ಮಳೆ ಪ್ರಮಾಣ ಕುಸಿದಿದ್ದರಿಂದ ಕೊಳವೆಬಾಯಿಯಲ್ಲಿ 1.5 ಇಂಚಿನಷ್ಟು ಮಾತ್ರ ನೀರು ಸಿಗುತ್ತಿದೆ. 4ರಿಂದ 5 ತಾಸು ಅಷ್ಟೇ ನೀರು ಹಾಯಿಸಿದ್ದೇನೆ. ಈ ಮೊದಲು ಒಂದೂವರೆಗೆ ತಿಂಗಳವರೆಗೆ ಬೆಳೆ ಕಟಾವು ನಡೆಯುತ್ತಿತ್ತು. ಈ ಬಾರಿ 20 ದಿನದಲ್ಲೇ ಎಲ್ಲ ಬೆಳೆಗಳ ಕಟಾವು ಮುಗಿದಿದೆ. ಒಂದು ಟ್ರೇ ಟೊಮೊಟೊವನ್ನು ₹150ಕ್ಕೆ ಮಾರಾಟ ಮಾಡಿದ್ದೇನೆ’ ಎಂದು ವಿವರಿಸಿದರು.
ದಲ್ಲಾಳಿಗಳ ಹಾವಳಿ: ಅಲ್ಪ ಪ್ರಮಾಣದಲ್ಲಿ ದೊರೆತ ಬೆಳೆಯನ್ನು ಎಪಿಎಂಸಿಗಳಲ್ಲಿ ದಲ್ಲಾಳಿಗಳು ಕಡಿಮೆ ಮೊತ್ತಕ್ಕೆ ಖರೀದಿಸಿ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ತಾವು ಲಾಭ ಗಳಿಸಿ, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬೇರೆ ಕಡೆಯಿಂದ ಬೆಳೆ ತರಿಸುತ್ತಿರುವುದರಿಂದ ಜಿಲ್ಲೆಯ ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ಸಿಕ್ಕಷ್ಟು ಹಣಕ್ಕೆ ತರಕಾರಿ ಮಾರಾಟ ಮಾಡುವುದು ಅನಿವಾರ್ಯವೂ ಆಗಿದೆ ಎಂದು ರೈತರು ಅಸಹಾಯಕತೆಯಿಂದ ನುಡಿದರು.
ವ್ಯಾಪಾರಿಗಳಿಗೂ ದೊರೆಯದ ಲಾಭ
‘ಎಪಿಎಂಸಿಗಳಲ್ಲಿ ದಲ್ಲಾಳಿಗಳು ಹೇಳಿದಷ್ಟು ಮೊತ್ತಕ್ಕೆ ತರಕಾರಿ ಖರೀದಿಸಿ ತರುತ್ತೇವೆ. ಈ ಮೊದಲು ಶ್ರಾವಣ ಮಾಸದಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಈ ಬಾರಿ ಬರ ಪರಿಸ್ಥಿತಿ ಕಾರಣ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಗ್ರಾಹಕರು ಖರೀದಿಸುವ ಪ್ರಮಾಣವೂ ಕಡಿಮೆಯಾಗಿದೆ. ದಿನಕ್ಕೆ ಅಂದಾಜು ₹12,000ದಷ್ಟು ವ್ಯಾಪಾರ ನಡೆಯುತ್ತಿತ್ತು. ಈಗ ಅರ್ಧದಷ್ಟು ಕಡಿಮೆಯಾಗಿದೆ. ಖರೀದಿ, ಅಂಗಡಿ ಖರ್ಚು ಕಳೆದರೆ ನಮಗೆ ಉಳಿಯುವುದು ಅಲ್ಪ ಹಣ ಮಾತ್ರ’ ಎಂದು ಗದಗ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಇಮ್ರಾನ್ ಕದಡಿ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-23-111771232