ಸುಗಂಧರಾಜ ಹೂವಿನಿಂದ ಕೈತುಂಬ ಆದಾಯ: ಸಿಂಧಿಗೇರಿ ರೈತ ಮಹಿಳೆ ಹನುಮಕ್ಕ ಸಾಧನೆ

ಸುಗಂಧರಾಜ ಹೂವಿನಿಂದ ಕೈತುಂಬ ಆದಾಯ: ಸಿಂಧಿಗೇರಿ ರೈತ ಮಹಿಳೆ ಹನುಮಕ್ಕ ಸಾಧನೆ

ಸುಗಂಧರಾಜ ಹೂವಿನಿಂದ ಕೈತುಂಬ ಆದಾಯ: ಸಿಂಧಿಗೇರಿ ರೈತ ಮಹಿಳೆ ಹನುಮಕ್ಕ ಸಾಧನೆ

ಕುರುಗೋಡು: ‘ಭೂಮಿತಾಯಿಯನ್ನು ನಂಬಿ ಸೇವೆ ಮಾಡಿದರೆ ಕೈಬಿಡುವುದಿಲ್ಲ. ಶ್ರದ್ಧೆ, ತಾಳ್ಮೆ, ನಿರಂತರ ಪರಿಶ್ರಮದಿಂದ ಕೃಷಿಯಲ್ಲಿ ಖುಷಿ ಕಾಣಬಹುದು’ ಎನ್ನುತ್ತಾರೆ ತಾಲ್ಲೂಕಿನ ಸಿಂಧಿಗೇರಿ ಗ್ರಾಮದ ರೈತ ಮಹಿಳೆ ಗೊಂಬೇರು ಹನುಮಕ್ಕ.

ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮೊದಲು ಮೆಣಸಿನಕಾಯಿ ಬೆಳೆಯುತ್ತಿದ್ದರು. ರೋಗಬಾಧೆ, ಇಳುವರಿ ಕುಂಠಿತ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ನಷ್ಟ ಅನುಭವಿಸಿದ್ದರು. ನಂತರ ಅನುಭವಿ ಕೃಷಿಕರ ಮಾರ್ಗದರ್ಶನದಿಂದ ಸರ್ವಋತುವಿನಲ್ಲೂ ಬೇಡಿಕೆ ಇರುವ ಸುಗಂಧರಾಜ ಹೂ ಬೆಳೆದು ಕೈತುಂಬ ಆದಾಯ ಗಳಿಸುತ್ತಿದ್ದಾರೆ.

ಮೆಣಸಿನಕಾಯಿ, ಅಂಜೂರ, ದಾಳಿಂಬೆ ಹಣ್ಣಿನ ತೋಟಗಳ ಮಧ್ಯೆ ಕುರುಗೋಡು–ಸಿಂಧಿಗೇರಿ ರಸ್ತೆಯಲ್ಲಿರುವ ಗೊಂಬೇರು ಹನುಮಕ್ಕ ಅವರ ಹೂವಿನ ತೋಟ ಭೀಕರ ಬರಗಾಲದ ನಡುವೆಯೂ ದಾರಿಹೋಕರ ಗಮನ ಸೆಳೆಯುತ್ತಿದೆ.

ಸಿಂಧಿಗೇರಿ ಗ್ರಾಮದ ಪ್ರಗತಿಪರ ರೈತ ರಾಜು ಅವರ ಸುಂದರವಾಗಿ ಅರಳಿರುವ ಹೂವಿನ ತೋಟದಿಂದ ಪ್ರೇರಣೆ ಪಡೆದ ಗೊಂಬೇರು ಹನುಮಕ್ಕ ಹೂವಿನ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಕಳೆದ ವರ್ಷ ಆಂಧ್ರಪ್ರದೇಶದ ಕಲ್ಯಾಣದುರ್ಗದಿಂದ ಎರಡು ಎಕರೆಗೆ ಬೇಕಾಗುವಷ್ಟು ಸುಗಂಧರಾಜ ಗಿಡದ ಗಡ್ಡೆಗಳನ್ನು ₹60 ಸಾವಿರಕ್ಕೆ ತಂದು ನಾಟಿ ಮಾಡಿದ್ದರು. ₹40 ಸಾವಿರವನ್ನು ತೋಟದ ನಿರ್ವಹಣೆಗೆ ವೆಚ್ಚ ಮಾಡಿದ್ದಾರೆ. ಈಗ ಗಿಡಗಳು ಉತ್ತಮವಾಗಿ ಬೆಳೆದು ಹೂ ಮಾರಾಟಕ್ಕೆ ಸಿದ್ಧವಾಗಿವೆ.

ಸುಗಂಧರಾಜ ಗಿಡದ ಗಡ್ಡೆಗಳನ್ನು ಒಮ್ಮೆ ನಾಟಿ ಮಾಡಿದರೆ ಎರಡು ವರ್ಷ ಇಳುವರಿ ದೊರೆಯುತ್ತದೆ. ಒಮ್ಮೆ ಗಡ್ಡೆ ಖರೀದಿಸಿ ನಾಟಿ ಮಾಡಿದ ನಂತರ ಹೆಚ್ಚಿನ ವೆಚ್ಚ ಬರುವುದಿಲ್ಲ. ಕಡಿಮೆ ವೆಚ್ಚದಲ್ಲಿಯೇ ಉತ್ತಮವಾಗಿ ನಿರ್ವಹಣೆ ಮಾಡಬಹುದು.

ನಿತ್ಯ 15ರಿಂದ 20 ಕೆ.ಜಿ. ಸುಗಂಧರಾಜ ಹೂ ಇಳುವರಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಳುವರಿ ಹೆಚ್ಚಾಗಲಿದೆ. ಕೆ.ಜಿ.ಗೆ ₹60ರಿಂದ ₹80ರವರೆಗೆ ಮಾರುಕಟ್ಟೆಯಲ್ಲಿ ಬೆಲೆ ದೊರೆಯುತ್ತಿದೆ. ಹೂ ಮಾರಾಟಗಾರರು ತೋಟಕ್ಕೆ ಬಂದು ಹೂ ಖರೀದಿಸುವುದರಿಂದ ಮಾರುಕಟ್ಟೆ ಸಮಸ್ಯೆ ಇಲ್ಲ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಬೆಲೆ ದುಪ್ಪಟ್ಟಾಗುತ್ತದೆ. ನಿರ್ವಹಣಾ ವೆಚ್ಚ ತೆಗೆದು ವಾರ್ಷಿಕ ₹10 ಲಕ್ಷದವರೆಗೆ ಗಳಿಸಬಹುದು ಎನ್ನುತ್ತಾರೆ.

ಕೃಷಿ ಜತೆಗೆ ಕೋಳಿ ಸಾಕಣೆ

ಹೂವಿನ ಕೃಷಿಯ ಜತೆಗೆ 300 ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ನಾಟಿ ಕೋಳಿ ಹಾಗೂ ಮೊಟ್ಟೆ ಮಾರಾಟದಿಂದಲೂ ಲಾಭ ಗಳಿಸುತ್ತಿದ್ದಾರೆ. ಕಳೆದ ವರ್ಷ ರಾಮನಗರದಿಂದ 22 ಬಿಳಿ ಹಂದಿ ಮರಿಗಳನ್ನು ತಂದು ಸಾಕಣೆ ಮಾಡಿ, 100 ಕೆ.ಜಿ.ವರೆಗೆ ಬೆಳೆಸಿ ಬೆಂಗಳೂರು, ಹಾಸನ, ಮೂಡಿಗೆರೆ, ಚಿಕ್ಕಮಗಳೂರಿನಿಂದ ಬರುವ ವರ್ತಕರಿಗೆ ಕೆ.ಜಿ.ಗೆ ₹250ರಂತೆ ಮಾರಾಟ ಮಾಡಿ ಅಧಿಕ ಲಾಭ ಪಡೆಯುತ್ತಿದ್ದಾರೆ.

ಹಂದಿ ಗೊಬ್ಬರವನ್ನು ಸಂಗ್ರಹಿಸಿ ಹೂವಿನ ಗಿಡಗಳಿಗೆ ಗೊಬ್ಬರವಾಗಿ ಬಳಸುವುದರಿಂದ ರೋಗ ಹಾಗೂ ಕೀಟಬಾಧೆ ಕಡಿಮೆಯಾಗಿ, ಅಧಿಕ ಇಳುವರಿ ಬರುತ್ತದೆ ಎನ್ನುತ್ತಾರೆ ರೈತ ಮಹಿಳೆ ಗೊಂಬೇರು ಹನುಮಕ್ಕ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ