
ರಬಕವಿ ಬನಹಟ್ಟಿ| ಬಂಡಿಗಣಿ ಮಠದ ಆಸ್ತಿ ಸಮಾಜದ್ದು: ಭಕ್ತರ ಸ್ಪಷ್ಟನೆ
ರಬಕವಿ ಬನಹಟ್ಟಿ: ‘ತಾಲ್ಲೂಕಿನ ಬಸವಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಶರಣರ ಸಾವು ವಯೋ ಸಹಜವಾಗಿದ್ದು, ಸ್ವಾಮೀಜಿಯವರ ಪುತ್ರರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಮಠದ ಭಕ್ತ ದಾನೇಶ ಜಕ್ಕನ್ನವರ ತಿಳಿಸಿದರು.
ಅವರು ಬುಧವಾರ ರಬಕವಿಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದರು.
‘ಸ್ವಾಮೀಜಿ ನಿಧನರಾಗಿ ಒಂಬತ್ತು ತಿಂಗಳುಗಳು ಕಳೆದಿವೆ. ಈಗಲೂ ಮಠದ ಭಕ್ತರು ಧಾರ್ಮಿಕ ಆಚರಣೆಗಳನ್ನು ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಭಕ್ತರ ಸಹಕಾರದೊಂದಿಗೆ ಮಠದ ಎಲ್ಲ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಸದ್ಯ ಮಠವು ಕಮಿಟಿ ಆಶ್ರಯದಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.
ಸ್ವಾಮೀಜಿ ನಿಧನರಾಗುವುದಕ್ಕಿಂತ ಮುಂಚಿತವಾಗಿ ಸಮಾಜದ ಹಿತದೃಷ್ಠಿಯಿಂದ ತಮ್ಮ ಆಸ್ತಿಯನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಮೃತ್ಯು ಪತ್ರ ಮಾಡಿದ್ದರು. ಇದೀಗ ಸ್ವಾಮೀಜಿಯವರ ಪುತ್ರರು ಹಾಗೂ ಭಕ್ತರ ನಡುವೆ ಆಸ್ತಿ ವಿಚಾರವಾಗಿ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ನಡೆಯುತ್ತಿರುವುದು ಭಕ್ತರಲ್ಲಿ ಅಸಮಾಧಾನ ಮಾಡಿದೆ. 25 ವರ್ಷಗಳ ಹಿಂದೆಯೇ ತಮ್ಮ ಪುತ್ರರಿಗೆ ಆಸ್ತಿ ಹಂಚಿಕೆಯನ್ನು ಮಾಡಿದ್ದರು. ಪರಿಸ್ಥಿತಿ ಹೀಗಿರುವಾಗ ಮತ್ತೆ ಆಸ್ತಿ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಿರುವುದು ಸರಿಯಲ್ಲ ಎಂದರು.
ಸ್ವಾಮೀಜಿಯವರ ಜೀವಿತಾವಧಿಯಲ್ಲಿ ಅವರ ಆರೋಗ್ಯ, ಯೋಗಕ್ಷೇಮ ಹಾಗೂ ಮಠದ ಕಾರ್ಯಗಳ ಕುರಿತು ಕಾಳಜಿ ತೋರದವರು ಈಗ ಶ‍್ರೀಗಳ ನಿಧನದ ನಂತರ ಆಸ್ತಿಗಾಗಿ ದಾವೆ ಮಾಡಿರುವುದು ಸರಿಯಲ್ಲ ದಾನೇಶ ಜಕ್ಕನ್ನವರ ತಿಳಿಸಿದರು. ಲವಿತ್ ಮೇತ್ರಿ, ಗಿರಮಲ್ಲಪ್ಪ ಸಾವಂತ, ಅಲ್ಲಪ್ಪ ನಾವಿ, ಕಲ್ಲಪ್ಪ ಇಟ್ನಾಳ, ಕೆಂಚಪ್ಪ ಹಳೆಮನಿ, ಪ್ರಭು ನಾವಿ ಇದ್ದರು.