
ಹಿರಿಯೂರು: ಕೂನಿಕೆರೆ ಕೆರೆಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ ಪ್ರತಿಭಟನೆ
ಹಿರಿಯೂರು: ತಾಲ್ಲೂಕಿನ ಕೂನಿಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ ನೂರಾರು ರೈತರು ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕೂನಿಕೆರೆ ಕೆರೆಯ ಪಕ್ಕದಲ್ಲಿಯೇ ಚಳ್ಳಕೆರೆ ತಾಲ್ಲೂಕಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಮಾರ್ಗ ಹಾದುಹೋಗಿದ್ದು, ಇಲ್ಲಿಂದ ದಿನಬಿಟ್ಟು ದಿನ ಕೆರೆಗೆ ನೀರು ಹರಿಸಬಹುದು. ಗ್ರಾಮದ ಪಕ್ಕದಲ್ಲಿಯೇ ವೇದಾವತಿ ನದಿ ಹರಿಯುತ್ತಿದ್ದು, ಅಲ್ಲಿಂದ ನೀರನ್ನು ಎತ್ತಿ ಕೆರೆಗೆ ತುಂಬಿಸಬಹುದು. ವಾಣಿ ವಿಲಾಸ ಅಣೆಕಟ್ಟೆಯ ನಾಲೆಯಿಂದಲೂ ನೀರು ತುಂಬಿಸಬಹುದು. ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಿಂದಲೂ ನೀರು ಹರಿಸಬಹುದಾಗಿದೆ ಎಂದು ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಸಲಹೆ ನೀಡಿದರು.
ಈ ನಾಲ್ಕು ಆಯ್ಕೆಗಳ ಪೈಕಿ ಸುಲಭ ಹಾಗೂ ಕಾರ್ಯಸಾಧುವಾದ ಮಾರ್ಗದಿಂದ ನೀರು ಹರಿಸಿದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದುನಿಂತಿರುವ ತೆಂಗು, ಅಡಿಕೆ, ಬಾಳೆ, ದಾಳಿಂಬೆ ಬೆಳೆಗಳು ಉಳಿಯುತ್ತವೆ. ಇಲ್ಲವಾದಲ್ಲಿ ರೈತರು ಗುಳೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಎಲ್ಲ ಕೆರೆಗೂ ನೀರು ತುಂಬಿಸಬೇಕು. ರಾಜಕೀಯ ಪ್ರಭಾವಿಗಳು ನೀರನ್ನು ಲಪಟಾಯಿಸಲು ಅವಕಾಶ ಕೊಡಬಾರದು. ಗೌನಹಳ್ಳಿ, ಆದಿರಾಳು, ಹುಲಿತೊಟ್ಲು, ತವಂದಿ, ಸೂರಗೊಂಡನಹಳ್ಳಿ, ಐಮಂಗಲ, ಮರಡಿದೇವಿಗೆರೆ, ತಾಳವಟ್ಟಿ, ಬಸಪ್ಪನಮಾಳಿಗೆ ಕೆರೆಗಳಿಗೆ ನೀರು ತುಂಬಿಸದೇ ಹೋದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಲಕ್ಷ್ಮಣ್ ಹೂಗಾರ್, ಆರ್. ನಾಗೇಂದ್ರನಾಯ್ಕ, ಬಳಗಟ್ಟ ವೆಂಕಟೇಶ್, ಓಬಳೇಗೌಡ, ಸುಖರ್ ಸಾಬ್, ಮುರ್ತುಜಾ, ತಿಮ್ಮಣ್ಣಗೌಡ, ತಿಮ್ಮರಾಯ, ಪಾಂಡುರಂಗ, ಮುಕುಂದ, ಕರಿಯಪ್ಪ ಪಾಲ್ಗೊಂಡಿದ್ದರು.