ಚಿಕ್ಕಬಳ್ಳಾಪುರ | ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಕ್ರಮಕ್ಕೆ ಡಿ.ಸಿ ಪ್ರಸ್ತಾವ

ಚಿಕ್ಕಬಳ್ಳಾಪುರ | ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಕ್ರಮಕ್ಕೆ ಡಿ.ಸಿ ಪ್ರಸ್ತಾವ

ಚಿಕ್ಕಬಳ್ಳಾಪುರ | ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಕ್ರಮಕ್ಕೆ ಡಿ.ಸಿ ಪ್ರಸ್ತಾವ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ಅಣಕನೂರು ಗ್ರಾಮದ ಸರ್ವೆ ಸಂಖ್ಯೆ 109ರಲ್ಲಿನ 97,130.30 ಚದುರ ಮೀಟರ್ ಸರ್ಕಾರಿ (ಸುಮಾರು 24 ಎಕರೆ) ಜಾಗಕ್ಕೆ ನಗರಸಭೆಯು ಖಾಸಗಿ ಅವರಿಗೆ ಇ–ಖಾತೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರಸಭೆಯ ನಾಲ್ಕು ಮಂದಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.

ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಕರವಸೂಲಿಗಾರ ಟಿ.ಎನ್.ವೆಂಕಟೇಶ್, ಕಂದಾಯ ನಿರೀಕ್ಷಕ ವಿ.ಆರ್.ವೆಂಕಟೇಶ್, ಕಂದಾಯ ಅಧಿಕಾರಿ ನಟರಾಜ್ (ನಿವೃತ್ತ) ನಗರಸಭೆ ವ್ಯಾಪ್ತಿಯಲ್ಲಿ ಇಲ್ಲದ ಕಂದಾಯ ಇಲಾಖೆಯ ಸರ್ಕಾರಿ ಸರ್ವೆ ನಂಬರ್ ಆಸ್ತಿಗೆ ಇ–ಸ್ವತ್ತು ನೀಡಲು ಸಹಕರಿಸಿದ್ದು ಕಂಡು ಬಂದಿದೆ. ಇವರ ವಿರುದ್ಧ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಲು ಪ್ರಯತ್ನಿಸಿರುವವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ ಎಂದಿರುವ ಜಿಲ್ಲಾಧಿಕಾರಿ, ತನಿಖಾ ವರದಿ ಮತ್ತು ದಾಖಲೆಗಳನ್ನೂ ಪ್ರಸ್ತಾವದೊಂದಿಗೆ ಅಡಕಗೊಳಿಸಿದ್ದಾರೆ.

ನಗರಸಭೆ ಆಸ್ತಿ ಸಂಖ್ಯೆ 820/755ರ ಅಳತೆ 97,130.30 ಚದುರ ಮೀಟರ್ ಸರ್ಕಾರಿ ಜಮೀನು ನಗರಸಭೆ ವ್ಯಾಪ್ತಿಗೆ ಒಳಪಡದಿದ್ದರೂ ಚಿಕ್ಕಬಳ್ಳಾಪುರ ನಗರಸಭೆಯಿಂದ ಇ–ಆಸ್ತಿ ನೀಡಲಾಗಿತ್ತು. ಈ ಪ್ರಕರಣದ ಕುರಿತು ಭೂ ಕಬಳಿಕೆ, ಕರ್ತವ್ಯ ಲೋಪ ಹಾಗೂ ಇತರೆ ಗಂಭೀರ ಸ್ವರೂಪದ ನ್ಯೂನತೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಅಧ್ಯಕ್ಷತೆಯಲ್ಲಿ ತ್ರಿಸದಸ್ಯರ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದ್ದರು.

ಸಮಿತಿಯು ನಗರಸಭೆಗೆ ಭೇಟಿ ನೀಡಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಸೋಮವಾರ ಮಧ್ಯಂತರ ವರದಿ ಸಲ್ಲಿಸಿದೆ. ಈ ಮಧ್ಯಂತರ ವರದಿಯ ಪ್ರತಿ ಮತ್ತು ಜಿಲ್ಲಾಧಿಕಾರಿ ಅವರು ಪೌರಾಡಳಿತ ನಿರ್ದೇಶನಾಲಯಕ್ಕೆ ಬರೆದಿರುವ ಪತ್ರವು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಜಿಲ್ಲಾಧಿಕಾರಿ ಅವರ ವರದಿಯಲ್ಲಿ ಏನಿದೆ: ಉಪವಿಭಾಗಾಧಿಕಾರಿ ಅವರ ತ್ರಿಸದಸ್ಯರ ತಂಡ ನಡೆಸಿದ ತನಿಖೆಯ ವರದಿ ಆಧಾರದಲ್ಲಿ ಜಿಲ್ಲಾಧಿಕಾರಿ ಅವರು ಪೌರಾಡಳಿತ ನಿರ್ದೇಶನಾಲಯಕ್ಕೆ ಸುದೀರ್ಘವಾದ ಪ್ರಸ್ತಾವ ಸಲ್ಲಿಸಿದ್ದಾರೆ. ಆ ಪ್ರಸ್ತಾವದಲ್ಲಿ ಇ–ಖಾತೆಗೆ ಸಂಬಂಧಿಸಿದಂತೆ ನಡೆದಿರುವ ಲೋಪಗಳು ಎದ್ದು ತೋರುತ್ತವೆ.

ಕಂದಾಯ ಇಲಾಖೆ ದಾಖಲೆಗಳಂತೆ ಈ ಆಸ್ತಿಯು ಅಣಕನೂರು ಗ್ರಾಮದ ಸರ್ವೆ ನಂ 109ರಲ್ಲಿ 170.20 ಎಕರೆ ಬಿ–ಖರಾಬಿನಲ್ಲಿ ಇರುತ್ತದೆ. ಸದರಿ ಸರ್ವೆ ನಂಬರ್ ಮರು ಸರ್ವೆ ಟಿಪ್ಪಣಿಯ ಖರ್ದಾ ಕಾಲಂನಲ್ಲಿ ಖರಾಬ್ ನೀರು ಮುಳುಗಡೆ ಎಂಬುದಾಗಿ ನಮೂದಾಗಿದೆ. ಪ್ರಸ್ತುತ ಪಹಣಿಯಂತೆ ಸರ್ಕಾರಿ ಖರಾಬ್ 100.20 ಎಕರೆ ಮತ್ತು ನೀರು ಮುಳುಗಡೆ ಪ್ರದೇಶ 70 ಎಕರೆ ಎಂಬುದಾಗಿ ಪಹಣಿಯ ಕಲಂ 9ರಲ್ಲಿ ನಮೂದಾಗಿದೆ. ನಗರಸಭೆಯಲ್ಲಿ ಲಭ್ಯ ದಾಖಲೆಗಳನ್ನು ಪರಿಶೀಲಿಸಿದಾಗ ಸರ್ವೆ ನಂ 109 ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಖರಾಬು ಜಮೀನಾಗಿರುತ್ತದೆ. ಈ ಕಂದಾಯ ಜಮೀನಿಗೆ ನಗರಸಭೆ ವ್ಯಾಪ್ತಿ ಇಲ್ಲದಿದ್ದರೂ ನಕಲಿ ದಾಖಲೆಗಳನ್ನು ಪಡೆದು 97,130.30 ಚದುರ ಮೀಟರ್‌ಗಳಿಗೆ ನಮೂನೆ 3 ಸೃಜಿಸಿರುವುದು ದೃಢಪಟ್ಟಿದೆ. ನಗರಸಭೆ ದಾಖಲೆಗಳಲ್ಲಿಯೂ ಸಾರ್ವಜನಿಕ ಆಸ್ತಿ ಎಂದೇ ನಮೂದಾಗಿದೆ.

ಅಲ್ಲದೆ ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯ ಸರ್ವೆ ನಂಬರ್ ಆಸ್ತಿಯನ್ನು ಶಿಡ್ಲಘಟ್ಟ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2026ರ ಜೂನ್ 23ರಂದು ಚಂದ್ರಮ್ಮ ಅವರಿಂದ ವಿ.ಭರಣಿ ಅವರಿಗೆ ಹಕ್ಕು ಬಿಡುಗಡೆ ಪತ್ರ ಮಾಡಿರುವುದು ದಾಖಲೆಗಳಿಂದ ಕಂಡು ಬಂದಿದೆ. ಯಾವುದೇ ಸಮರ್ಪಕ ದಾಖಲೆಗಳನ್ನು ಪಡೆಯದೆ ವಿ.ಭರಣಿ ಅವರಿಗೆ ನಮೂನೆ 3ರ ಮೂಲಕ ಹಕ್ಕುಬಿಡುಗಡೆ ಪತ್ರ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಸ್ತಾವದಲ್ಲಿ ಉಲ್ಲೇಖಿಸಿದ್ದಾರೆ.

‘ನಕಲಿ ದಾಖಲೆ ಸೃಷ್ಟಿ; ಗಂಭೀರ ಕ್ರಮ’

‘ಯಾರು ಯಾರು ನಕಲಿ ದಾಖಲೆ ಸೃಷ್ಟಿಗೆ ಸಹಕರಿಸಿದ್ದಾರೆ ಎನ್ನುವುದು ಪತ್ತೆಯಾಗಿದೆ. ಎಲ್ಲರ ಮೇಲೂ ಕ್ರಮವಹಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಎಲ್ಲ ದಾಖಲೆಗಳ್ನು ಸಹ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಸಭೆಗೆ ಸಂಬಂಧವೇ ಇಲ್ಲದಿದ್ದರೂ ಸರ್ಕಾರಕ್ಕೆ ಸೇರುವ ಕಂದಾಯ ಭೂಮಿಗೆ ಖಾತೆ ಮಾಡಿದ್ದಾರೆ. ಇ–ಖಾತೆಗೆ ಬೆರಳಚ್ಚು ನೀಡಿರುವುದು ಸೇರಿದಂತೆ ಸಮಗ್ರವಾಗಿ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸಾರ್ವಜನಿಕ ಕೆರೆ ಅಂಗಳಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಮ್ಮದು ಎನ್ನುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

ಶಾಶ್ವತವಾಗಿ ಈ ಜಮೀನು ಕೆರೆ ಅಂಗಳ ಎಂದು ಉಳಿಸಬೇಕಾಗಿದೆ. ಇದಕ್ಕೆ ಯಾವ ಕ್ರಮವಹಿಸಬೇಕೊ ಆ ಕ್ರಮಗಳನ್ನು ಕೈಗೊಳ್ಳುತ್ತೇವೆ. ನೇಮಕಾತಿ ಪ್ರಾಧಿಕಾರವೇ ಶಿಸ್ತು ಪ್ರಾಧಿಕಾರವಾಗಿದೆ. ಆದ ಕಾರಣ ಅವರಿಗೆ ಶಿಸ್ತುಕ್ರಮಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಕಣ್ಣು ತಪ್ಪಿ ಖಾತೆ ಆಗಿದೆ ಎನ್ನುತ್ತಿದ್ದಾರೆ. ಆ ಖಾತೆ ರದ್ದುಗೊಳಿಸುವಂತೆಯೂ ಪ್ರಾದೇಶಿಕ ಆಯುಕ್ತರಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದರು.

‍‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ನಲ್ಲಿ ‘ಸರ್ಕಾರಿ ಜಾಗ ಖಾಸಗಿಯವರಿಗೆ ಇ–ಖಾತೆ’ ಎಂದು ಸೆ.2ರಂದು ವರದಿ ಪ್ರಕಟವಾಗಿತ್ತು. ಮರು ದಿನವೇ ಸೆ.3ರಂದು ಜಿಲ್ಲಾಧಿಕಾರಿ ಜಿ.ಪ್ರಭು ತನಿಖೆಗೆ ತಂಡ ರಚಿಸಿದರು.

‘ಅಕ್ರಮ ಎಸಗಿರುವವರ ವಿರುದ್ಧ ಮುಲಾಜಿಲ್ಲದೆ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದ ಜಿಲ್ಲಾಧಿಕಾರಿ 24 ಗಂಟೆಗಳ ಒಳಗೆ ವರದಿ ನೀಡುವಂತೆ ತನಿಖಾ ತಂಡಕ್ಕೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಅವರ ವೇಗದ ಕ್ರಮಗಳು ಚಿಕ್ಕಬಳ್ಳಾಪುರ ನಾಗರಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ತನಿಖಾ ವರದಿಯಲ್ಲಿ ಅಕ್ರಮ ಬಹಿರಂಗ

ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ನೇತೃತ್ವದ ತನಿಖಾ ತಂಡ ತಂಡ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಸರ್ವೆ ನಂ 109ರಲ್ಲಿ ನಡೆದಿರುವ ಇ–ಖಾತೆ ಅಕ್ರಮದ ಬಗ್ಗೆ ವಿಸ್ತಾರವಾಗಿ ಮಾಹಿತಿ ದಾಖಲಿಸಲಾಗಿದೆ. ಗೂಗಲ್ ಸ್ಯಾಟಲೈಟ್ ನಕ್ಷೆಯನ್ನೂ ತನಿಖಾ ತಂಡ ಪರಿಶೀಲಿಸಿದೆ.

ಆಸ್ತಿ ಸಂಖ್ಯೆ 820/755ಕ್ಕೆ ಸಂಬಂಧಿಸಿದಂತೆ ನಗರಸಭೆಯಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಈ ಆಸ್ತಿಯ ಅಳತೆ ವಿವರಗಳು ದಾಖಲೆಗಳಲ್ಲಿ ನಮೂದಾಗಿಲ್ಲ. ಆಸ್ತಿಯ ವಿವರಗಳನ್ನು ಹೊಡೆದು ಹಾಕಿರುವುದು ಕಂಡು ಬಂದಿದೆ.

ಪ್ರಸ್ತಾಪಿತ ಸರ್ವೆ ನಂ 109ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಭರಣಿ 2025ರ ನ.13ರಂದು ಅರ್ಜಿ ನೀಡಿ ‘ಇ–ಆಸ್ತಿ’ ನೀಡಲು ಕೋರಿದ್ದಾರೆ. ಇವರು 2025–26ರಲ್ಲಿ ₹ 9,9,757 ಮತ್ತು 2026–27ರಲ್ಲಿ ₹ 8,24,087 ತೆರಿಗೆ ಪಾವತಿಸಿದ್ದಾರೆ. ಈ ಮೊತ್ತ ನಗರಸಭೆಯ ಬ್ಯಾಂಕ್ ಖಾತೆಗೆ ಜಮೆ ಆಗಿದೆ.

ಅರ್ಜಿಯು ಕರವಸೂಲಿಗಾರ, ಕಂದಾಯ ಪರಿವೀಕ್ಷಕರು, ಕಂದಾಯ ಅಧಿಕಾರಿ, ಪೌರಾಯುಕ್ತರ ಲಾಗಿನ್‌ಗಳ ಮೂಲಕ 2026ರ ಮಾರ್ಚ್ 28ರಂದು ಅನುಮೋದನೆ ಗೊಂಡಿದೆ. ಏಪ್ರಿಲ್ 13ರಂದು ಇ–ಖಾತೆ ಸೃಜಿಸಿ ವಿತರಿಸಲಾಗಿದೆ.

ಕರವಸೂಲಿಗಾರ ಟಿ.ಎನ್.ವೆಂಕಟೇಶ್, ಕಂದಾಯ ನಿರೀಕ್ಷಕ ವಿ.ಆರ್.ವೆಂಕಟೇಶ್, ಕಂದಾಯ ಅಧಿಕಾರಿ ನಟರಾಜ್, ಪೌರಾಯುಕ್ತ ಮನ್ಸೂರ್ ಅಲಿ ಅವರ ಲಾಗಿನ್‌ಗಳ ಮೂಲಕ ಇ–ಆಸ್ತಿ ನಮೂನೆ –3 ಸೃಜಿಸುವ ಪ್ರಕ್ರಿಯೆ ನಡೆದಿದೆ. ಈ ನಕಲಿ ದಾಖಲೆ ಆಧರಿಸಿ ಹಕ್ಕು ಬಿಡುಗಡೆ ಪತ್ರವನ್ನು ಕಾನೂನು ನಿಯಮಬಾಹಿರವಾಗಿ ಶಿಡ್ಲಘಟ್ಟ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಇದು ಸಹ ಕಾನೂನು ಬಾಹಿರ ಎಂದು ತನಿಖಾ ತಂಡ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ