
ಚಿಕ್ಕಬಳ್ಳಾಪುರ: ಶಿಕ್ಷಣ ವಲಯದಲ್ಲಿ ‘ನೋಟಿಸ್’ ಕಾವು
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಿಗೆ ಕನಿಷ್ಠ ಮಟ್ಟದಲ್ಲಿಯೂ ಕಲಿಕೆ ಬಾರದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ 182 ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದಾರೆ. ಈ ನೋಟಿಸ್ ಚಿಕ್ಕಬಳ್ಳಾಪುರ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
‘ಎಲ್ಲ ಮಕ್ಕಳಿಗೂ ಕಲಿಸಬೇಕು. ಪ್ರತಿ ಮಗುವಿನ ಕಲಿಕೆಯೂ ನಮಗೆ ಮುಖ್ಯವಾಗುತ್ತದೆ. ನಿರ್ಲಕ್ಷ್ಯ ತೋರಿದ ಶಿಕ್ಷಕರಿಗೆ ನೋಟಿಸ್ ನೀಡಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರೆ, ‘ಸೂಕ್ತ ಮಾನದಂಡ ಅನುಸರಿದೆ ನೋಟಿಸ್ ನೀಡಲಾಗಿದೆ. ಶಿಕ್ಷಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ’ ಎಂದು ನೋಟಿಸ್ ಪಡೆದ ಶಿಕ್ಷಕರು ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕ ಪತ್ರ: ‘ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 2026–27ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ಅಕ್ಷರಗಳೇ ಬಾರದಿರುವ ಮಕ್ಕಳನ್ನು ಗುರುತಿಸಿ, ಆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ವಿಫಲತೆಗೆ ಕಾರಣರಾದ ಒಂದರಿಂದ ಆರನೇ ತರಗತಿಯವರೆಗೂ ಪಾಠ ಬೋಧಿಸಿದ ಎಲ್ಲ ಶಿಕ್ಷಕರಿಗೂ ನಿಯಮಾನುಸಾರ ನೋಟಿಸ್ ಜಾರಿ ಮಾಡಿ’ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಸೆ.4ರಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ನೋಟಿಸ್‌ಗೆ ಸಮಜಾಯಿಷಿ ಪಡೆಯಿರಿ. ಸಮಜಾಯಿಷಿ ಸಮಂಜಸವಾಗಿರದಿದ್ದರೆ ಅಂತಹವರ ಅಮಾನತ್ತಿಗೆ ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಿ, ವರದಿ ನೀಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಾಸಕರ ಈ ಲಿಖಿತ ಸೂಚನೆ ಆಧರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ 182 ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಮೂರು ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.
ನೋಟಿಸ್‌ನಲ್ಲಿ ಏನಿದೆ: ಶಾಸಕ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದ್ದಾರೆ. ಏಳನೇ ತರಗತಿ ವಿದ್ಯಾರ್ಥಿಗಳಲ್ಲಿ ಕಲಿಕೆ ಗುಣಮಟ್ಟ ಕಡಿಮೆಯಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವುದು ಕಂಡು ಬಂದಿದೆ.
ಆದ್ದರಿಂದ ಶಾಸಕರು 2026–27ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಏಳನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಗತಿ ಮತ್ತು ಕಲಿಕೆಯನ್ನು ಪರಿಶೀಲಿಸಬೇಕು. ಕಲಿಕೆಯಲ್ಲಿನ ಕನಿಷ್ಠ ಗುಣಮಟ್ಟಕ್ಕಿಂತ ಹಿಂದುಳಿದ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಬೋಧಿಸಿದ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಈ ಕಚೇರಿಯಿಂದ ಶಿಕ್ಷಣ ಸಂಯೋಜಕರು, ಬಿಆರ್‌ಪಿ, ಸಿಆರ್‌ಪಿ ಅವರನ್ನು ನಿಯೋಜಿಸಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 7ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಕಲಿಕೆಯಲ್ಲಿ ಅತೀ ಹಿಂದುಳಿದಿರುವ ವಿದ್ಯಾರ್ಥಿಗಳ ಪಟ್ಟಿ ಮತ್ತು ಆಯಾ ವಿದ್ಯಾರ್ಥಿಗಳಿಗೆ ಬೋಧನಾ ಕಾರ್ಯಗಳನ್ನು ನಿರ್ವಹಿಸುತ್ತಿರುವ ಶಿಕ್ಷಕರ ಪಟ್ಟಿಯನ್ನು ಕಚೇರಿಗೆ ಸಲ್ಲಿಸಿದ್ದಾರೆ. ತಮಗೆ ನೀಡಿರುವ ಕರ್ತವ್ಯದ ಜವಾಬ್ದಾರಿಗಳನ್ನು ನಿರ್ವಹಿಸಿಲ್ಲ. ಮೇಲಧಿಕಾರಿಗಳ ಭೇಟಿ ಸಮಯದಲ್ಲಿ ಅಗತ್ಯ ಮಾರ್ಗದರ್ಶನ ನೀಡಿದ್ದರೂ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆದ್ದರಿಂದ ಕರ್ನಾಟಕ ಕಡ್ಡಾಯ ಶಿಕ್ಷಣ ಕಾಯಿದೆ ಉಲ್ಲಂಘನೆ ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು. ನೋಟಿಸ್ ತಲುಪಿದ ಮೂರು ದಿನಗಳ ಒಳಗೆ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದೆ. ತಪ್ಪಿದಲ್ಲಿ ತಾವು ಹೇಳುವುದು ಏನೂ ಇಲ್ಲ ಎಂದು ಭಾವಿಸಿ ಏಕಪಕ್ಷೀಯವಾಗಿ ಸಂಬಂಧಿಸಿದ ಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಕರಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಶಿಕ್ಷಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ: ‘ಒಂದು ತರಗತಿಯಲ್ಲಿ 20 ಮಕ್ಕಳಿದ್ದು, ಅರ್ಧಕ್ಕಿಂತ ಹೆಚ್ಚು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅಂತಹ ಶಿಕ್ಷಕರಿಗೆ ನೋಟಿಸ್ ನೀಡಲಿ. ಆದರೆ 19 ಮಕ್ಕಳು ಅತ್ಯುತ್ತಮವಾಗಿ ಕಲಿತು ಒಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿದ್ದರೂ ನೋಟಿಸ್ ನೀಡಿದ್ದಾರೆ. ನನ್ನ ಶಾಲೆಯಲ್ಲಿ ಐದನೇ ತರಗತಿ ಓದಿದ ಬಹಳಷ್ಟು ಮಕ್ಕಳು ಅತ್ಯುನ್ನತವಾಗಿ ಕಲಿತಿದ್ದರು. ಆದರೆ ಒಬ್ಬ ವಿದ್ಯಾರ್ಥಿ ಹಿಂದುಳಿದಿದ್ದ. ಆ ವಿದ್ಯಾರ್ಥಿ ಈಗ ಬೇರೆ ಶಾಲೆಗೆ ಹೋಗಿದ್ದಾರೆ. ಆದರೆ ಈಗ ನಮಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ನಮ್ಮ ಆತ್ಮಸ್ಥೈರ್ಯ ಕುಗ್ಗಿಸಲಾಗುತ್ತಿದೆ’ ಎಂದು ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.
ನೋಟಿಸ್ ನೀಡಲು ಅನುಸರಿಸಿರುವ ಮಾನದಂಡ ವೈಜ್ಞಾನಿಕವಾಗಿಲ್ಲ. ಅಸ್ಸಾಂ, ಗುಜರಾತ್ ಸೇರಿದಂತೆ ವಲಸೆ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇಂತಹ ಮಕ್ಕಳನ್ನು ಶಾಲೆಗೆ ಕರೆ ತರುವುದೇ ದೊಡ್ಡ ಸವಾಲು ಎಂದರು.
ನೈಜವಾಗಿ ತರಗತಿಗಳಲ್ಲಿ ಬೋಧಿಸದವರಿಗೆ ನೋಟಿಸ್ ಕೊಡಲಿ, ತಪ್ಪಿಲ್ಲ. ನೋಟಿಸ್ ಪಡೆದ ಶಿಕ್ಷಕರು ಅಪ್ರಯೋಜಕರು ಎನ್ನುವ ರೀತಿ ಮಾತನಾಡಲಾಗುತ್ತಿದೆ. ಎಸ್‌ಐಆರ್, ಜನಗಣತಿ, ಕ್ಷೀರಭಾಗ್ಯ ಸೇರಿದಂತೆ ನಾನಾ ಪಠ್ಯೇತರ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದೇವೆ. ‘ನಿರಂತರ’ ಹಾಜರಾತಿಗೆ ನಿತ್ಯವೂ 30 ನಿಮಿಷದಿಂದ 1 ತಾಸು ವ್ಯಯಿಸುತ್ತಿದ್ದೇವೆ. ಒತ್ತಡದ ನಡುವೆ ಕೆಲಸ ಮಾಡುತ್ತಿದ್ದೇವೆ. ಹೀಗಿದ್ದರೂ ನೋಟಿಸ್ ನೀಡಲಾಗಿದೆ ಎಂದು ಮತ್ತೊಬ್ಬ ಶಿಕ್ಷಕರು ತಿಳಿಸಿದರು.