
ಹುಬ್ಬಳ್ಳಿ: ₹700 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೆಎಲ್‌ಇ ಆಸ್ಪತ್ರೆ ಉದ್ಘಾಟನೆ
ಹುಬ್ಬಳ್ಳಿ: ಇಲ್ಲಿನ ಗಬ್ಬೂರು ಕ್ರಾಸ್ ಬಳಿ ನಿರ್ಮಾಣವಾಗಿರುವ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೇರ್) ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ, ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಉದ್ಘಾಟಿಸಿದರು.
ನಂತರ ಜೋಶಿ ಮಾತನಾಡಿ, ‘ದೇಶದಲ್ಲಿ ಈ ಹಿಂದೆ 300 ವೈದ್ಯಕೀಯ ಕಾಲೇಜುಗಳಿದ್ದವು. ಈಗ ಅವುಗಳ ಸಂಖ್ಯೆ 751ಕ್ಕೆ ಏರಿಕೆ ಆಗಿದೆ. 22 ಏಮ್ಸ್‌ಗಳಿವೆ. ವೈದ್ಯಕೀಯ ಸೀಟುಗಳ ಸಂಖ್ಯೆ 1.31 ಲಕ್ಷ ಇವೆ. ಒಂದು ಸಾವಿರ ಜನರಿಗೆ ಒಬ್ಬ ವೈದ್ಯ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸದ್ಯದಲ್ಲೇ ಈ ಗುರಿಯನ್ನು ದೇಶ ಮೀರಲಿದೆ’ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ರಾಜ್ಯದ ಬೆಳವಣಿಗೆಯಲ್ಲಿ ಕೆಎಲ್‌ಇ ಸಂಸ್ಥೆಯ ಕೊಡುಗೆಯೂ ಇದೆ. ಸಂಸ್ಥೆಯ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ಮಾಡದ ಕೆಲಸವನ್ನು ಸಂಸ್ಥೆ ಮಾಡುತ್ತಿದೆ’ ಎಂದರು.
ಕಾಹೇರ್ ಕುಲಾಧಿಪತಿ ಪ್ರಭಾಕರ ಕೋರೆ ಮಾತನಾಡಿ, ‘22ನೇ ಶತಮಾನಕ್ಕೆ ಬೇಕಿರುವ ಎಲ್ಲ ಆಧುನಿಕ ತಂತ್ರಜ್ಞಾನ, ಸೌಲಭ್ಯಗಳನ್ನು ಇಲ್ಲಿನ ವೈದ್ಯಕೀಯ ಕಾಲೇಜು, ಆಸ್ಪತ್ರೆಯು ಒಳಗೊಂಡಿದೆ. ಉತ್ತಮ ಗುಣಮಟ್ಟದ, ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ನೀಡಬೇಕು ಎಂಬುದು ಕೆಎಲ್‌ಇ ಸಂಸ್ಥೆಯ ಉದ್ದೇಶ’ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್ ಕೋರೆ ಮತ್ತು ಕೆಎಲ್‌ಇ ಸೊಸೈಟಿ ಅಧ್ಯಕ್ಷ ಮಹಾಂತೇಶ ಕೌಜಲಗಿ ಇದ್ದರು.