
ಚಿಕ್ಕಮಗಳೂರಿನಲ್ಲಿ ಭರದಿಂದ ಸಾಗಿದೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ತಯಾರಿ
ಚಿಕ್ಕಮಗಳೂರು: ಗಣೇಶ ಹಬ್ಬ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಆದಿಶಕ್ತಿನಗರದಲ್ಲಿ ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿ ಭರದಿಂದ ಸಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮನೆ, ಕಚೇರಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಭಕ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಗಣೇಶ ಮೂರ್ತಿಗಳ ತಯಾರಕರು ಕಳೆದ ನಾಲ್ಕು ತಿಂಗಳಿನಿಂದ ಹಗಲು–ರಾತ್ರಿ ಗಣೇಶ ಮೂರ್ತಿಗಳ ತಯಾ ರಿಕೆಯಲ್ಲಿ ತೊಡಗಿದ್ದಾರೆ. ಇದೀಗ ಮೂರ್ತಿಗಳಿಗೆ ಅಂತಿಮ ಸ್ಪರ್ಶ ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಾಂಪ್ರದಾಯಿಕವಾಗಿ ತಮ್ಮ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಕುಟುಂಬಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವ ಸಂಘಟನೆಗಳು ತಮಗೆ ಬೇಕಾದ ಗಾತ್ರ, ಬಣ್ಣಗಳ, ವಿನ್ಯಾಸದಲ್ಲಿ ಗಣೇಶ ಮೂರ್ತಿಗಳ ತಯಾರು ಮಾಡಲು ಮುಂಗಡ ಕಾಯ್ದಿರಿಸಿದ್ದಾರೆ.
ನಗರದ ಹಿಂದೂ ಗಣಪತಿ, ವಿಜಯ ಪುರ, ಕೆಂಪನಹಳ್ಳಿ, ರಾಮಪುರ, ಗೌರಿಕಾಲುವೆ, ಶಂಕರಪುರ, ಮಾರ್ಕೆಟ್ ರಸ್ತೆ(ಅಂಬೇಡ್ಕರ್ ರಸ್ತೆ), ಎನ್.ಆರ್.ಪುರ, ಕೊಪ್ಪ, ಹಾಗೂ ಬೇಲೂರು ತಾಲ್ಲೂಕಿನ ಗೆಂಡೇಹಳ್ಳಿ, ತೊಳಲು ಹಾಗೂ ಬೆಂಗಳೂರು, ಹಾಸನ ಸೇರಿ ವಿವಿಧೆಡೆಯಿಂದ ಗಣೇಶ ಮೂರ್ತಿಗೆ ಬೇಡಿಕೆ ಬಂದಿವೆ. ಜೇಡಿ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಅನೇಕ ವರ್ಷಗಳಿಂದ ತಯಾರು ಮಾಡಿಕೊಡುತ್ತಿದ್ದೇವೆ’ ಎಂದು ನವೀನ್ ಆಚಾರ್ಯ ತಿಳಿಸಿದರು.
ಈ ಬಾರಿ ವಿಶೇಷವಾಗಿ ದರ್ಬಾರ್ ಗಣಪತಿ, ಪಾಂಡುರಂಗ ಗಣಪತಿ, ಅನಂತ ಪದ್ಮನಾಭ ಗಣಪತಿ, ಜೋಕಾಲಿ ಗಣಪತಿ, ಶಿವಾಜಿ ಗಣಪತಿ, ಬಾಲ ಗಣಪತಿ, ಆನೆಮುಖ ಗಣಪತಿ, ನಟರಾಜ ಗಣಪತಿ ಸೇರಿ ಎಲ್ಲಾ ಬಗೆಯ ಸಾಂಪ್ರದಾಯಕ ಗಣಪತಿಗಳನ್ನು ತಯಾರು ಮಾಡಲಾಗಿದೆ.
‘ನಾಲ್ಕು ತಿಂಗಳಿನಿಂದ ಮೂರ್ತಿ ತಯಾರಿಕೆ ಕೆಲಸ ಮಾಡಲಾಗುತ್ತಿದೆ. ಮೊದಲು ನಮ್ಮ ಚಿಕ್ಕಮಗಳೂರಿನಲ್ಲೇ ಸಿಗುವ ಜೇಡಿಮಣ್ಣು ತಂದು ನೀರಿನಲ್ಲಿ ಹದಮಾಡಿ ಹುಲ್ಲು, ತೆಂಗಿನ ನಾರು, ಬಿದಿರು ಬಳಕೆ ಮಾಡಿ ಮೂರ್ತಿ ತಯಾರು ಮಾಡಲಾಗುತ್ತದೆ. ಬಳಿಕ ಅದನ್ನು ವಿನ್ಯಾಸಗೊಳಿಸಲಾಗುತ್ತದೆ. ನಂತರ ಪರಿಸರ ಸ್ನೇಹಿ ಬಣ್ಣ ಬಳಕೆ ಮಾಡಿ ಅಂತಿಮ ಸ್ಪರ್ಶ ನೀಡಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
1 ಅಡಿಯಿಂದ 9.5 ಅಡಿ ಎತ್ತರದ ತನಕ ತರಹೇವಾರಿ ಗಣೇಶ ಮೂರ್ತಿಗಳನ್ನು ತಯಾರು ಮಾಡ ಲಾಗಿದೆ. ಗಣೇಶೋತ್ಸವ ಆಚರಣೆ ಮಾಡುವ ಸಂಘ–ಸಂಸ್ಥೆಗಳು 4 ತಿಂಗಳ ಹಿಂದೆಯೇ ಯಾವ ಮಾದರಿಯಲ್ಲಿ ಗಣೇಶ ಮೂರ್ತಿಯ ವಿನ್ಯಾಸಬೇಕೆಂದು ಫೋಟೊ ಕೊಡುತ್ತಾರೆ. ಆ ಫೋಟೊ ಆಧಾರದ ಮೇಲೆ ಮೂರ್ತಿಗಳನ್ನು ತಯಾರು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
‘ಮಣ್ಣಿನ ಮೂರ್ತಿಯನ್ನೇ ಬಳಕೆ ಮಾಡಿ’
ಪಿಒಪಿ ಗಣೇಶ ಮೂರ್ತಿ ಬದಲು ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಕೆ ಮಾಡುವುದು ಸೂಕ್ತ ಎಂದು ಗಣೇಶ ಮೂರ್ತಿ ತಯಾರಕ ನವೀನ್ ಆಚಾರ್ಯ ತಿಳಿಸಿದರು.
ಪಿಒಪಿ ನೀರಿನಲ್ಲಿ ಕರಗದೆ ಮಾಲಿನ್ಯ ಉಂಟು ಮಾಡುತ್ತದೆ. ಪುರಾಣದ ಪ್ರಕಾರ ಗಣೇಶ ಸೃಷ್ಟಿಯಾಗಿದ್ದೇ ಮಣ್ಣಿನಿಂದ ಆ ಕಾರಣಕ್ಕೆ ಮಣ್ಣಿನ ಮೂರ್ತಿಯನ್ನೇ ಬಳಕೆ ಮಾಡುವುದು ಒಳ್ಳೆಯದು. ಗಣೇಶನ ಮೂಲ ಅವತಾರದಲ್ಲೇ ಪೂಜಿಸುವುದು ಸೂಕ್ತ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-126-1396956313