
ಚಿಕ್ಕಮಗಳೂರು: ಎತ್ತಿನಭುಜ ಚಾರಣಕ್ಕೆ ಗೈಡ್‌ಗಳ ಹುಡುಕಾಟದಲ್ಲಿ ಅರಣ್ಯ ಇಲಾಖೆ
ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಎತ್ತಿನಭುಜ ಚಾರಣಕ್ಕೆ ಅರಣ್ಯ ಇಲಾಖೆ ಹೊಸ ಎಸ್‌ಒಪಿ(ಪ್ರಮಾಣೀಕೃತ ಕಾರ್ಯ ವಿಧಾನ) ಸಿದ್ಧಪಡಿಸಿದೆ. ಮಾರ್ಗದರ್ಶಕರಿಲ್ಲದೆ ಚಾರಣಿಗರ ಸಂಖ್ಯೆಯನ್ನು ದಿನಕ್ಕೆ 40ಕ್ಕೆ ಸೀಮಿತ ಮಾಡಲಾಗಿದೆ. ಸುತ್ತಮುತ್ತಲ ಹಳ್ಳಿಗಳ ಸ್ಥಳೀಯರನ್ನು ಗೈಡ್ ಹುದ್ದೆಗೆ ನೇಮಿಸಿಕೊಳ್ಳಲು ಅರಣ್ಯ ಇಲಾಖೆ ಈಗ ಆಸಕ್ತರನ್ನು ಹುಡುಕಾಡುತ್ತಿದೆ.
ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಚಾರ್ಮಾಡಿ ಗಿರಿಶ್ರೇಣಿಗಳ ತಪ್ಪಲಿನ ಎತ್ತಿನಭುಜ ಚಾರಣ ಸ್ಥಳ ಎಂದರೆ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಮಳೆಗಾಲದಲ್ಲಿ ಬೆಟ್ಟ ಗುಡ್ಡಗಳ ಹಸಿರು ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರತಿವರ್ಷ ಜನ ಇಲ್ಲಿಗೆ ಮುಗಿ ಬೀಳುತ್ತಾರೆ. ಅದರಲ್ಲೂ ಚಾರಣ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ.
ಈ ಪ್ರವಾಸಿ ತಾಣದಲ್ಲಿ ಎಲ್ಲೆಂದರಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು, ಹುಚ್ಚಾಟದ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೊಗಳು ಹರಿದಾಡಿದ್ದವು. ಆದ್ದರಿಂದ ಚಾರಣಕ್ಕೆ ಆರೇಳು ತಿಂಗಳಿಂದ ನಿರ್ಬಂಧ ಹಾಕಲಾಗಿತ್ತು. ಇದರಿಂದಾಗಿ ಮೂಡಿಗೆರೆ ತಾಲ್ಲೂಕಿನ ಹೋಂಸ್ಟೇ, ರೆಸಾರ್ಟ್ ಸೇರಿ ಸ್ಥಳೀಯ ವಹಿವಾಟಿಗೆ ಹೊಡೆತ ಬಿದ್ದಿತ್ತು.
ಚಾರಣ ಮರು ಆರಂಭಿಸಲು ಒತ್ತಡ ಹೆಚ್ಚಾದ ಬಳಿಕ ಚಾರಣ ಆರಂಭಿಸಿದೆ. ಹೊಸ ಎಸ್‌ಒಪಿ ಪ್ರಕಾರವೇ ಚಾರಣಿಗರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದೆ. ಹೊಸ ಎಸ್‌ಒಪಿ ಪ್ರಕಾರ 10 ಚಾರಣಿಗರಿಗೆ ಒಬ್ಬ ಗೈಡ್ ಇರಬೇಕು. 10ಕ್ಕೂ ಮೇಲ್ಪಟ್ಟು 11 ಜನರ ಗುಂಪಿದ್ದರೆ ಇಬ್ಬರು ಗೈಡ್‌ಗಳನ್ನು ನಿಯೋಜಿಸಬೇಕು. ಆದರೆ, ಸದ್ಯಕ್ಕೆ ಇಲ್ಲಿ ನಾಲ್ವರು ಗೈಡ್‌ಗಳು ಮಾತ್ರ ಇರುವುದರಿಂದ 40 ಜನರಿಗೆ ಚಾರಣ ಸೀಮಿತ ಮಾಡಲಾಗಿದೆ.
ಈ ಹಿಂದೆ ದಿನಕ್ಕೆ 300 ಜನರ ಚಾರಣಕ್ಕೆ ಅವಕಾಶ ಇತ್ತು. 1600 ಮೀಟರ್ ಮಾತ್ರ ಚಾರಣ ಇರುವುದರಿಂದ ಗೈಡ್‌ಗಳ ಸಂಖ್ಯೆ ಹೆಚ್ಚಿಗೆ ಬೇಕಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಆದರೆ, ಎಸ್‌ಒಪಿ ಆಧರಿಸಿಯೇ ಚಾರಣಕ್ಕೆ ಅವಕಾಶ ನೀಡಬೇಕಿರುವ ಕಾರಣ ಅನ್‌ಲೈನ್ ಬುಕ್ಕಿಂಗ್ 40 ಜನರಿಗೆ ಸೀಮಿತವಾಗಿದೆ.
ಸದ್ಯಕ್ಕೆ ಚಾರಣಿಗರ ಸಂಖ್ಯೆ ಹೆಚ್ಚಳಕ್ಕೆ ಅವಕಾಶ ಇಲ್ಲ. ಗೈಡ್‌ಗಳ ಸಂಖ್ಯೆ ಹೆಚ್ಚಾದಂತೆ ಚಾರಣಿಗರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು. ಆದ್ದರಿಂದ ಹೊಸದಾಗಿ 30 ಜನರನ್ನು ಗೈಡ್‌ಗಳನ್ನಾಗಿ ನೇಮಿಸಿಕೊಳ್ಳಲು ಅರಣ್ಯ ಇಲಾಖೆ ಆಲೋಚನೆ ನಡೆಸಿದೆ. ಸ್ಥಳೀಯರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಎತ್ತಿನಭುಜ ಚಾರಣ ಕರೆದೊಯ್ಯಲು ಸ್ಥಳೀಯ 30 ಜನರನ್ನು ಗೈಡ್‌ಗಳಾಗಿ ನೇಮಿಸಿಕೊಂಡು ತರಬೇತಿ ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಸುತ್ತಮುತ್ತಲ ಹಳ್ಳಿಯ ನಿರುದ್ಯೋಗಿಗಳು, ಈ ಪರಿಸರದ ಬಗ್ಗೆ ತಿಳಿವಳಿಕೆ ಇರುವ ಜನರನ್ನು ನೇಮಿಸಿಕೊಂಡರೆ ಅವರಿಗೂ ಉದ್ಯೋಗ ದೊರೆತಂತೆ ಆಗಲಿದೆ. ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಸ್ಥಳೀಯರು ಆಸಕ್ತಿ ತೋರಿಸದ ಕಾರಣ ದೇವರಮನೆ, ಕೊಟ್ಟಿಗೆಹಾರ ಸುತ್ತಮುತ್ತಲ ಆಸಕ್ತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆಸಕ್ತಿ ವಹಿಸಿದರೆ ಮೂರು ದಿನಗಳ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-126-1165162647