
ದಾವಣಗೆರೆ| ಸಿರಿಗೆರೆ ಶ್ರೀ ಸಭೆ; ಪ್ರತಿಭಟನೆ ಕೈ ಬಿಟ್ಟ ರೈತರು
ದಾವಣಗೆರೆ: ಸಿರಿಗೆರೆಯ ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸಮಸ್ಯೆಗೆ ಪರಿಹಾರದ ಭರವಸೆ ಸಿಕ್ಕಿದ್ದು, ಸೆಪ್ಟೆಂಬರ್ 28ರಂದು ರಾಷ್ಟ್ರೀಯ ಹೆದ್ದಾರಿ–48ರ ಹೆಬ್ಬಾಳು ಟೋಲ್ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ರೈತರು ಕೈಬಿಟ್ಟಿದ್ದಾರೆ.
ಸಿರಿಗೆರೆ ಶಾಂತಿವನದಲ್ಲಿ ಭಾನುವಾರ ಸಂಜೆ ಕೆರೆಯ ವ್ಯಾಪ್ತಿಯ ರೈತರೊಂದಿಗೆ ಹಾಗೂ ಎಂಜಿನಿಯರ್‌ಗಳೊಂದಿಗೆ ಸುದೀರ್ಘ ಚರ್ಚೆ ನಡಸಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೋಟಾರ್ ಮತ್ತು ಪೈಪ್‌ಲೈನ್‌ಗಳನ್ನು ತಕ್ಷಣ ದುರಸ್ತಿಗೊಳಿಸಿ ಕೆರೆಗಳಿಗೆ ನೀರು ಹರಿಸಲು ಸೂಚಿಸಿದರು.
ವಾಲ್‌ಗಳಿಗೆ ತೊಂದರೆಯಾಗದಂತೆ ಸಿಮೆಂಟ್ ಹಾಗೂ ಕಬ್ಬಿಣದ ಬಾಕ್ಸ್ ಮಾಡುವಂತೆ ಎಂಜಿನಿಯರ್‌ಗೆ ತಾಕೀತು ಮಾಡಿದರು.
‘ಸದ್ಯ ತಾತ್ಕಾಲಿಕ ದುರಸ್ತಿಗೆ ₹ 50 ಲಕ್ಷ ಅಗತ್ಯವಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅನುದಾನ ನೀಡಬೇಕು’ ಎಂದರು.
‘₹ 74 ಕೋಟಿ ಅನುದಾನದಲ್ಲಿ ಹೊಸ ಪೈಪ್‌ಲೈನ್ ಅಳವಡಿಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ಅಲ್ಲಿ ತನಕ ಇರುವ ವ್ಯವಸ್ಥೆಯಲ್ಲಿಯೇ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ವಾಮೀಜಿ ರೈತರಿಗೆ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆ ಕೈಬಿಡುವುದಾಗಿ ಹೇಳಿದರು’ ಎಂದು ರೈತ ಸಂಘದ ಮುಖಂಡ ವಿಶ್ವನಾಥ್ ಮಂದಲೂರು ಹಾಗೂ ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರು ತಿಳಿಸಿದ್ದಾರೆ.
ಹೆಬ್ಬಾಳು, ಹಾಲವರ್ತಿ, ಸಿದ್ದನೂರು, ಮೂಡೇನಹಳ್ಳಿ, ಗುಡಾಳು, ಕಬ್ಬೂರು ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮೊದಲು ದಾವಣಗೆರೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಅಧಿಕಾರಿಗಳೊಂದಿಗೆ ಸ್ವಾಮೀಜಿ ಸಭೆ ನಡೆಸಿದ್ದರು.