
ವಚನಾನಂದ ಶ್ರೀ ಹೊರಗಟ್ಟಲು ಕಾನೂನು ಹೋರಾಟಕ್ಕೆ ಪಂಚಮಸಾಲಿ ಸಂಘದ ನಿರ್ಣಯ
ಹಾವೇರಿ: ‘ಹರಿಹರದ ವೀರಶೈವ ಲಿಂಗಾ ಯತ ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆಯಾದರೂ ಹೊರಹೋಗದ ವಚನಾನಂದ ಸ್ವಾಮೀಜಿ ಅವರನ್ನು ಕಾನೂನು ಮೂಲಕವೇ ಹೊರಗಟ್ಟುವುದಕ್ಕಾಗಿ ಹೋರಾಟ ನಡೆಸಲು’ ಹಾಗೂ ಸಂಘದ ಪರವಾಗಿ ಕಾನೂನು ವ್ಯವಹಾರಗಳನ್ನು ಮಾಡಲು ನೂತನ ಅಧ್ಯಕ್ಷ ಶಂಕರ್ ಬಿಸರಹಳ್ಳಿ ಅವರಿಗೆ ಅಧಿಕಾರ ನೀಡಿ, ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಶನಿವಾರ ನಿರ್ಣಯ ಅಂಗೀಕರಿಸಿತು.
ನಗರದ ಹುಕ್ಕೇರಿಮಠದ ಶಿವಬಸವ ಕಲ್ಯಾಣ ಮಂಟಪದಲ್ಲಿ ನೂತನ ಅಧ್ಯಕ್ಷ ಶಂಕರ್ ಬಿಸರಹಳ್ಳಿ ನೇತೃತ್ವದಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಬಹುತೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾದರು. ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಿತ್ತು.
‘ಉಚ್ಛಾಟಿತ ಸೋಮನಗೌಡ ಪಾಟೀಲ, ಎಚ್.ಎಸ್. ಶಿವಶಂಕರ ಹಾಗೂ ಹಲವರು, ಸಮುದಾಯದ ಹೆಸರಿಗೆ ಕಳಂಕ ತರುತ್ತಿದ್ದಾರೆ. ಜನರನ್ನು ಇಬ್ಭಾಗ ಮಾಡುತ್ತಿದ್ದಾರೆ. ಇದನ್ನು ಸಮು ದಾಯದ ಜನರು ಸಹಿಸುವುದಿಲ್ಲ. ಈ ಗಂಜಿಕೇಂದ್ರದವರಿಗೆ ಸಮಾಜದ ಜನರೇ ತಕ್ಕ ಉತ್ತರ ನೀಡುತ್ತಾರೆ’ ಎಂದು ಶಂಕರ್ ಆಕ್ರೋಶ ಹೊರಹಾಕಿದರು.
ಆರು ನಿರ್ಣಯ ಅಂಗೀಕಾರ: ಸಂಘ ಮತ್ತು ಸಮುದಾಯದ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲ ವ್ಯಾಜ್ಯಗಳಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲು ಹಾಗೂ ಅಗತ್ಯವಿದ್ದಲ್ಲಿ ವಕೀಲರನ್ನು ನೇಮಿಸುವ ಅಧಿಕಾರವನ್ನು ಸಭೆಯ ಮೂಲಕ ಅಧ್ಯಕ್ಷರಿಗೆ ನೀಡಲಾಯಿತು. ಸಂಘದ ಬೈಲಾ, ಅನ್ವಯಿಸುವ ಕಾನೂನು ಹಾಗೂ ನಿರ್ಣಯದ ಮಿತಿ ಯೊಳಗೆ ಅಧಿಕಾರ ಚಲಾಯಿಸುವ ಷರತ್ತು ಸಹ ವಿಧಿಸಲಾಯಿತು.
ಪ್ರಸ್ತುತ ಆಡಳಿತ ಮಂಡಳಿಯ ನಿಗದಿತ ಅವಧಿ ಪೂರ್ಣಗೊಂಡ ನಂತರ, ಸಂಘದ ಬೈಲಾ ಪ್ರಕಾರ ಸೂಕ್ತ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ನಿರ್ಣಯಿಸಲಾಯಿತು. ಚುನಾ ವಣೆಯು ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಮತ್ತು ಎಲ್ಲ ಅರ್ಹರಿಗೆ ಸಮಾನ ಅವಕಾಶ ಕಲ್ಪಿಸುವ ರೀತಿಯಲ್ಲಿ ನಡೆಯಬೇಕೆಂದು ಸದಸ್ಯರು ಸಲಹೆ ನೀಡಿದರು.
ಸಂಘದ ಸಾರ್ವತ್ರಿಕ ಚುನಾವಣೆ ಯನ್ನು ನಿಯಮಬದ್ಧ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಅರ್ಹ ಚುನಾವಣಾಧಿಕಾರಿಯನ್ನು ನೇಮಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಯಿತು. ಹಣಕಾಸು ಮತ್ತು ಲೆಕ್ಕ ಪತ್ರಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಸದಸ್ಯರು ಸಮ್ಮತಿ ಸೂಚಿಸಿದರು.
ಸಂಘದ ಸಮಗ್ರತೆ, ಶಿಸ್ತು, ಘನತೆ ಹಾಗೂ ಆಡಳಿತಕ್ಕೆ ಧಕ್ಕೆ ಉಂಟು ಮಾಡುವ ಚಟುವಟಿಕೆ ನಡೆಸುವ ಸದಸ್ಯರ ವಿರುದ್ಧ ಸೂಕ್ತ ಪುರಾವೆಗಳ ಮೂಲಕ ಕ್ರಮ ಕೈಗೊಳ್ಳಲು ತಾತ್ವಿಕ ಒಪ್ಪಿಗೆ ನೀಡಲಾಯಿತು. ಕ್ರಮಕ್ಕೂ ಮುನ್ನ ನೋಟಿಸ್ ನೀಡಿ, ಸ್ಪಷ್ಟನೆ ಪಡೆಯುವ ಅವಕಾಶ ನೀಡಲು ತೀರ್ಮಾನಿಸಲಾಯಿತು.
ಸಂಘದ ಪರಮೇಶ ಪಟ್ಟಣಶೆಟ್ಟಿ, ಬಸವರಾಜ ದಿಂಡೂರು, ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ, ಬಿ. ನಾಗನಗೌಡ, ವಸಂತಾ ಹುಲ್ಲತ್ತಿ, ರಶ್ಮಿ ಕೆ., ಸಿದ್ದೇಶ ಬೇಗೂರ, ವಿರೂಪಾಕ್ಷಪ್ಪ ಬಳ್ಳಾರಿ, ಪಿ.ಡಿ. ಶಿರೂರ, ಶಿವಕುಮಾರ ಬಳಿಗಾರ, ಮಹೇಶ ಹಾವೇರಿ, ವೀರೇಶ ಮತ್ತೀಹಳ್ಳಿ, ಮಲ್ಲಿಕಾರ್ಜುನ ಅಂಗಡಿ, ಮಂಜನಗೌಡ ಪಾಟೀಲ, ಪ್ರಭು ವರ್ದಿ, ಸೋಮು ಎಣ್ಣಿಯವರ, ಕೊಟ್ರೇಶಪ್ಪ ವಿಜಾಪುರ, ಮಲ್ಲಿಕಾರ್ಜುನ ಹಾವೇರಿ, ರೇಣುಕಾ ಶಿರಗುಂಬಿ, ಚಂದ್ರಶೇಖರ ಬಾದಾಮಿ ಹಾಗೂ ಇತರರು ಇದ್ದರು.
ಹರಿಹರದಲ್ಲಿ ನಡೆದಿದ್ದು ಉಚ್ಚಾಟಿತರ ಸಭೆ: ದಾವಣಗೆರೆ ಜಿಲ್ಲೆಯ ಹರಿಹರ ದಲ್ಲಿ ‘ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ’ದ ಹೆಸರಿನಲ್ಲಿ ಸಮುದಾಯದ ಒಂದು ಬಣದ ಮುಖಂಡರು ವಾರ್ಷಿಕ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ, ಹಾವೇರಿ ಯಲ್ಲೂ ‘ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ’ದ ಹೆಸರಿನಲ್ಲಿ ಶನಿವಾರ ವಾರ್ಷಿಕ ಮಹಾಸಭೆ ನಡೆಯಿತು.
‘ನಮ್ಮ ಸಂಘದ ಸಭೆಯಲ್ಲಿ ಸುಮಾರು ಐದು ಸಾವಿರ ಜನರು ಶನಿವಾರದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ನಮ್ಮ ಸಂಘವೇ ಅಧಿಕೃತ ಸಂಘವಾಗಿದೆ. ಉಚ್ಚಾಟಿತರು ಕೂಡಿಕೊಂಡು ಸಮಾಜವನ್ನು ಒಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇಂಥ ಗೊಂದಲಗಳಿಗೆ ಜನರು ಕಿವಿಗೂಡಬಾರದು’ ಎಂದು ಶಂಕರ ಬಿಸರಹಳ್ಳಿ ಹೇಳಿದರು.
‘ಸ್ವಾಮೀಜಿ ಹೊರಗಟ್ಟಲು ಎಸ್.ಪಿ.ಗೆ ದೂರು’
‘ವಚನಾನಂದ ಸ್ವಾಮೀಜಿ ಅವರನ್ನು ಈಗಾಗಲೇ ಉಚ್ಛಾಟನೆ ಮಾಡಲಾಗಿದೆ. ಆದರೆ, ಅವರು ಇದುವರೆಗೂ ಪೀಠ ಬಿಟ್ಟು ಹೋಗಿಲ್ಲ. ಈಗ ವಾರ್ಷಿಕ ಸಭೆ ಮೂಲಕ ಅವರಿಗೆ ಎಚ್ಚರಿಕೆ ರವಾನಿಸುತ್ತಿದ್ದೇವೆ. ಸಮುದಾಯದ ಜನರ ಮೇಲೆ ಗೌರವಿದ್ದರೆ, ಪೀಠ ಬಿಟ್ಟು ಹೋಗಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಹಾಗೂ ಎಸ್.ಪಿ.ಗೆ ಮನವಿ ನೀಡಿ ಹೊರಗೆ ಕಳುಹಿಸಬೇಕಾಗುತ್ತದೆ. ಸಿವಿಲ್, ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಬೇಕಾಗುತ್ತದೆ’ ಎಂದು ಸಂಘದ ಕಾನೂನು ಸಲಹೆಗಾರ ಸೋಮಶೇಖರ ಕೊತಂಬರಿ ಎಚ್ಚರಿಸಿದರು.
ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮನಗೌಡ ಪಾಟೀಲ, ಎಚ್.ಎಸ್. ಶಿವಶಂಕರ್ ಹಾಗೂ ಇತರರನ್ನು ಸಂಘದಿಂದ ಉಚ್ಛಾಟಿಸಲಾಗಿದೆ. ಆದರೆ, ಅವರು ಇಲ್ಲಸಲ್ಲದ ಆರೋಪ ಮಾಡಿ ಈಗ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.
‘ಸೋಮನಗೌಡ ಪಾಟೀಲ, ಎಚ್.ಎಸ್. ಶಿವಶಂಕರ್ ಹಾಗೂ ಇತರರು, ಅಕ್ರಮ ಕೂಟ ಹಾಗೂ ಗಂಜಿ ಕೇಂದ್ರವನ್ನು ಸೃಷ್ಟಿಸಿಕೊಂಡು ವೈಯಕ್ತಿಕ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೂರ್ಖತನದ ಹೇಳಿಕೆ ನೀಡುತ್ತಿದ್ದಾರೆ. 2016–18ರಲ್ಲಿ ಸಂಘವನ್ನು ಸೂಪರ್‌ಸೀಡ್ ಮಾಡಲು ಹೊರಟಿದ್ದ ಶಿವಶಂಕರ್, ಈಗಲೂ ಅದೇ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಅವರೆಲ್ಲರನ್ನೂ ಸಂಘದಿಂದ ಈಗಾಗಲೇ ಉಚ್ಛಾಟನೆ ಮಾಡಲಾಗಿದೆ’ ಎಂದು ಅವರು ಹೇಳಿದರು.
‘ಮಠದಲ್ಲಿ ಕೆ.ಜಿ.ಗಟ್ಟಲೇ ಬೆಳ್ಳಿ ಇರುವುದಾಗಿ ಸೋಮಣ್ಣ ಬೇವಿನಮರದ ಹೇಳುತ್ತಿದ್ದಾರೆ. ಅವರ ಹೇಳಿಕೆ, ನಿರಾಧಾರ. ಯಾವುದೇ ಪುರಾವೆ ಇಲ್ಲದೇ ಮಾತನಾಡುತ್ತಿದ್ದಾರೆ. ಶಿಗ್ಗಾವಿಯಲ್ಲಿ ಮಠ ಹಾಗೂ ಸಂಘಕ್ಕೆ ಸೇರಿದ್ದ 2 ಎಕರೆ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅದನ್ನು ಅವರು ವಾಪಸು ನೀಡಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ಮೂಲಕ ವಾಪಸು ಪಡೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.