ರಾಯಚೂರು | ತಿಪ್ಪೆಗುಂಡಿಗಳಾಗಿರುವ ಖಾಲಿ ನಿವೇಶನಗಳು, ಕಸ ವಿಲೇವಾರಿ ಸವಾಲು

ರಾಯಚೂರು | ತಿಪ್ಪೆಗುಂಡಿಗಳಾಗಿರುವ ಖಾಲಿ ನಿವೇಶನಗಳು, ಕಸ ವಿಲೇವಾರಿ ಸವಾಲು

ರಾಯಚೂರು | ತಿಪ್ಪೆಗುಂಡಿಗಳಾಗಿರುವ ಖಾಲಿ ನಿವೇಶನಗಳು, ಕಸ ವಿಲೇವಾರಿ ಸವಾಲು

ರಾಯಚೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಡಿ ಸುಂದರ ನಗರವಾಗಿ ರೂಪುಗೊಳ್ಳಬೇಕಿದ್ದ ರಾಯಚೂರು ನಗರಕ್ಕೆ ಕಸ ವಿಲೇವಾರಿ ಸವಾಲಾಗಿದೆ.

ನಗರದ ಖಾಲಿ ನಿವೇಶನಗಳು ತಿಪ್ಪೆಗಳಾಗಿವೆ. ಜನರಲ್ಲಿನ ತ್ಯಾಜ್ಯ ಎಸೆಯುವ ಪ್ರವೃತ್ತಿ ಸಮಸ್ಯೆಯಾಗಿ ಪರಿಣಮಿ ಸಿದೆ. ಅನೇಕ ನಿವೇಶನಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದು, ಸುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರುವ ಆತಂಕ ಎದುರಾಗಿದೆ.

ಬಡಾವಣೆಗಳಲ್ಲಿ ಖಾಲಿ ನಿವೇಶನಗಳು ಕಂಡರೆ ಸಾಕು, ಜನರು ತ್ಯಾಜ್ಯ ಹಾಕುತ್ತಿದ್ದಾರೆ. ರಾತ್ರಿ ವೇಳೆ ಕಸ ಸುರಿದು ಹೋಗುತ್ತಿದ್ದಾರೆ. ನಿವೇಶನಗಳಲ್ಲಿ ಮುಳ್ಳು ಕಂಟಿ, ಪೊದೆಗಳು ಬೆಳೆದು ಬೀಡಾಡಿ ದನ, ಹಂದಿ ಹಾಗೂ ನಾಯಿಗಳ ಆಶ್ರಯ ತಾಣಗಳಾಗುತ್ತಿವೆ. ಕೆಲವೆಡೆ ಸಮೀಪದ ನಿವಾಸಿಗಳು ಅವುಗಳನ್ನು ಬಯಲು ಶೌಚಾಲಯಗಳಾಗಿ ಬಳಸುತ್ತಿದ್ದಾರೆ. ಇದರಿಂದ ದುರ್ನಾತ ಬೀರುವುದರ ಜತೆಗೆ ಸೊಳ್ಳೆ, ನೊಣ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಕೀಟಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿದೆ.

ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಕಟ್ಟಡ ನಿರ್ಮಿಸದೇ ಖಾಲಿ ಬಿಟ್ಟಿರುವ ನಿವೇಶನಗಳಲ್ಲಿ ಮಳೆನೀರು ಹಾಗೂ ಚರಂಡಿ ನೀರು ನಿಂತು ಕೊಳಚೆ ಗುಂಡಿಗಳಾಗುತ್ತಿವೆ. ನೀರು ಹಾಗೂ ಇತರ ತ್ಯಾಜ್ಯ ಕೊಳೆಯುವುದರಿಂದ ದುರ್ವಾಸನೆ ಹರಡುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿ ಸುತ್ತಲಿನ ನಿವಾಸಿಗಳು ಅನಾರೋಗ್ಯದ ಭೀತಿಯಲ್ಲಿ ಬದುಕುವಂತಾಗಿದೆ.

ನಿವೇಶನಗಳಲ್ಲಿ ಸುರಿಯುವ ತ್ಯಾಜ್ಯ ಗಾಳಿಗೆ ಹಾರಿ ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಸೇರುತ್ತಿದೆ. ಮಳೆ ಬಂದಾಗ ಪ್ಲಾಸ್ಟಿಕ್ ಸೇರಿದಂತೆ ಹಗುರ ತ್ಯಾಜ್ಯ ಚರಂಡಿಗೆ ಕೊಚ್ಚಿಹೋಗಿ ನೀರು ಹರಿಯುವ ಮಾರ್ಗವನ್ನು ಬಂದ್ ಮಾಡುತ್ತಿದೆ. ಪರಿಣಾಮ ಮಳೆನೀರು ಸರಾಗವಾಗಿ ಹರಿಯದೆ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಮಹಾನಗರ ಪಾಲಿಕೆ ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಿದ್ದರೂ, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಸಂಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ತೆರವುಗೊಳಿಸುವುದು ಸವಾಲಾಗಿದೆ. ಕಸದ ವಾಹನ ಸಂಚರಿಸುವ ರಸ್ತೆಬದಿ ಹಾಗೂ ಸುಲಭವಾಗಿ ತಲುಪಬಹುದಾದ ಸ್ಥಳಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಆದರೆ ಬಡಾವಣೆಗಳ ಒಳಭಾಗದಲ್ಲಿರುವ ಖಾಲಿ ನಿವೇಶನಗಳಲ್ಲಿನ ಕಸ ಹಾಗೆಯೇ ಉಳಿಯುತ್ತಿದೆ.

ಖಾಲಿ ನಿವೇಶನಗಳನ್ನು ನಿಯಮಿತವಾಗಿ ಸ್ವಚ್ಛವಾಗಿಡುವ ಜವಾಬ್ದಾರಿ ಮಾಲೀಕರ ಮೇಲೂ ಇದ್ದರೂ, ಹಲವು ಮಾಲೀಕರು ನಿವೇಶನದತ್ತ ಗಮನ ಹರಿಸದಿರುವುದು ಸಮಸ್ಯೆಗೆ ಮತ್ತಷ್ಟು ಕಾರಣವಾಗಿದೆ. ನಿವೇಶನ ಮಾಲೀಕರಿಗೆ ಸ್ವಚ್ಛತೆ ಕಾಪಾಡುವಂತೆ ಸೂಚಿಸುವುದರ ಜತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಿದೆ.

ಬದಲಾಗಬೇಕಿದೆ ಜನರ ಮನೋಭಾವ

ಕಸದ ಸಮಸ್ಯೆಗೆ ಕೇವಲ ಪಾಲಿಕೆಯನ್ನೇ ಹೊಣೆ ಮಾಡುವುದರಿಂದ ಪರಿಹಾರ ಸಾಧ್ಯವಿಲ್ಲ. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಹಾಗೂ ಒಣ ತ್ಯಾಜ್ಯವಾಗಿ ವಿಂಗಡಿಸಿ ಕಸದ ವಾಹನಗಳಿಗೆ ನೀಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರುವುದು ಹಾಗೂ ಖಾಲಿ ನಿವೇಶನಗಳನ್ನು ತಿಪ್ಪೆಗುಂಡಿಗಳನ್ನಾಗಿ ಮಾಡದಿರುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಖಾಲಿ ನಿವೇಶನಗಳ ಸಮೀಪದ ನಿವಾಸಿಗಳು ತ್ಯಾಜ್ಯ ವಿಲೇವಾರಿಗೆ ಕಸದ ವಾಹನಗಳು ತಡವಾಗಿ ಬಂದರೆ ಅಥವಾ ಬಾರದಿದ್ದರೆ ನೇರವಾಗಿ ಕಸ ತಂದು ನಿವೇಶನಗಳಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇಲ್ಲಿನ ತ್ಯಾಜ್ಯ ಗಾಳಿಗೆ ಹಾರಿ, ಮಳೆನೀರಿನ ರಭಸಕ್ಕೆ ಕೊಚ್ಚಿ ಹೋಗಿ ಚರಂಡಿಗಳು ಮುಚ್ಚಿಕೊಳ್ಳುತ್ತವೆ. ಇದರಿಂದ ಮಳೆನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತದೆ ಎಂದು ನಿವಾಸಿ ಈಶಪ್ಪ ಹೇಳುತ್ತಾರೆ.

ನಗರವನ್ನು ಸ್ವಚ್ಛವಾಗಿಡುವುದು ಕೇವಲ ಮಹಾನಗರ ಪಾಲಿಕೆಯ ಜವಾಬ್ದಾರಿಯಲ್ಲ. ಸಾರ್ವಜನಿಕರು ಕೂಡ ತಮ್ಮ ಜವಾಬ್ದಾರಿ ಅರಿತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಲ್ಲಿಸಿದಾಗ ಮಾತ್ರ ರಾಯಚೂರನ್ನು ಸ್ವಚ್ಛ ಹಾಗೂ ಆರೋಗ್ಯಕರ ನಗರವನ್ನಾಗಿ ರೂಪಿಸಲು ಸಾಧ್ಯ.

ರಾಯಚೂರು ನಗರದಲ್ಲಿ ಇತ್ತೀಚೆಗೆ ಸಾಕಷ್ಟು ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಕೆಲವರು ನಿವೇಶನ ಖರೀದಿಸಿ ಕಟ್ಟಡ ನಿರ್ಮಿಸಿದರೆ, ಇನ್ನೂ ಕೆಲವರು ಖಾಲಿ ಬಿಟ್ಟಿದ್ದಾರೆ. ನಗರದ ಒಳಭಾಗ ಮತ್ತು ಸ್ಲಂ ಭಾಗದಲ್ಲಿ ಹೆಚ್ಚಾಗಿ ತ್ಯಾಜ್ಯಸಂಗ್ರಹವಾಗುತ್ತಿದೆ. ರಾಯಚೂರಿನ ಆಜಾದ್ ನಗರ, ಇಂದಿರಾ ನಗರ, ಜವಾಹರ ನಗರ, ಆಶಾಪೂರ ರಸ್ತೆ, ನಿಜಲಿಂಗಪ್ಪ ಕಾಲೊನಿ, ಕುಲಸುಂಬಿ ಕಾಲೊನಿ, ಮಹಾಲಕ್ಷ್ಮೀ ಲೇಜೌಟ್, ಡ್ಯಾಡಿ ಕಾಲೊನಿ, ಐ.ಡಿ.ಎಂ.ಸಿ ಲೇಔಟ್, ವಾಸವಿ ನಗರ, ಹರಿಜನ ವಾಡ, ಹೊಸ ಬಡಾವಣೆಯ ವಿದ್ಯಾ ನಗರ, ಕೃಷ್ಣ ದೇವರಾಯ ಕಾಲೊನಿ, ಐಬಿ ಕಾಲೊನಿ, ಪಿವಿ ನಗರ, ಎನ್ ಜಿಒ ಕಾಲೊನಿ, ಎಂವಿಜಿ ಕಾಲೊನಿ ಸೇರಿ ಹಲವು ಬಡಾವಣೆಗಳಲ್ಲಿ ತ್ಯಾಜ್ಯ ಕಂಡುಬಂತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ