
ಮುಂಡರಗಿ| ಉತ್ತರ ಕರ್ನಾಟಕದಲ್ಲಿ ದೊಡ್ಡಾಟ ಕಲೆಗೆ ಸಿಗದ ಮಹತ್ವ: ಎ.ಬಿ.ಹಿರೇಮಠ
ಮುಂಡರಗಿ: ‘ದಕ್ಷಿಣ ಕರ್ನಾಟಕದ ರಂಗಾಸಕ್ತರು ಯಕ್ಷಗಾನಕ್ಕೆ ನೀಡುವಷ್ಟು ಮಹತ್ವವನ್ನು ಉತ್ತರ ಕರ್ನಾಟಕದ ಕಲಾಭಿಮಾನಿಗಳು ದೊಡ್ಡಾಟಕ್ಕೆ ನೀಡಲಿಲ್ಲ. ಹೀಗಾಗಿ ಯಕ್ಷಗಾನಕ್ಕೆ ದೊರೆತಷ್ಟು ಮಹತ್ವ ದೊಡ್ಡಾಟಕ್ಕೆ ದೊರೆಯದಿದ್ದದ್ದು ತುಂಬಾ ದುರಾದೃಷ್ಟ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎ.ಬಿ.ಹಿರೇಮಠ ವಿಷಾದಿಸಿದರು.
ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬದುಕು-ಬರಹ ಕುರಿತು ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಶಿಕ್ಷಕ ನಿಂಗು ಸೊಲಗಿ, ಮೂಲತಃ ಮುಂಡರಗಿಯವರಾದ ಲಿಂ.ಗಂಗಾಧರಸ್ವಾಮಿ ಅವರು ಪದವಿ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ರಂಗಾಸಕ್ತಿಯನ್ನು ಮೈಗೂಡಿಸಿಕೊಂಡರು. ರಂಗಾಯಣ ಸೇರಿದಂತೆ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿ ರಂಗಭೂಮಿಯನ್ನು ಶ್ರೀಮಂತಗೊಳಿಸಿದರು ಎಂದರು.
ನಿವೃತ್ತ ಉಪನ್ಯಾಸಕ ಆರ್.ಎಲ್.ಪೊಲೀಸ್‌ಪಾಟೀಲ, ಸರಳತೆಗೆ ಹೆಸರಾಗಿದ್ದ ಲಿಂ.ಗಂಗಾಧರಯ್ಯನವರು ರಂಗಭೂಮಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ನಾಡಿನಾದ್ಯಂತ ಮುಂಡರಗಿಯ ಕೀರ್ತಿಯನ್ನು ಹೆಚ್ಚಿಸಿದರು ಎಂದರು.
ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಅಬ್ಬಿಗೇರಿ ಅವರು ಪುಟ್ಟರಾಜ ಗವಾಯಿ ಭಾವಚಿತ್ರವನ್ನು ಕಸಾಪ ಭವನಕ್ಕೆ ದೇಣಿಗೆ ನೀಡಿದರು. ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ವೀಣಾ ಪಾಟೀಲ, ಮಂಜುನಾಥ ಮುದೋಳ, ಎನ್.ಎನ್.ಕಲಕೇರಿ ಇದ್ದರು.