
ಮಹಿಳಾ ಸಂಘಟನೆಯಿಂದ ಸಮಾಜ ಬದಲಾವಣೆ: ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ
ಅಫಜಲಪುರ: ‘ಪುರುಷರಂತೆ ಮಹಿಳೆಯರು ಕೂಡ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗುವುದರಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯುವುದರ ಜತೆಗೆ ಅನ್ಯಾಯದ ವಿರುದ್ಧ ಹೋರಾಡಿ ಗೆಲುವು ಸಾಧಿಸಬಹುದು’ ಎಂದು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ತಿಳಿಸಿದರು.
ಪಟ್ಟಣದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ವತಿಯಿಂದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶ್ರೇಷ್ಠ ಸೇವಾ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಒಬ್ಬ ಮಹಿಳೆ ಬದಲಾದರೆ ಒಂದು ಕುಟುಂಬ ಬದಲಾಗುತ್ತದೆ, ಅದೇ ಒಂದು ಮಹಿಳಾ ಸಂಘಟನೆ ಶ್ರಮಿಸಿದರೆ ಇಡೀ ಸಮಾಜವೇ ಬದಲಾಗುತ್ತದೆ. ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಇಂತಹ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶ್ರೇಷ್ಠ ಸೇವಾ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷೆ ರೇಣುಕಾ ಡಾಂಗೆ ಮಾತನಾಡಿ, ‘ಸರ್ಕಾರಿ ನೌಕರರ ಮಹಿಳಾ ಸಂಘಟನೆಯಿಂದ ನೂರಾರು ಮಹಿಳೆಯರು ನಿರ್ಭಯವಾಗಿ ಕೆಲಸ ಮಾಡುವಂತೆ ಆಗಿದೆ. ಹೀಗಾಗಿ ವೈಯಕ್ತಿಕವಾಗಿ ಹೋರಾಡುವುದರ ಬದಲು ಸಾಮೂಹಿಕವಾಗಿ ಸಂಘಟನೆಯಲ್ಲಿ ತೊಡಗಿದಾಗ ಗೆಲುವು ಸಿಕ್ಕೇ ಸಿಗುತ್ತದೆ’ ಎಂದು ತಿಳಿಸಿದರು.
25 ಶಿಕ್ಷಕರಿಗೆ ಶ್ರೇಷ್ಠ ಸೇವಾ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಭಾ ಪ್ರಿಯದರ್ಶಿನಿ, ನಗರ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಂಜೀವಕುಮಾರ ಬಗಲಿ, ಶೋಭರಾಜ್ ಮ್ಯಾಳೇಸಿ, ಶ್ರೀಕಾಂತ ಕಾಚಾಪುರ, ಕಸಾಪ ತಾಲ್ಲೂಕು ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಸುಜಾತಾ ಕಾಂಬಳೆ, ನೀಲಮ್ಮ ತಾವರಖೇಡ, ಸಾವಿತ್ರಿ ನಂದಿ, ರಾಧಿಕಾ ಶೇರಿಕಾರ, ನೌಕರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.