ತಿಪಟೂರು: ಎಂಟು ದಶಕದ ಎಪಿಎಂಸಿಗೆ ಬೇಕಿದೆ ಆಧುನಿಕ ಸ್ಪರ್ಶ

ತಿಪಟೂರು: ಎಂಟು ದಶಕದ ಎಪಿಎಂಸಿಗೆ ಬೇಕಿದೆ ಆಧುನಿಕ ಸ್ಪರ್ಶ

ತಿಪಟೂರು: ಎಂಟು ದಶಕದ ಎಪಿಎಂಸಿಗೆ ಬೇಕಿದೆ ಆಧುನಿಕ ಸ್ಪರ್ಶ

ತಿಪಟೂರು: 1948ರಲ್ಲಿ ಸ್ಥಾಪನೆಯಾದ ತಿಪಟೂರು ಎಪಿಎಂಸಿ 61.20 ಎಕರೆ ವಿಸ್ತೀರ್ಣ ಹೊಂದಿದ್ದು, ಎಂಟು ದಶಕಗಳಿಂದ ದೇಶದ ಪ್ರಮುಖ ಕೊಬ್ಬರಿ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಎಪಿಎಂಸಿಗೆ ಮತ್ತಷ್ಟು ಸೌಲಭ್ಯ ಒದಗಿಸುವ ಮೂಲಕ ಮೇಲ್ದರ್ಜೆಗೇರಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ರೈತರು ಕೊಬ್ಬರಿಯನ್ನು ತಿಪಟೂರು ಮಾರುಕಟ್ಟೆಗೆ ತರುತ್ತಾರೆ. ಇಲ್ಲಿಂದ ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಕೊಬ್ಬರಿ ರವಾನೆಯಾಗುತ್ತಿದೆ. ಇಲ್ಲಿಗೆ ಆವಕವಾಗುವ ಶೇ 70ರಷ್ಟು ಕೊಬ್ಬರಿ ಉತ್ತರ ಭಾರತದ ಮಾರುಕಟ್ಟೆಗಳಿಗೆ ರಫ್ತಾಗುವುದರಿಂದ ಇದು ಕೊಬ್ಬರಿ ವಾಣಿಜ್ಯದ ಪ್ರಮುಖ ಕೊಂಡಿಯಾಗಿ ಬೆಳೆದಿದೆ.

ತಿಪಟೂರು ಎಪಿಎಂಸಿಯಲ್ಲಿ 2014ರ ಫೆ.22ರಿಂದ ಕೊಬ್ಬರಿ ಆನ್‌ಲೈನ್ ಟೆಂಡರ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಮಾರಾಟದಲ್ಲಿ ಪಾರದರ್ಶಕತೆ, ಸ್ಪರ್ಧಾತ್ಮಕತೆ ಹೆಚ್ಚಿದೆ.

ಪ್ರತಿ ಸೋಮವಾರ ಮತ್ತು ಗುರುವಾರ ಕೊಬ್ಬರಿ ಹರಾಜು ನಡೆಯುತ್ತಿದ್ದು, ಪ್ರತಿ ದಿನ ಕ್ಯಾಂಪ್ಕೋ ಸಂಸ್ಥೆಯ ಮೂಲಕ ಅಡಿಕೆ ಖರೀದಿ ಪ್ರಾರಂಭಿಸಲಾಗಿದೆ. ರೈತರು ತಮ್ಮ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ಪಡೆಯುವ ಅವಕಾಶ ಹೊಂದಿದ್ದಾರೆ. ಎಪಿಎಂಸಿ ವ್ಯಾಪ್ತಿಯಲ್ಲಿ 365 ಕಮಿಷನ್ ಅಂಗಡಿ, 420 ಟ್ರೇಡರ್‌ಗಳಿದ್ದು, 275 ಹಮಾಲಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ತಿಪಟೂರು ತೆಂಗು, ಕೊಬ್ಬರಿಗೆ ಜಿಐ ಟ್ಯಾಗ್‌ (ಭೌಗೋಳಿಕ ಸೂಚ್ಯಂಕ) ದೊರೆತರೆ ಪ್ರತ್ಯೇಕ ಬ್ರ‍್ಯಾಂಡ್ ಗುರುತು ಸಿಗಲಿದ್ದು ಗುಣಮಟ್ಟದ ಆಧಾರದ ಮೇಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಲಿದೆ.

ಮಾರುಕಟ್ಟೆ ಪ್ರಾಂಗಣದಲ್ಲಿ ಆಡಳಿತಾತ್ಮಕ ಕಾರ್ಯಗಳಿಗೆ ಅಗತ್ಯವಿರುವ ಆಡಳಿತ ಭವನ ನಿರ್ಮಾಣಕ್ಕೆ ಜುಲೈ 5ರಂದು ಭೂಮಿಪೂಜೆ ನಡೆದಿದ್ದು, ₹4.90 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದರೊಂದಿಗೆ ಆನ್‌ಲೈನ್ ಟೆಂಡರ್ ವ್ಯವಸ್ಥೆಗೆ ಸಂಬಂಧಿಸಿದ ಕಟ್ಟಡ ಕಾಮಗಾರಿ ಆರಂಭವಾಗಿದೆ. ಕುಡಿಯುವ ನೀರು, ಶೌಚಾಲಯ ಹಾಗೂ ಆವರಣದ ಸಿಮೆಂಟ್ ರಸ್ತೆಗಳ ಬಲವರ್ಧನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ.

ತಿಪಟೂರು ಎಪಿಎಂಸಿ ವ್ಯಾಪ್ತಿಯಲ್ಲಿ ಕರಡಾಳು, ಕಿಬ್ಬನಹಳ್ಳಿ ಕ್ರಾಸ್ ಹಾಗೂ ಕೊನೇಹಳ್ಳಿ ಸೇರಿದಂತೆ ಉಪ ಮಾರುಕಟ್ಟೆಗಳಿದ್ದು ಗ್ರಾಮೀಣ ಭಾಗದ ರೈತರು ದೂರದ ಪ್ರಯಾಣದ ತೊಂದರೆ ಇಲ್ಲದೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗಿದೆ.

ತಿಪಟೂರು ಕೊಬ್ಬರಿ ವ್ಯಾಪಾರದ ಕೇಂದ್ರವಷ್ಟೇ ಅಲ್ಲದೇ; ತೆಂಗು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ. ತೆಂಗಿನಕಾಯಿ, ಕೊಬ್ಬರಿ, ತೆಂಗಿನೆಣ್ಣೆ, ತೆಂಗಿನ ನಾರು ಹಾಗೂ ಇತರ ಉಪ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಉತ್ತೇಜನ ನೀಡಲು ತೆಂಗು ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಾದರೆ ರೈತರಿಗೆ ಹೊಸ ಮಾರುಕಟ್ಟೆ ಹಾಗೂ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂಬುದು ರೈತ ಮುಖಂಡರ ಅಭಿಪ್ರಾಯ.

ಅದೇ ರೀತಿ ಸಂಶೋಧನೆ, ಹೊಸ ತಳಿಗಳ ಅಭಿವೃದ್ಧಿ, ರೋಗ ನಿಯಂತ್ರಣ, ಉತ್ಪಾದಕತೆ ಹೆಚ್ಚಳ ಹಾಗೂ ಮೌಲ್ಯವರ್ಧನೆಗೆ ತೆಂಗು ಸಂಶೋಧನಾ ಕೇಂದ್ರ ಸ್ಥಾಪನೆಯೂ ಅತ್ಯಗತ್ಯವಾಗಿದೆ ಎಂದು ಒತ್ತಾಯಿಸಿದ್ದಾರೆ.

ಕೊಬ್ಬರಿ ಖರೀದಿ, ಮಾರಾಟ ಕೇಂದ್ರವಾಗಿ ಉಳಿಯದೇ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ಸಂಗ್ರಹ, ಬ್ರ್ಯಾಂಡಿಂಗ್‌, ರಫ್ತು ಎಲ್ಲವನ್ನೂ ಒಂದೇ ಕಡೆ ಹೊಂದಿರುವ ಸಮಗ್ರ ಕೊಬ್ಬರಿ ವಾಣಿಜ್ಯ ಕೇಂದ್ರವಾಗಿ ತಿಪಟೂರನ್ನು ರೂಪಿಸಿದರೆ, ರೈತರ ಆದಾಯ ಹೆಚ್ಚಿಸುವುದರ ಜತೆಗೆ ದೇಶದ ಕೊಬ್ಬರಿ ಉದ್ಯಮಕ್ಕೂ ಹೊಸ ದಿಕ್ಕು ನೀಡಬಹುದು ಎಂಬುದು ತಜ್ಞರ ಅಭಿಮತ.

ಎಪಿಎಂಸಿಯ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು 34 ಸಿಬ್ಬಂದಿ ಅಗತ್ಯವಿದೆ. ಆದರೆ, 28 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಕಾರ್ಯದರ್ಶಿ, ಸಹಕಾರ್ಯದರ್ಶಿ ಹಾಗೂ ನಾಲ್ವರು ಅಧೀಕ್ಷಕರು ಸೇರಿದಂತೆ ಸೀಮಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತೊಂದೆಡೆ ಚಾಲಕರು, ಡೇಟಾ ಎಂಟ್ರಿ ಆಪರೇಟರ್‌ಗಳು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸುಮಾರು 38 ಮಂದಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ವಹಿವಾಟಿನ ಪ್ರಮಾಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಿಬ್ಬಂದಿ ಕೊರತೆ ನೀಗಿಸುವುದು ಕೂಡ ಅತ್ಯಂತ ಅಗತ್ಯವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳು

l ಆಧುನಿಕ ರೈತಭವನ ನಿರ್ಮಾಣ

l ಬೃಹತ್ ಶೀತಲಗೃಹ ಹಾಗೂ ವೈಜ್ಞಾನಿಕ ದಾಸ್ತಾನು ಕೇಂದ್ರ

l ತೆಂಗು ಟೆಕ್ನಾಲಜಿ ಪಾರ್ಕ್ ಸ್ಥಾಪನೆ

l ತೆಂಗು ಸಂಶೋಧನಾ ಕೇಂದ್ರ ಸ್ಥಾಪನೆ

l ಎಪಿಎಂಸಿಯ ಖಾಲಿ ಹುದ್ದೆಗಳ ಭರ್ತಿ

l ಉಪ ಮಾರುಕಟ್ಟೆಗಳಿಗೆ ಹೆಚ್ಚಿನ ಮೂಲಸೌಕರ್ಯ

l ‘ತಿಪಟೂರು ಉಂಡೆಕೊಬ್ಬರಿ’ಗೆ ಜಿಐ ಟ್ಯಾಗ್‌ ಮಾನ್ಯತೆ

l ಕೊಬ್ಬರಿಗೆ ದೇಶೀಯ–ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260901-17-1573882282

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ