
ಹರಿಹರ: ಭದ್ರಾ ಕಾಲುವೆಗೆ ನೀರು ಹರಿಸಲು ಸಚಿವರಿಗೆ ಮನವಿ
ಹರಿಹರ: ಭದ್ರಾ ಬಲದಂಡೆ ಕಾಲುವೆಗೆ ತುರ್ತಾಗಿ ನೀರು ಹರಿಸುವಂತೆ ಆಗ್ರಹಿಸಿ ಶಾಸಕ ಬಿ.ಪಿ.ಹರೀಶ್ ಅವರು ಭದ್ರಾ ಜಲಾಶಯ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಬುಧವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
‘ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಟ್ಟಿರುವ ಹರಿಹರ ತಾಲ್ಲೂಕು ಸೇರಿ ದಾವಣಗೆರೆ ಜಿಲ್ಲೆಯ ಹೊಲ, ಗದ್ದೆ, ತೋಟಗಳಲ್ಲಿ ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಕ್ಷೇತ್ರದ ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಜಿಲ್ಲೆಯ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ’ ಎಂದು ಸಚಿವರಿಗೆ ಮನವರಿಕೆ ಮಾಡಿದರು.
‘ರೈತರು ತಮ್ಮ ಜೀವನೋಪಾಯಕ್ಕಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದು ಅವುಗಳನ್ನು ಉಳಿಸಿಕೊಳ್ಳಲು ಭದ್ರಾ ನೀರಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ವಿಳಂಬವಾದರೆ ಈಗಾಗಲೇ ಬೆಳೆಗಳಿಗೆ ಆಗಿರುವ ಹಾನಿ ಮತ್ತಷ್ಟು ಹೆಚ್ಚಾಗಿ, ರೈತರು ಭಾರಿ ಆರ್ಥಿಕ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ವಿಳಂಬ ಮಾಡದೆ, ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಅಚ್ಚುಕಟ್ಟು ಪ್ರದೇಶದ ಅಗತ್ಯತೆ ಹಾಗೂ ಜಲಾಶಯದ ನಿಯಮಾನುಸಾರ ಬಲದಂಡೆ ಕಾಲುವೆಗೆ ತಕ್ಷಣ ನೀರು ಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಅಲ್ಲದೆ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಸಂಬಂಧಪಟ್ಟ ನೀರಾವರಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ನೀರು ಬಿಡುಗಡೆಗೆ ಸಂಬಂಧಿಸಿದ ಸ್ಪಷ್ಟ ಕ್ರಮ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಸಚಿವರನ್ನು ಒತ್ತಾಯಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.