
ಸಾಹಿತಿ ಶಾ.ಮಂ. ಕೃಷ್ಣರಾಯರಿಗೆ ‘ಆದಿಕವಿ’, ಸಹನಾಗೆ ‘ವಾಗ್ದೇವಿ’ ಪುರಸ್ಕಾರ
ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ನೀಡುವ ‘ಆದಿಕವಿ ಪುರಸ್ಕಾರ’ಕ್ಕೆ ಸಾಹಿತಿ ಶಾ. ಮಂ. ಕೃಷ್ಣರಾಯ ಹಾಗೂ ‘ವಾಗ್ದೇವಿ ಪುರಸ್ಕಾರ’ಕ್ಕೆ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗಳು ತಲಾ ₹1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿವೆ.
ಬೆಳಗಾವಿಯಲ್ಲಿ ಜನಿಸಿದ ಶಾ.ಮಂ. ಕೃಷ್ಣರಾಯ ಅವರು ಬಹುಭಾಷಾ ವಿದ್ವಾಂಸರಾಗಿದ್ದು, ಅಧ್ಯಾಪಕ, ಕೃತಿ ಸಂಪಾದಕ, ಪತ್ರಕರ್ತ ಹಾಗೂ ಸಾಹಿತಿಯಾಗಿ ದೀರ್ಘಕಾಲದಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಗೋವೆಯ ನೆಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಹತ್ತ್ವದ ಕೊಡುಗೆ ನೀಡಿದ್ದಾರೆ. ಅವರ 128 ಕೃತಿಗಳು ಪ್ರಕಟವಾಗಿವೆ ಎಂದು ಅಭಾಸಾಪ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಎಸ್.ಜಿ. ಕೋಟಿ ತಿಳಿಸಿದ್ದಾರೆ.
ಮೈಸೂರಿನ ಸಹನಾ ಅವರು, ಪ್ರಸ್ತುತ ಬೆಂಗಳೂರಿನಲ್ಲಿ ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂಕಣ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು, ನಂತರ ಕಾದಂಬರಿ ಪ್ರಕಾರದಲ್ಲಿ ತಮ್ಮ ಸರ್ಜನಶೀಲತೆಯನ್ನು ವಿಸ್ತರಿಸಿಕೊಂಡರು. ಅವರ ಐದು ಕಾದಂಬರಿಗಳು ಪ್ರಕಟಗೊಂಡಿವೆ ಎಂದು ಹೇಳಿದ್ದಾರೆ.
ನವೆಂಬರ್ 15 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಾಹಿತಿ ಬಾಬು ಕೃಷ್ಣಮೂರ್ತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
‘ಆದಿಕವಿ ಪುರಸ್ಕಾರ'ದ ಪ್ರಾಯೋಜಕತ್ವವನ್ನು ವಹಿಸುತ್ತಿರುವ ನಿವೃತ್ತ ಇಸ್ರೋ ವಿಜ್ಞಾನಿ ಹರೀಶ್, 'ವಾಗ್ದೇವಿ ಪುರಸ್ಕಾರ'ದ ಪ್ರಾಯೋಜಕತ್ವವನ್ನು ವಹಿಸುತ್ತಿರುವ ಉದ್ಯಮಿ ಜಯರಾಮ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.