
ತುಮರಿ: ನಾಲ್ವರು ವಿದ್ಯಾರ್ಥಿಗಳನ್ನು ಮನ ಬಂದಂತೆ ಥಳಿಸಿದ ಅತಿಥಿ ಶಿಕ್ಷಕಿ
ತುಮರಿ: ಸಮೀಪದ ಕಿರುವಾಸೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಮೇಲೆ ಅತಿಥಿ ಶಿಕ್ಷಕಿಯೊಬ್ಬರು ಮನ ಬಂದಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ.
ಪರೀಕ್ಷೆಯಲ್ಲಿ ಸರಿಯಾಗಿ ಉತ್ತರ ಬರೆದಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಅವರು ವಿದ್ಯಾರ್ಥಿಗಳ ಥಳಿಸಿದ್ದಾರೆ ಎನ್ನಲಾಗಿದೆ. ಮೂರು ಮತ್ತು ನಾಲ್ಕನೇ ತರಗತಿಯ ತರುಣ್, ಆರ್ಯ, ಆದಿತ್ಯ ಹಾಗೂ ಪೃಥ್ವಿ ಥಳಿತಕ್ಕೆ ಒಳಗಾದ ವಿದ್ಯಾರ್ಥಿಗಳು. ಬೆನ್ನಿನ ಮೇಲೆ ಬಾಸುಂಡೆ ಕಂಡು ಬಂದ ಹಿನ್ನೆಲೆಯಲ್ಲಿ ಪೋಷಕರು ವಿಚಾರಿಸಿದಾಗ ಪರೀಕ್ಷೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಉತ್ತರ ಬರೆದಿಲ್ಲ ಎಂದು ಶಿಕ್ಷಕಿ ಹೊಡೆದಿದ್ದಾರೆ ಎಂದು ಪೋಷಕರ ಬಳಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಗುರುವಾರ ತಡರಾತ್ರಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಭೇಟಿ ನೀಡಿ ಪರಿಶೀಲಿದರು. ಥಳಿತಕ್ಕೆ ಒಳಗಾದ ವಿದ್ಯಾರ್ಥಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಈಗಾಗಲೇ ಅತಿಥಿ ಶಿಕ್ಷಕಿಯನ್ನು ಶಾಲೆಯಿಂದ ಬಿಡುಗಡೆ ಗೊಳಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಡಿಡಿಪಿಐಗೆ ವರದಿ ಸಲ್ಲಿಸಲಾಗುವುದು’ ಎಂದು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಧಳಿಸಿದ್ದು ಖಂಡಿಸಿದ ಸಾರ್ವಜನಿಕರು, ಶಿಕ್ಷಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ಪೋಷಕರು ದೂರು ನೀಡಿಲ್ಲ ಎಂದು ಕಾರ್ಗಲ್ ಪಿಎಸ್‌ಐ ತಿಳಿಸಿದ್ದಾರೆ.