
ಸೆಮಿಫೈನಲ್‌ಗೆ ಭಾರತದ ಸಾತ್ವಿಕ್– ಚಿರಾಗ್ ಜೋಡಿ; ಶ್ರೀಕಾಂತ್ ಹೊರಕ್ಕೆ
ಶೆನ್‌ಝೆನ್ (ಚೀನಾ): ಭಾರತದ ಅಗ್ರ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಹೋರಾಟದ ಜಯಗಳಿಸಿ ಸೆಮಿಫೈನಲ್ ತಲುಪಿದರು. ಆದರೆ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಕಣದಲ್ಲಿ ಉಳಿದಿದ್ದ ಭಾರತ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಹೊರಬಿದ್ದರು.
ನಾಲ್ಕನೇ ಶ್ರೇಯಾಂಕದ ಸಾತ್ವಿಕ್– ಚಿರಾಗ್ ಜೋಡಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 21–13, 16–21, 21–18 ರಿಂದ ಡೆನ್ಮಾರ್ಕ್‌ನ ಕಿಮ್ ಅಸ್ಟ್ರುಪ್– ಆ್ಯಂಡರ್ಸ್ ಸ್ಕಾರುಪ್ ರಾಸ್ಮುಸ್ಸೇನ್ ಜೋಡಿಯನ್ನು ಸೋಲಿಸಲು 70 ನಿಮಿಷ ಹೋರಾಡಬೇಕಾಯಿತು.
ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರ ಶ್ರೀಕಾಂತ್ 16–21, 16–21 ರಿಂದ 25ನೇ ಕ್ರಮಾಂಕದ ಲೀ ಚಿಯುಕ್ ಯಿಯು (ಹಾಂಗ್‌ಕಾಂಗ್) ಅವರಿಗೆ ಸೋತರು. 33 ವರ್ಷ ವಯಸ್ಸಿನ ಭಾರತದ ಆಟಗಾರ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಒಂಬತ್ತನೇ ಕ್ರಮಾಂಕದ ವಿಕ್ಟರ್ ಲಾಯ್ (ಕೆನಡಾ) ಅವರಿಗೆ ಆಘಾತ ನೀಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-51-959153778