ಬಿಡದಿ ಟೌನ್‌ಶಿಪ್: ಮಳೆ ಲೆಕ್ಕಿಸದೆ ರೈತರಿಂದ ಅಹೋರಾತ್ರಿ ಧರಣಿ

ಬಿಡದಿ ಟೌನ್‌ಶಿಪ್: ಮಳೆ ಲೆಕ್ಕಿಸದೆ ರೈತರಿಂದ ಅಹೋರಾತ್ರಿ ಧರಣಿ

ಬಿಡದಿ ಟೌನ್‌ಶಿಪ್: ಮಳೆ ಲೆಕ್ಕಿಸದೆ ರೈತರಿಂದ ಅಹೋರಾತ್ರಿ ಧರಣಿ

ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ, ಹೋಬಳಿಯ ಬೈರಮಂಗಲ ವೃತ್ತದಲ್ಲಿ ಕಳೆದ 18 ತಿಂಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರ ಹೋರಾಟ ಸೋಮವಾರ ಉಪವಾಸ ಧರಣಿಗೆ ತಿರುಗಿದೆ.

ಸರ್ಕಾರ ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ನಡೆಸುತ್ತಿರುವ ಸಂದರ್ಭದಲ್ಲೇ ರೈತರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ.

ಬೆಳಿಗ್ಗೆ ತಮ್ಮ ಜಾನುವಾರು, ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳೊಂದಿಗೆ ವೃತ್ತದಲ್ಲಿ ಜಮಾಯಿಸಿದ ರೈತರು, ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ಧರಣಿ ಆರಂಭಿಸಿದರು. ಕೆಲ ಹೊತ್ತಿನ ಬಳಿಕ ರಸ್ತೆಯಲ್ಲೇ ಪೆಂಡಾಲ್ ಹಾಕಲು ಹೋರಾಟಗಾರರು ಮುಂದಾದಾಗ ಪೊಲೀಸರು ತಡೆದರು.

ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಹಾಗಾಗಿ, ರಸ್ತೆಯಲ್ಲಿ ಪೆಂಡಾಲ್ ಹಾಕದೆ ಧರಣಿ ಸ್ಥಳದಲ್ಲೇ ಹೋರಾಟ ಮುಂದುವರಿಸಿ ಎಂದು ಪೊಲೀಸರು ರೈತರ ಮನವೊಲಿಸಲು ಯತ್ನಿಸಿದರು. ಅದಕ್ಕೆ ಬಗ್ಗದ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕಡೆಗೆ ಹೋರಾಟಗಾರರು ಬಿಸಿಲು ಲೆಕ್ಕಿಸದೆ ರಸ್ತೆಯಲ್ಲೇ ಕುಳಿತರು.

ಪೊಲೀಸರು, ಸರ್ಕಾರ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ರೈತರು ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ರೈತರಿಗೆ ಕೊಟ್ಟ ಮಾತಿಗೆ ತಪ್ಪಿದ್ದು, ಭೂ ಸ್ವಾಧೀನ ಕೈ ಬಿಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಕುಸಿದ ರೈತ: ಇದೇ ಸಂದರ್ಭದಲ್ಲಿ ರೈತರೊಬ್ಬರು ತಲೆ ಸುತ್ತಿ ಕುಸಿದರು. ಕೂಡಲೇ ಸ್ಥಳಕ್ಕೆ ಬಂದ ಸಮೀಪದ ಆಸ್ಪತ್ರೆಯ ವೈದ್ಯರು ಅವರನ್ನು ತಪಾಸಣೆ ಮಾಡಿ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರು. ಕೆಲ ಹೊತ್ತಿನ ಬಳಿಕ ಹೋರಾಟದಲ್ಲಿ ಸುಧಾರಿಸಿಕೊಂಡರು. ರೈತರ ಹೋರಾಟ ರಾತ್ರಿವರೆಗೆ ಮುಂದುವರಿಯಿತು. ಮಧ್ಯೆ ಮಳೆ ಬಂದಾಗ ರೈತರು ಪಕ್ಕದ ಕಟ್ಟಡಗಳಲ್ಲಿ ಆಶ್ರಯ ಪಡೆದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಮಿತಿಯ ಹೊಸೂರು ಪ್ರಕಾಶ್, ‘ಟೌನ್‌ಶಿಪ್ ವಿರುದ್ಧ ಒಂದೂವರೆ ವರ್ಷದ ನಿರಂತರ ಹೋರಾಟದಿಂದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜುಲೈ 14ರಂದು ರೈತ ಮುಖಂಡರ ಸಭೆ ಕರೆದು ಚರ್ಚಿಸಿದ್ದರು. ಜಮೀನು ಕೊಡಲು ಒಪ್ಪದವರ ಭೂಮಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ’ ಎಂದು ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ್, ‘ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿ ವಸ್ತುಸ್ಥಿತಿ ಅಧ್ಯಯನ ಮಾಡುವುದಕ್ಕಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿ, ಒಂದು ತಿಂಗಳಲ್ಲಿ ವರದಿ ಪಡೆಯಲಾಗುವುದು ಎಂದು ಹೇಳಿದ್ದರು. ಆದರೆ, ತಿಂಗಳಾದರೂ ಸಮಿತಿಯು ಇದುವರೆಗೆ ಯೋಜನಾ ಪ್ರದೇಶಕ್ಕೆ ಬಂದಿಲ್ಲ. ಇದರೊಂದಿಗೆ ಮುಖ್ಯಮಂತ್ರಿ ಕೊಟ್ಟ ಮಾತು ತಪ್ಪಿದ್ದಾರೆ. ಹಾಗಾಗಿ, ಯೋಜನೆ ಬೇಡ ಎನ್ನುವವರ ಭೂಮಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ರೈತರಿಗೆ ಗ್ಯಾರಂಟಿ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

ರೈತ ಸಂಘದ ಉಪಾಧ್ಯಕ್ಷ ಆಣೆಗೆರೆ ಕೆ.ಮಲ್ಲಯ್ಯ, ಕುಮಾರಸ್ವಾಮಿ, ಹೋರಾಟ ಸಮಿತಿಯ ಪದಾಧಿಕಾರಿಗಳು ಧರಣಿಯಲ್ಲಿದ್ದರು.

ರೈತರ ಧರಣಿಯಲ್ಲಿ ಪಾಲ್ಗೊಂಡ ಕೇರಳದ ಸಿಪಿಐ(ಎಂ) ಪಕ್ಷದ ಮಾಜಿ ಶಾಸಕ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಾಷ್ಟ್ರೀಯ ಕಾರ್ಯರ್ಶಿ ಪಿ.ಕೃಷ್ಣಪ್ರಸಾದ್ ಪಾಲ್ಗೊಂಡು ಟೌನ್‌ಶಿಪ್ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ‘ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿರುವ ರೈತರಿಗೆ ದೇಶದಾದ್ಯಂತ ಬೆಂಬಲ ಸಂಗ್ರಹಿಸಲು ಎಸ್‌ಕೆಎಂ ಶ್ರಮಿಸಲಿದೆ. ರಾಜ್ಯ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಯನ್ನು ಉಲ್ಲಂಘಿಸಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸಲು ಮುಂದಾಗಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ– 1987ರಡಿ ಭೂ ಸ್ವಾಧೀನ ಮಾಡಲಾಗುತ್ತಿದೆ. ಇದು ನಗರಕ್ಕೆ ಸಂಬಂಧಿಸಿದ ಕಾಯ್ದೆಯಾಗಿದೆ. ಆದರೆ ಗ್ರಾಮಗಳ ಕೃಷಿ ಭೂಮಿ ಸ್ವಾಧೀನಕ್ಕೆ ಕಾಯ್ದೆ ಅನ್ವಯಿಸಿರುವುದು ಕಾನೂನುಬಾಹಿರವಾಗಿದೆ’ ಎಂದು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ: ಎಚ್‌ಡಿಕೆ ಕಿಡಿ

ನವದೆಹಲಿ: ಬಿಡದಿಯ ಬೈರಮಂಗಲದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ‘ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ’ ಎಂದು ಗುಡುಗಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ‘ಕರ್ನಾಟಕದಲ್ಲಿ ನಾಗರಿಕ ಸರ್ಕಾರವಿದೆಯೋ ಅಥವಾ ರಾಕ್ಷಸ ಸರ್ಕಾರ ಇದೆಯೋ?’ ಎಂದು ಪ್ರಶ್ನಿಸಿದ್ದಾರೆ. ‘ತಮ್ಮ ಭೂಮಿ ಉಳಿಸಿಕೊಳ್ಳಲು ಬಿಡದಿಯ ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೆ ಬಲಪ್ರಯೋಗದಿಂದ ಅವರನ್ನು ಹತ್ತಿಕ್ಕಲೆತ್ನಿಸಿದ ದುಷ್ಪ್ರಯತ್ನ ಖಂಡನಾರ್ಹ. ಬೈರಮಂಗಲದಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ ದೈವದ್ರೋಹಕ್ಕೂ ಮೀರಿದ್ದು’ ಎಂದು ಸಚಿವರು ಕಿಡಿಕಾರಿದ್ದಾರೆ. ‘ಧರಣಿ ಕೂರಲು ಪೆಂಡಾಲ್ ಹಾಕಲೆತ್ನಿಸಿದಾಗ ಅದನ್ನು ಕಿತ್ತುಕೊಂಡು ಅನ್ನದಾತರನ್ನು ಉರಿಬಿಸಿಲಿನಲ್ಲೇ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯ. ಇಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಿಡದಿ ಭೂಮಿ ‘ರಿಯಲ್ ಎಸ್ಟೇಟ್ ವ್ಯಾಪಾರಿ’ಯ ಕಪಿಮುಷ್ಟಿಗೆ ಸಿಲುಕಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ